

ಮಂಗಳೂರು: ಒಂದೆಡೆ ಆರೋಗ್ಯ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ, ಕೆಟ್ಟದಾಗಿ ವರ್ತಿಸುವವರು..ಮತ್ತೊಂದು ಕಡೆ ಕರೊನಾದಿಂದ ತಮ್ಮನ್ನು ಉಳಿಸಿಕೊಟ್ಟ ವೈದ್ಯರು, ನರ್ಸ್ಗಳಿಗೆ ಕಣ್ಣೀರಿನ ಕೃತಜ್ಞತೆ ಸಲ್ಲಿಸುವವರು..
ಬೆಂಗಳೂರಿನ ಪಾದರಾಯನಪುರದಲ್ಲಿ ಕ್ವಾರಂಟೈನ್ ವಿರೋಧಿಸಿ ಗಲಭೆ ನಡೆದಿದೆ. ಅತ್ತ ಮಂಗಳೂರಿನಲ್ಲಿ ಕರೊನಾ ವೈರಸ್ನಿಂದ ಮುಕ್ತರಾದವರೊಬ್ಬರು ತಮ್ಮ ಸಂಕಷ್ಟದ ಕ್ಷಣಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ. ವೈದ್ಯರು, ನರ್ಸ್ಗಳನ್ನು ಮನಸಾರೆ ಹೊಗಳಿ..ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ನನ್ನನ್ನು ನರಕದಿಂದ ಪಾರು ಮಾಡಿದರು. ಅಂಥವರಿಗೆ ನಾವೆಷ್ಟು ಸಹಕಾರ ಕೊಡಬೇಕು ಎಂಬುದನ್ನು ಯೋಚಿಸಿ ಎಂದು ಹೇಳಿದ್ದಾರೆ.
ನನ್ನೊಂದಿಗೆ ಪೊಲೀಸರು ಪ್ರೀತಿಯಿಂದ ಮಾತನಾಡಿದ್ದಾರೆ. ಆಸ್ಪತ್ರೆಯಲ್ಲೂ ಒಳ್ಳೆಯ ಚಿಕಿತ್ಸೆ ಕೊಟ್ಟಿದ್ದಾರೆ. ಏನೇ ಕಷ್ಟವಿದ್ದರೂ ಆ ಕ್ಷಣಕ್ಕೆ ಬಂದು ಸ್ಪಂದಿಸುತ್ತಿದ್ದರು. ನಾನು ಕರೊನಾದಿಂದ ಸಾಯಬಾರದು ಎಂದು ವೈದ್ಯಕೀಯ ಸಿಬ್ಬಂದಿ ಎಷ್ಟೆಲ್ಲ ಕಷ್ಟಪಟ್ಟರು. ಅಂದ ಮೇಲೆ ಇಡೀ ಭೂಮಿಯ ಮೇಲಿನ ಪ್ರತಿಯೊಬ್ಬ ಮನುಷ್ಯನೂ ಈ ನರಕದಿಂದ ಪಾರಾಗಲು ನಾವೆಲ್ಲರೂ ಎಷ್ಟು ಪ್ರಯತ್ನ ಪಡಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದನ್ನು ಈ ವಿಡಿಯೋದಲ್ಲಿ ಕೇಳಬಹುದು.
ಕರೊನಾಕ್ಕೆ ತುತ್ತಾಗಿದ್ದ ಇವರು ಕಳೆದ ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಇವರ ಭಾವುಕದ ಮಾತುಗಳ ವಿಡಿಯೋವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಕರೊನಾದಿಂದ ಗುಣಮುಖರಾಗಿರುವ ಈ ವ್ಯಕ್ತಿಯ ಮಾತನ್ನು ಕೇಳಿ...ವೈರಸ್ ವಿರುದ್ಧ ಹೋರಾಟದಲ್ಲಿ ವೈದ್ಯರು, ನರ್ಸ್ಗಳು, ಪೊಲೀಸ್ ಅಧಿಕಾರಿಗಳು, ಪ್ಯಾರಾಮೆಡಿಕಲ್ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.