ಆಗ್ನೇಯ-ಈಶಾನ್ಯ ಕ್ಷೇತ್ರಗಳಲ್ಲಿ ಮೈತ್ರಿಗೆ ಕೈ ಸೆಡ್ಡು: ಡಾ.ಚಂದ್ರಶೇಖರ ಪಾಟೀಲ್-ಅಮರನಾಥ ಪಾಟೀಲ್ ಫೈಟ್

m,lc
Published on

| ಬಾಬುರಾವ ಯಡ್ರಾಮಿ ಕಲಬುರಗಿ

ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಈಶಾನ್ಯ ಪದವೀಧರ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ಪಡುತ್ತಿದ್ದರೆ, ಸೋಲಿನ ಸೇಡು ತೀರಿಸಿಕೊಂಡು ಕ್ಷೇತ್ರ ವಶಕ್ಕೆ ಬಿಜೆಪಿ ಶತಪ್ರಯತ್ನ ನಡೆಸಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ (ಔರಾದ್​ನಿಂದ ಹರಪನಹಳ್ಳಿವರೆಗೂ) ವ್ಯಾಪ್ತಿ ಹೊಂದಿರುವ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಂಡರೂ ಕೈ-ಕಮಲ ನಡುವೆ ನೇರ ಫೈಟ್ ಇದೆ. ಆಡಳಿತಾರೂಢ ಕಾಂಗ್ರೆಸ್​ನಿಂದ ಹಾಲಿ ಎಂಎಲ್​ಸಿ ಡಾ.ಚಂದ್ರಶೇಖರ ಪಾಟೀಲ್ ಮತ್ತು ಬಿಜೆಪಿಯಿಂದ ಮಾಜಿ ಎಂಎಲ್​ಸಿ ಅಮರನಾಥ ಪಾಟೀಲ್ ಹಾಗೂ ಪಕ್ಷೇತರರಾಗಿ ಬಳ್ಳಾರಿಯ ನಾರಾ ಪ್ರತಾಪರೆಡ್ಡಿ, ಕಲಬುರಗಿಯ ಶರಣಬಸಪ್ಪ ಸೂಗೂರ, ಶರಣಬಸಪ್ಪ ಅಂಬೆಸಿಂಗೆ ಇತರರು ಕಣದಲ್ಲಿದ್ದಾರೆ. ಕಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 1,56,623 ಪದವೀಧರರು ಹಕ್ಕು ಹೊಂದಿದ್ದಾರೆ. 1988ರಿಂದ 2006ರವರೆಗೆ ನಾಲ್ಕು ಬಾರಿ ದಿ.ಎಂ.ಆರ್.ತಂಗಾ ಬಿಜೆಪಿಯಿಂದ ಕ್ಷೇತ್ರ ಪ್ರತಿನಿಧಿಸಿದ್ದರು. 2006ರಲ್ಲಿ ರಾಯಚೂರಿನ ಮನೋಹರ ಮಸ್ಕಿ, 2012ರಲ್ಲಿ ಕಲಬುರಗಿಯ ಅಮರನಾಥ ಪಾಟೀಲ್ ಬಿಜೆಪಿಯಿಂದ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್ ಆಯ್ಕೆಯಾಗಿದ್ದಾರೆ.

ಬಿಜೆಪಿಗೆ ಗೆಲ್ಲುವ ಪ್ರತಿಷ್ಠೆ, ಕಾಂಗ್ರೆಸ್​ಗೆ ಸ್ಥಾನ ಉಳಿಸಿಕೊಳ್ಳುವ ಸವಾಲಿದೆ. ಗೆಲ್ಲುವ ಹಠಕ್ಕೆ ಬಿದ್ದಿರುವ ಬಿಜೆಪಿ ನಾಯಕರು ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಕಣ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಕ್ಷೇತ್ರ ಕಲಬುರಗಿ ಕೇಂದ್ರೀಕೃತವಾಗಿರುವುದರಿಂದ ಕಾಂಗ್ರೆಸ್​ಗೆ ಸವಾಲು ಎನಿಸಿದೆ. ಆದರೆ ಪ್ರಬುದ್ಧ ಮತದಾರ ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕು.

