

ಭೋಪಾಲ: ಮಧ್ಯಪ್ರದೇಶದ ಮಾಜಿ ಸಿಎಂ ಕಮಲನಾಥ್ ಅವರು ಮಾರ್ಚ್ 20ರಂದು ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಪತ್ರಕರ್ತನೋರ್ವನಿಗೆ COVID19 ಟೆಸ್ಟ್‍ನಲ್ಲಿ ಪಾಸಿಟಿವ್ ಬಂದಿದೆ. ಅಲ್ಲದೆ, ಆತನ ಪುತ್ರಿಗೂ ಆ ಸೋಂಕು ತಗುಲಿರುವುದು ಧೃಡಪಟ್ಟಿದೆ ಎನ್ನುತ್ತಿವೆ ವರದಿಗಳು.
ಕಮಲನಾಥ್ ಅವರು ಬಹುಮತ ಸಾಬೀತುಪಡಿಸುವುದು ಕಷ್ಟವೆಂದು ಅರಿತು ರಾಜೀನಾಮೆ ವಿಚಾರ ಬಹಿರಂಗಪಡಿಸುವ ಸಲುವಾಗಿ ಅಂದು ಪತ್ರಿಕಾಗೋಷ್ಠಿ ಕರೆದಿದ್ದರು. ಅದರಲ್ಲಿ ಅಂದು ಭಾಗಿಯಾಗಿದ್ದ ಅಧಿಕಾರಿಗಳು, ಪತ್ರಕರ್ತರನ್ನು ಗುರುತಿಸಿ ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚಿಸಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಕಮಲನಾಥ್ ಅವರು ಸ್ವಯಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಆ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಇದುವರೆಗೆ 14 ಪಾಸಿಟಿವ್ ಕೇಸ್‍ಗಳು ಧೃಡಪಟ್ಟಿವೆ. ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 560ರ ಗಡಿ ದಾಟಿದೆ. 10 ಜನ ಸಾವನ್ನಪ್ಪಿದ್ದಾರೆ. ಪ್ರಸ್ತುತ ಸೋಂಕು ಹೆಚ್ಚಿನ ಮಟ್ಟದಲ್ಲಿ ಹರಡದಂತೆ ತಡೆಯಲು ಸರ್ಕಾರ 21 ದಿನಗಳ ಲಾಕ್‍ಡೌನ್ ಘೋಷಿಸಿದೆ. ಮಾರ್ಚ್ 24ರಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‍ಡೌನ್ ಘೋಷಣೆ ಮಾಡಿದ್ದಾರೆ. 130 ಕೋಟಿ ದೇಶವಾಸಿಗಳು ಸೋಷಿಯಲ್ ಡಿಸ್ಟೆನ್ಸಿಂಗ್ ಅನುಸರಿಸುವುದಕ್ಕೂ ಸೂಚನೆ ಕೊಟ್ಟಿದ್ದಾರೆ. ಅಗತ್ಯವಸ್ತುಗಳು ಪ್ರತಿನಿತ್ಯವೂ ಸಿಗಲಿದ್ದು, ಅವುಗಳ ಸಣ್ಣ ಅಂಗಡಿಗಳು ತೆರೆದಿರುತ್ತವೆ ಎಂಬುದನ್ನೂ ಆಯಾ ರಾಜ್ಯ ಸರ್ಕಾರಗಳು ಖಾತ್ರಿ ಪಡಿಸುತ್ತಿವೆ. (ಏಜೆನ್ಸೀಸ್)