ಮುಂದಿನ ಜನ್ಮದಲ್ಲಿ ನಿಮ್ಮ ಪ್ರೀತಿ ಋಣ ತೀರಿಸುವೆ: ಅಭಿಮಾನಿಗಳ ಎದುರು ಜೂ. ಎನ್​ಟಿಆರ್​ ಭಾವುಕ

devara
Published on

ತೆಲಂಗಾಣ: ತೆಲುಗು ನಟ ಜೂ. ಎನ್​ಟಿಆರ್ (Jr NTR)​ ಮತ್ತು ಬಾಲಿವುಡ್​ ನಟಿ ಜಾಹ್ನವಿ ಕಪೂರ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ, ಬಹುನಿರೀಕ್ಷಿತ ‘ದೇವರ’ (Devara) ಚಿತ್ರ ಇದೇ ಸೆ.27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, ಓಪನಿಂಗ್ ದಿನವೇ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿತು. ಮೊದಲ ದಿನ ಪಡೆದ ಅದ್ಧೂರಿ ಓಪನಿಂಗ್ ಇಂದಿಗೂ ಕೂಡ ಮುಂದುವರೆದಿದ್ದು, ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಕಾಣುತ್ತಿದೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಇದೀಗ ಯಶಸ್ಸಿನತ್ತ ಸಾಗುತ್ತಿದ್ದು, ಪ್ರೇಕ್ಷಕ ವರ್ಗ ಮತ್ತು ಅಭಿಮಾನಿ ಬಳಗಕ್ಕೆ ಎನ್​ಟಿಆರ್​ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ.

'ದೇವರ' ಯಶಸ್ವಿ ಪ್ರದರ್ಶನದ ಬೆನ್ನಲ್ಲೇ ಚಿತ್ರತಂಡ ಹೈದರಾಬಾದ್‌ನ ಪಾರ್ಕ್ ಹಯಾತ್ ಹೋಟೆಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಮಾರಂಭದಲ್ಲಿ ಭಾರತದ ಸ್ಟಾರ್ ಡೈರೆಕ್ಟರ್ ಎಸ್.ಎಸ್. ರಾಜಮೌಳಿ, ಪ್ರಶಾಂತ್ ನೀಲ್, ದೇವರ ಚಿತ್ರದ ಕಲಾವಿದರು ಮತ್ತು ಸಿಬ್ಬಂದಿ ವರ್ಗದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಜೂ. ಎನ್​ಟಿಆರ್​, ನಿಮ್ಮೆಲ್ಲರ ಪ್ರೀತಿಗೆ ನಾನೆಂದಿಗೂ ಚಿರಋಣಿ ಎಂದು ಹೇಳುತ ಭಾವುಕರಾದರು.

"ಈ ಗೆಲುವು ತಂದುಕೊಟ್ಟ ನಿಮಗೆ ನಾನೆಂದಿಗೂ ಅಭಾರಿ. ಮುಂದಿನ ಜನ್ಮದಲ್ಲಿ ನಿಮ್ಮ ಪ್ರೀತಿಯ ಋಣವನ್ನು ತೀರಿಸುತ್ತೇನೆ" ಎಂದು ಜೂ. ಎನ್​ಟಿಆರ್​ ತಮ್ಮ ಮನದಾಳದ ಮಾತುಗಳನ್ನಾಡಿದರು. ತಮ್ಮ ನೆಚ್ಚಿನ ನಟನ ಮಾತುಗಳಿಗೆ ಫಿದಾ ಆದ ಫ್ಯಾನ್ಸ್​, ಶಿಳ್ಳೆ-ಚಪ್ಪಾಳೆ ಮೂಲಕ ಅಭಿಮಾನ ತೋರಿದರು. ಬಿಗ್ ಬಜೆಟ್ ಒಳಗೊಂಡ 'ದೇವರ' ಚಿತ್ರದಲ್ಲಿ ಬಾಲಿವುಡ್​ ನಟ ಸೈಫ್ ಅಲಿ ಖಾನ್, ಜೂ. ಎನ್​ಟಿಆರ್, ಜಾಹ್ನವಿ ಕಪೂರ್ ಸೇರಿದಂತೆ ಮುಂತಾದವರ ತಾರಾಗಣವಿದೆ. ಸೆ.27ರಂದು ರಿಲೀಸ್ ಆದ ಈ ಚಿತ್ರವು ಜಾಗತಿಕವಾಗಿ 400 ಕೋಟಿ ರೂ. ಆದಾಯ ಗಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net