ಪತ್ರಕರ್ತರಿಗೆ ಕಾನೂನಿನ ಅರಿವು ಅಗತ್ಯ: ಪಿ.ಎಂ.ವೀರೇಂದ್ರ

veerendra
ಪತ್ರಿಕೋದ್ಯಮ, ಮಾಧ್ಯಮ ಮತ್ತು ಕಾನೂನು ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಿ.ಎಂ.ವೀರೇಂದ್ರ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಪಿ.ಎ.ವರ್ಗಿಶ್, ಜಿ.ಎಚ್.ಶಿವು, ಡಾ.ಸತೀಶ್‌ಕುಮಾರ್, ದೊರೆಸ್ವಾಮಿ, ಆರ್.ವರ್ಣಶ್ರೀ, ಡಾ.ರುಮಾನಾ ತನ್ವೀರ್ ಇದ್ದರು.
Published on

ಶಿವಮೊಗ್ಗ: ಕಾನೂನು ವಿಷಯವನ್ನು ವರದಿ ಮಾಡುವವರಿಗೆ ಮಾತ್ರವಲ್ಲದೆ ಎಲ್ಲ ಪತ್ರಕರ್ತರಿಗೂ ಕಾನೂನಿನ ಅರಿವು ಅಗತ್ಯ ಎಂದು ವಕೀಲರು ಹಾಗೂ ಪತ್ರಕರ್ತ ಎಂ.ಪಿ.ವೀರೇಂದ್ರ ಅಭಿಪ್ರಾಯಪಟ್ಟರು.

ಕುವೆಂಪು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಸೋಮವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ, ಮಾಧ್ಯಮ ಮತ್ತು ಕಾನೂನು ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

ಪತ್ರಕರ್ತರಿಗೆ ದೇಶದ ಸಂವಿಧಾನ ಮತ್ತು ಕಾನೂನಿನ ಅರಿವು ಇದ್ದರೆ ಸಮಾಜಕ್ಕೆ ಉತ್ತಮ ಮಾಹಿತಿ ನೀಡಲು ಸಾಧ್ಯ. ಅಲ್ಲದೆ ತಮ್ಮ ವೃತ್ತಿಯಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೆ ಕಾನೂನಿನ ನೆರವು ಪಡೆಯಬಹುದು. ಕಾನೂನು ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಬಹುದು ಎಂದು ತಿಳಿಸಿದರು.

ಯಾವುದೇ ವಿಷಯದ ವರದಿ ಮಾಡುವಾಗ ಪತ್ರಕರ್ತರು ಎಲ್ಲಾ ಆಯಾಮಗಳಿಂದಲೂ ಪರಿಶೀಲಿಸಿ, ಸಾಕಷ್ಟು ಪುರಾವೆಗಳಿದ್ದರೆ ಮಾತ್ರ ವರದಿ ಮಾಡಬೇಕು. ಯಾವಾಗಲೂ ಸತ್ಯವನ್ನು ಮಾತ್ರ ವರದಿ ಮಾಡಬೇಕು. ಇಲ್ಲದಿದ್ದರೆ ಕಾನೂನಿನಡಿ ಸಿಲುಕಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿ ಪತ್ರಕರ್ತರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದರೂ ಗಂಭೀರ ಶಿಕ್ಷೆಗಳಾಗಿದ್ದು ತುಂಬಾ ಕಡಿಮೆ. ಹೆಚ್ಚಿನ ಪ್ರಕರಣಗಳು ಕ್ಷಮೆ ಕೇಳುವ ಮೂಲಕ ಅಥವಾ ರಾಜಿ ಪಂಚಾಯಿತಿ ಮೂಲಕ ಇತ್ಯರ್ಥವಾಗಿವೆ. ಭಾರತದಲ್ಲಿ ಪತ್ರಿಕಾ ಸ್ವಾತಂತ್ರೃ, ಮಾನನಷ್ಟ ಕಾನೂನು, ನ್ಯಾಯಾಲಯ ನಿಂದನೆ, ಶಾಸಕಾಂಗದ ಹಕ್ಕುಚ್ಯುತಿ, ಮಾಹಿತಿ ಹಕ್ಕು, ಸೈಬರ್ ಕಾನೂನು ಮುಂತಾದ ವಿಷಯಗಳನ್ನು ಪತ್ರಕರ್ತರು ಎದುರಿಸಿದ ಬಗೆಯನ್ನು ವಿವರಿಸಿದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.

ವಿಭಾಗದ ಅಧ್ಯಕ್ಷ ಪ್ರೊ.ಪಿ.ಎ.ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಿ.ಎಚ್.ಶಿವು, ಖಜಾಂಚಿ ದೊರೆಸ್ವಾಮಿ, ಉಪನ್ಯಾಸಕರಾದ ಡಾ.ರುಮಾನಾ ತನ್ವೀರ್, ಆರ್.ವರ್ಣಶ್ರೀ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net