

ನವದೆಹಲಿ: ದೇಶದ ಆ್ಯಂಟಿ ಕರಪ್ಶನ್ ಓಂಬುಡ್ಸ್ಮನ್ ಲೋಕಪಾಲದ ಸದಸ್ಯರಾಗಿ ನೇಮಕವಾದ ಒಂಬತ್ತು ತಿಂಗಳ ನಂತರ ವೈಯಕ್ತಿಕ ಕಾರಣ ನೀಡಿ ಆ ಸ್ಥಾನಕ್ಕೆ ನ್ಯಾಯಮೂರ್ತಿ ದಿಲೀಪ್ ಬಿ ಭೋಸಲೆ ರಾಜೀನಾಮೆ ಸಲ್ಲಿಸಿದ್ದಾರೆ.
ಲೋಕಪಾಲದ ಜುಡಿಷಿಯಲ್ ಮೆಂಬರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಪತ್ರವನ್ನು ಜನವರಿ 6ರಂದು ಕಳುಹಿಸಲಾಗಿದ್ದು, ಇದು ಜನವರಿ 12ರಂದು ಅಂಗೀಕಾರವಾಗಲಿದೆ ಎಂದು ನ್ಯಾಯಮೂರ್ತಿ ಭೋಸಲೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಭೋಸಲೆ ಅವರು ಅಲಹಾಬಾದ್ ಹೈಕೋರ್ಟ್ನ ಮಾಜಿ ಮುಖ್ಯನ್ಯಾಯಮೂರ್ತಿಗಳು. ಲೋಕಪಾಲ ಚೇರ್ಮನ್ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಸ್ ಅವರಿಂದ 2019ರ ಮಾರ್ಚ್ 27ರಂದು ಲೋಕಪಾಲ ಸದಸ್ಯರಾಗಿ ಪ್ರಮಾಣ ಸ್ವೀಕರಿಸಿದ್ದರು. ಈ ಸದಸ್ಯತ್ವದ ಅವಧಿ 5 ವರ್ಷ ಅಥವಾ ವಯೋಮಿತಿ 70 ವರ್ಷವಾಗಿದ್ದು ಯಾವುದು ಮೊದಲೋ ಅದನ್ನು ಪರಿಗಣಿಸಲಾಗುತ್ತದೆ.
‘ಭೋಸಲೆ ಅವರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯವರಾಗಿದ್ದು, ನ್ಯಾಯಮೂರ್ತಿಯಾಗಿ ಬಾಂಬೆ, ಕರ್ನಾಟಕ ಹೈಕೋರ್ಟ್ಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಅಖಂಡ ಆಂಧ್ರಪ್ರದೇಶ ವಿಭಜನೆಯಾದ ಸಂದರ್ಭದಲ್ಲಿ ಅಲ್ಲಿನ ಹೈಕೋರ್ಟ್ ಆರ್ಫ್ ಜುಡಿಕೇಚರ್ ನ ಚೀಫ್ ಜಸ್ಟೀಸ್ ಆಗಿ 15 ತಿಂಗಳು ಕೆಲಸ ಮಾಡಿದ್ದರು.
ಲೋಕಪಾಲದಲ್ಲಿ 8 ಸದಸ್ಯರಿದ್ದಾರೆ. ಭೋಸಲೆ ಹೊರತಾಗಿ ವಿವಿಧ ಹೈಕೋರ್ಟ್ಗಳ ಮಾಜಿ ಮುಖ್ಯನ್ಯಾಯಮೂರ್ತಿಗಳಾದ ಪ್ರದೀಪ್ ಕುಮಾರ್ ಮೊಹಾಂತಿ, ಅಭಿಲಾಷಾ ಕುಮಾರಿ, ಅಜಯ್ ಕುಮಾರ್ ತ್ರಿಪಾಠಿ ಜುಡಿಷಿಯಲ್ ಮೆಂಬರ್ಸ್ ಆಗಿ ಇದ್ದಾರೆ. ಇದೇ ರೀತಿ, ಸಶಸ್ತ್ರ ಸೀಮಾ ಬಲದ ಮೊದಲ ಮಹಿಳಾ ಮುಖ್ಯಸ್ಥರಾದ ಅರ್ಚನಾ ರಾಮಸಮುದ್ರಂ, ಮಹಾರಾಷ್ಟ್ರದ ಮಾಜಿ ಮುಖ್ಯಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್, ಮಾಜಿ ಐಆರ್ಎಸ್ ಅಧಿಕಾರಿ ಮಹೇಂದರ್ ಸಿಂಗ್, ಗುಜರಾತ್ ಕೆಡರ್ನ ಮಾಜಿ ಐಎಎಸ್ ಅಧಿಕಾರಿ ಇಂದ್ರಜೀತ್ ಪ್ರಸಾದ್ ಗೌತಮ್ ಜುಡಿಷಿಯಲೇತರ ಸದಸ್ಯರಾಗಿದ್ದಾರೆ. (ಏಜೆನ್ಸೀಸ್)