ನಿರ್ಭಯಾ ಕೇಸ್ ಅಪರಾಧಿಗಳಿಗೆ ಶಿಕ್ಷೆ ಜಾರಿ- ಗಮನಸೆಳೆಯಿತು ಪ್ರಧಾನಿ ಟ್ವೀಟ್

Modi 3 March 20
Published on

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ 2012ರ ಡಿಸೆಂಬರ್​ನಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಅಪರಾಧಿಗಳನ್ನು ಶುಕ್ರವಾರ ಮುಂಜಾನೆ 5.30ಕ್ಕೆ ಕೊನೆಗೂ ಗಲ್ಲಿಗೇರಿಸಲಾಗಿದೆ. ಕೊನೇಹಂತದ ತನಕವೂ ನ್ಯಾಯಾಂಗ ಹೋರಾಟ ನಡೆದಿದ್ದು, ಗಲ್ಲಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವಲ್ಲಿ ಅಪರಾಧಿಗಳು ವಿಫಲರಾದರು. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರೂ ಶುಕ್ರವಾರ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಟ್ವೀಟ್ ಸಂದೇಶದ ಸಾರ ಇಲ್ಲಿದೆ - ಈ ಪ್ರಕರಣದಲ್ಲಿ ನ್ಯಾಯ ಮೇಲುಗೈ ಸಾಧಿಸಿದೆ. ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಖಾತರಿ ಪಡಿಸುವ ಕೆಲಸ ಅತ್ಯಂತ ಮಹತ್ವದ್ದು. ನಮ್ಮ ನಾರಿ ಶಕ್ತಿ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದೆ. ಒಟ್ಟಾಗಿ, ಮಹಿಳಾ ಸಬಲೀಕರಣ ಕೇಂದ್ರೀಕೃತವಾದ ರಾಷ್ಟ್ರವನ್ನು ನಾವು ನಿರ್ಮಿಸಬೇಕು. ಅಲ್ಲಿ ಸಮಾನತೆ ಮತ್ತು ಅವಕಾಶಗಳಿಗೆ ಒತ್ತು ಸಿಗಲಿದೆ ಎಂದು ಪ್ರಧಾನಿ ಮೋದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದು, ಕಾನೂನು ಬದಲಾವಣೆಗೂ ಕಾರಣವಾದ ಪ್ರಕರಣವಾಗಿತ್ತು. ಏಳು ವರ್ಷಗಳ ಬಳಿಕ ಸಂತ್ರಸ್ತೆಗೆ ನ್ಯಾಯ ಸಿಕ್ಕಿದೆ. ಹೀಗಾಗಿ ಇದು ಇಂತಹ ಕೃತ್ಯ ಎಸಗುವವರಿಗೆ ಎಚ್ಚರಿಕೆಯ ಪಾಠ ಎಂಬ ಮಾತೂ ಕೇಳಿದ್ದು, ಮಹತ್ವದ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net