

JSK Film: ತೆಲುಗು ನಟಿ ಅನುಪಮಾ ಪರಮೇಶ್ವರನ್ ಅಭಿನಯದ ಬಹುನಿರೀಕ್ಷಿತ ‘ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಚಿತ್ರ ಇದೀಗ ವಿವಾದ ಸುಳಿಯಲ್ಲಿ ಸಿಲುಕಿದೆ. ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದೇ ಆದರೂ ಬಿಡುಗಡೆಗೆ ಬೇಕಾದ ಅನುಮತಿಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ನಿರಾಕರಿಸಿದೆ. ಸದ್ಯ ಇದೇ ಆಕ್ರೋಶ, ಹೋರಾಟಕ್ಕೆ ಕಾರಣವಾಗಿದೆ.
ಚಿತ್ರದ ಶೀರ್ಷಿಕೆಯಲ್ಲಿರುವ 'ಜಾನಕಿ' ಹೆಸರೇ ಇದೀಗ ಹೊಸ ವಿವಾದಕ್ಕೆ ಅಣಿಯಾಗಿದೆ. ಈ ವಿಚಾರ ಸದ್ಯ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದು, ಚಿತ್ರದ ರಿಲೀಸ್ಗಾಗಿ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಜೆಎಸ್ಕೆ ನಿರ್ಮಾಪಕರು, ನಿರ್ದೇಶಕರು ಶೀರ್ಷಿಕೆ ಬದಲಾಯಿಸಿಕೊಳ್ಳಿ ಎಂದು ತಗಾದೆ ತೆಗೆದಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ವಿರುದ್ಧ ತೀವ್ರ ಅಸಮಾಧಾನ, ಆಕ್ರೋಶ ಹೊರಹಾಕಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಜೂ.30) ಕೇರಳದ ತಿರುವನಂತಪುರಂನಲ್ಲಿರುವ ಸಿಬಿಎಫ್‌ಸಿ ಕಚೇರಿಯ ಮುಂದೆ ಕೇರಳ ಚಲನಚಿತ್ರ ನಿರ್ಮಾಪಕರ ಒಕ್ಕೂಟವಾದ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (FEFKA) ಮತ್ತು ಮಲಯಾಳಂ ಚಲನಚಿತ್ರ ನಟರ ಸಂಘ (AMMA) ಧರಣಿ ನಡೆಸಿದೆ. ಇದು ವಿವಾದವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿರುವುದು ಮತ್ತಷ್ಟು ಸ್ಪಷ್ಟ. "ಟೈಟಲ್ನಲ್ಲಿ ಜಾನಕಿ ಹೆಸರನ್ನು ತೆಗೆಯಲು ಸಾಧ್ಯವಿಲ್ಲ. ಕಾರಣ, ಪಾತ್ರಧಾರಿಯ ಹೆಸರಿನ ಮೇಲೆಯೇ ಶೀರ್ಷಿಕೆ ಇಡಲಾಗಿದೆ. ಬದಲಿಸಿದರೆ, ಪಾತ್ರದ ಹೆಸರನ್ನೂ ಬದಲಿಸಬೇಕು. ಈಗ ಇದು ಅಸಾಧ್ಯ" ಎಂದು ಚಿತ್ರದ ನಿರ್ಮಾಪಕರು ವಾದಿಸಿದ್ದಾರೆ.
ಕೇರಳದ ಚಲನಚಿತ್ರ ನಿರ್ಮಾಪಕರ ಒಕ್ಕೂಟವಾದ ಫಿಲ್ಮ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಕೇರಳ (FEFKA), ಸೋಮವಾರ (ಜೂ.30) ತಿರುವನಂತಪುರಂನಲ್ಲಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇದಕ್ಕೆ ಕಾರಣ ಜೆಸ್ಕೆ: ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ ಚಿತ್ರದ ಶೀರ್ಷಿಕೆಯಲ್ಲಿರುವ ಜಾನಕಿ ಹೆಸರು. ಚಿತ್ರದಲ್ಲಿ ಹಿಂದೂ ದೇವತೆ ಸೀತೆಯನ್ನು ಉಲ್ಲೇಖಿಸುವ ಪಾತ್ರ ಜಾನಕಿಯ ಹೆಸರನ್ನು ಬದಲಾಯಿಸಬೇಕೆಂದು ಸಿಬಿಎಫ್‌ಸಿ ಒತ್ತಾಯಿಸಿದೆ. ಆದ್ರೆ, ಇದಕ್ಕೆ ಚಿತ್ರತಂಡ ಸುತಾರಾಮ್ ಒಪ್ಪಿಗೆ ನೀಡಿಲ್ಲ.
