ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಗೆ ಕೈಜೋಡಿಸಿ: ಸುಂದರೇಶ್

suda
ಶಿವಮೊಗ್ಗದಲ್ಲಿ ಸೂಡಾದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎಚ್.ಎಸ್.ಸುಂದರೇಶ್ ಗುದ್ದಲಿ ಪೂಜೆ ನೆರವೇರಿಸಿದರು. ಎಸ್.ಎನ್.ಚನ್ನಬಸಪ್ಪ, ಯಮುನಾ ರಂಗೇಗೌಡ, ವಿಶ್ವನಾಥ ಮುದಜ್ಜಿ, ಗಂಗಾಧರ ಸ್ವಾಮಿ ಇತರರಿದ್ದರು.
Published on

ಶಿವಮೊಗ್ಗ: ಸೂಡಾ (ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ)ದಿಂದ ವಿವಿಧ ಬಡಾವಣೆಗಳಲ್ಲಿ ಉದ್ಯಾನ ಅಭಿವೃದ್ಧಿ ಸೇರಿ ಅನೇಕ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಾಗರಿಕರು ತಮ್ಮ ವ್ಯಾಪ್ತಿಯ ಪಾರ್ಕ್ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.

ಸೋಮವಾರ ಸೂಡಾದಿಂದ ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಗಾಡಿಕೊಪ್ಪದ ಸಿದ್ದಪ್ಪ ಬಡಾವಣೆಯಲ್ಲಿ 25 ಲಕ್ಷ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು, ಡೆಕ್‌ಸ್ಲಾೃಬ್ ಹಾಗೂ 45 ಮೀಟರ್ ಬಾಕ್ಸ್ ಚರಂಡಿ ನಿರ್ಮಾಣ, 280 ಮೀಟರ್ ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದರು.

ವಿದ್ಯಾನಗರದ ಗ್ರಂಥಾಲಯ ಹತ್ತಿರದ ಉದ್ಯಾನದಲ್ಲಿ 20 ಲಕ್ಷ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಇಲ್ಲಿಯ ಉದ್ಯಾನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 12 ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಸಲಾಗುವುದು. ಪಾರ್ಕ್‌ನಲ್ಲಿ ಹಾಲಿ ಇರುವ ಪಾಥ್‌ವೇ ಮತ್ತು ಗ್ರಿಲ್ ಫೆನ್ಸಿಂಗ್‌ಗೆ ಬಣ್ಣ ಲೇಪಿಸಲಾಗುವುದು. ಉದ್ಯಾನದಲ್ಲಿ 8 ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದು ತಿಳಿಸಿದರು.

ವಿದ್ಯಾನಗರದ ಪ್ರೊ. ದಾನಪ್ಪ ಅವರ ಮನೆ ಹತ್ತಿರದಲ್ಲಿರುವ ಪಾರ್ಕ್‌ನಲ್ಲಿ 20 ಲಕ್ಷ ರೂ. ಮೊತ್ತದಲ್ಲಿ ಕಾಂಕ್ರೀಟ್ ಬಾಕ್ಸ್ ಚರಂಡಿ ನಿರ್ಮಾಣ, ಫೆನ್ಸಿಂಗ್ ಹಾಗೂ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 10 ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಸಲಾಗುವುದು. ಗುರುಪುರದ ಭುವನೇಶ್ವರಿ ಬಡಾವಣೆಯಲ್ಲಿರುವ ಉದ್ಯಾನದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ 15*10 ಮೀಟರ್ ಯೋಗ ಪ್ಲಾಟ್‌ಫಾರ್ಮ್, 11 ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಹಾಲಿ ಇರುವ ಪಾಥ್‌ವೇ ಮತ್ತು ಗ್ರಿಲ್ ಫೆನ್ಸಿಂಗ್‌ಗೆ ಬಣ್ಣ ಲೇಪನ ಮತ್ತು 6 ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದರು.

ಮಲವಗೊಪ್ಪದ ಶಿವಪ್ರಿಯ ಉದ್ಯಾನದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 10 ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಪಾರ್ಕ್‌ನಲ್ಲಿ ಹಾಲಿ ಇರುವ ಪಾಥ್‌ವೇಗೆ ಮತ್ತು ಗ್ರಿಲ್ ಫೆನ್ಸಿಂಗ್‌ಗೆ ಬಣ್ಣ ಲೇಪನ ಹಾಗೂ 75 ಮೀಟರ್ ಪಾಥ್‌ವೇ ನಿರ್ಮಾಣ ಹಾಗೂ 8 ಕಲ್ಲಿನ ಬೆಂಚು ಅಳವಡಿಸಲಾಗುವುದು ಎಂದು ತಿಳಿಸಿದರು.

ಸೂಡಾ ಆಯುಕ್ತ ವಿಶ್ವನಾಥ ಮುದಜ್ಜಿ, ಸೂಡಾ ಕಾರ್ಯಪಾಲಕ ಅಭಿಯಂತ ಗಂಗಾಧರ ಸ್ವಾಮಿ, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net