"ನಿರ್ದೇಶಕರ ಪ್ರಕಾರ, ಈ ಚಿತ್ರದಲ್ಲಿ ಯಾವುದೇ ನಿರ್ದಿಷ್ಟ ಧಾರ್ಮಿಕ ಉಲ್ಲೇಖ, ಡೈಲಾಗ್ ಅಥವಾ ಪ್ರಸ್ತಾಪಗಳಿಲ್ಲ. ಹೀಗಿದ್ದಮೇಲೆ ಯಾವ ಕಾರಣಕ್ಕೆ ಜಾನಕಿ ಹೆಸರನ್ನು ಬದಲಿಸಬೇಕು? ಈ ಹಿಂದೆ ಬಂದಿರುವ ಚಿತ್ರಗಳಲ್ಲಿ ಇದೇ ಟೈಟಲ್ ಇದ್ದಾಗ ಏನೂ ತೊಂದರೆ ಆಗಿಲ್ಲ. ಆದರೆ, ನಮ್ಮ ಚಿತ್ರಕ್ಕೇ ಇಂತಹ ಅಡಚಣೆ ಏಕೆ? ಅದೂ ಧಾರ್ಮಿಕ ವಿಚಾರಗಳು, ವಿಷಯಗಳ ಉಲ್ಲೇಖವಿಲ್ಲ ಎಂದರೂ. ಸಿಬಿಎಫ್ಸಿಯ ಈ ನಿರ್ಧಾರ ನಮಗೆ ತುಂಬ ಬೇಸರ ತಂದಿದೆ ಎಂದಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನಾವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಸಮಸ್ಯೆಯನ್ನು ಪರಿಹರಿಸುತ್ತೇವೆ" ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉನ್ನಿಕೃಷ್ಣನ್ ಹೇಳಿದ್ದಾರೆ.
‘ಜಾನಕಿ v/s ಸ್ಟೇಟ್ ಆಫ್ ಕೇರಳ’ ಚಿತ್ರವು ಯು/ಎ 13+ ಪ್ರಮಾಣಪತ್ರವನ್ನು ಪಡೆದು ಇದೇ ಜೂನ್ 27ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು. ಚಿತ್ರದ ಶೀರ್ಷಿಕೆಯಲ್ಲಿನ ಸಮಸ್ಯೆಗಳನ್ನು ಉಲ್ಲೇಖಿಸಿ ಮಂಡಳಿಯು ಪ್ರದರ್ಶನ ಅನುಮತಿಯನ್ನು ನಿರಾಕರಿಸಿದ್ದರಿಂದ ಇದೀಗ ಬಿಡುಗಡೆ ವಿಳಂಬವಾಗಿದೆ. ಸಿಬಿಎಫ್‌ಸಿ ನಡೆಯಿಂದ ಬೇಸತ್ತ ಚಿತ್ರದ ನಿರ್ಮಾಪಕ ಫಣೀಂದ್ರ ಕುಮಾರ್ ಮತ್ತು ನಿರ್ದೇಶಕ ಪ್ರವೀಣ್ ನಾರಾಯಣನ್, ವಿಚಾರವನ್ನು ಹೈಕೋರ್ಟ್ಗೆ ತಲುಪಿಸಿದ್ದಾರೆ.
ಸಿಬಿಎಫ್‌ಸಿ ಒತ್ತಾಯಕ್ಕೆ ಕಿಡಿಕಾರಿರುವ ಚಿತ್ರತಂಡ ಮತ್ತು ಮಲಯಾಳಂ ಚಲನಚಿತ್ರ ಕಲಾವಿದರ ಸಂಘ (AMMA) ಹಾಗೂ ಕೇರಳ ಚಲನಚಿತ್ರ ನಿರ್ಮಾಪಕರ ಸಂಘ (KFPA) ಸೇರಿದಂತೆ ಇತರ ಚಲನಚಿತ್ರ ಸಂಸ್ಥೆಗಳು ಸಿಬಿಎಫ್‌ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿವೆ,(ಏಜೆನ್ಸೀಸ್).