ರೆಡ್ಡಿ ಟಕ್ಕರ್: ಕಾಂಗ್ರೆಸ್ ಟಿಕೆಟ್​ಗೆ ಪ್ರಯತ್ನಿಸಿದ್ದ ನಾರಾ ಪ್ರತಾಪರೆಡ್ಡಿ ಸ್ವತಂತ್ರ ಅಭ್ಯರ್ಥಿಯಾಗಿದ್ದಾರೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಇವರ ಪ್ರಭಾವ ಹೆಚ್ಚಿದೆ. ಜತೆಗೆ ಕೊಪ್ಪಳದಲ್ಲೂ ಬಿಜೆಪಿ-ಕಾಂಗ್ರೆಸ್ ಓಟಕ್ಕೆ ನಾರಾ ಬ್ರೇಕ್ ಹಾಕುವ ಸಾಧ್ಯತೆ ಇದೆ. ಕಳೆದ ಸಲ ಕೆಲವೇ ಮತಗಳ ಅಂತರದಿಂದ ಸೋತಿರುವ ನಾರಾ ಬಗ್ಗೆ ಮತದಾರರಲ್ಲಿಯೂ ಅನುಕಂಪ ಇದೆ. ಹೀಗಾಗಿ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನ ಮತ ಪಡೆಯುವಂತಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡುತ್ತಿದ್ದಾರೆ.

ವಿಜಯೇಂದ್ರ, ಬೊಮ್ಮಾಯಿ, ನಿರಾಣಿ ಪ್ರಚಾರ: ಕ್ಷೇತ್ರ ಗೆಲ್ಲಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಲಬುರಗಿ ಜಿಲ್ಲೆ ಬಿಜೆಪಿ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ಖಡಕ್ ಸೂಚನೆ ನೀಡಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಸಚಿವ ಸಿ.ಟಿ. ರವಿ, ಕೇಂದ್ರ ಸಚಿವ ಭಗವಂತ ಖುಬಾ ಸೇರಿ ಮೊದಲಾದ ನಾಯಕರು ಮತ ಬೇಟೆಯಲ್ಲಿ ತೊಡಗಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ರಾಯಚೂರು ಜಿಲ್ಲಾ ಉಸ್ತುವಾರಿ ಡಾ.ಬಿ.ಜಿ.ಪಾಟೀಲ್, ಕಲಬುರಗಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಇತರರು ಟೊಂಕಕಟ್ಟಿ ನಿಂತು ಕೆಲಸ ಮಾಡುತ್ತಿದ್ದಾರೆ.

ಭದ್ರಕೋಟೆ ಸಾಬೀತಿಗೆ ಯತ್ನ : ಕಳೆದ ಬಾರಿ ಬಿಜೆಪಿ ಅಮರನಾಥ ಪಾಟೀಲ್​ಗೆ ಟಿಕೆಟ್ ತಪ್ಪಿಸಿ ಬಳ್ಳಾರಿಯ ಶ್ರೀನಿವಾಸ್​ಗೆ ನೀಡಿ ತ್ತಾದರೂ ಪಾಟೀಲ್ ಪಕ್ಷನಿಷ್ಠರಾಗಿ ಕೆಲಸ ಮಾಡಿದ್ದರು. ಮತದಾರರು ಕೈ ಹಿಡಿಯದಿದ್ದರಿಂದ ಬಿಜೆಪಿ ಮೊದಲ ಸಲ ಸೋತಿತು. ಈ ಬಾರಿ ಮತ್ತೆ ಅಮರನಾಥಗೆ ಪಕ್ಷ ಟಿಕೆಟ್ ನೀಡಿದೆ. ಮತದಾರರಿಗೆ ಅವರ ಬಗ್ಗೆ ಅನುಕಂಪವೂ ಇದೆ. ಕಾಂಗ್ರೆಸ್​ನಿಂದ ಕ್ಷೇತ್ರ ಕಸಿದು ಬಿಜೆಪಿ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಲು ಕೇಸರಿಪಡೆ ಪ್ರಯತ್ನಿಸುತ್ತಿದೆ. ಹಾಲಿ ಎಂಎಲ್​ಸಿ ಡಾ.ಚಂದ್ರಶೇಖರ ಪಾಟೀಲ್ ತಮ್ಮದೇ ಆದ ಶಕ್ತಿ ಬಳಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಲವಿದೆ.

ಅರ್ಧ ಸಚಿವರು ಪ್ರಚಾರಕ್ಕೆ: ಕಕದ ಏಳು ಜಿಲ್ಲೆಗಳಲ್ಲಿ 41 ಶಾಸಕರಿದ್ದಾರೆ. ಕಾಂಗ್ರೆಸ್ 26, ಬಿಜೆಪಿ 10 ಹಾಗೂ ಇಬ್ಬರು ಜೆಡಿಎಸ್​ನವರ ಜತೆಗೆ ಎಂಟು ಸಚಿವರಿದ್ದಾರೆ. ಕ್ಷೇತ್ರವನ್ನು ತನ್ನಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪುರ, ಡಾ.ಶರಣಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ, ರಹೀಂಖಾನ್, ಎನ್.ಎಸ್. ಬೋಸರಾಜು, ನಾಗೇಂದ್ರ, ಕೆಕೆಆರ್​ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಸಿಎಂ ಸಲಹೆಗಾರ ಬಿ.ಆರ್. ಪಾಟೀಲ್ ಮೊದಲಾದವರು ಪ್ರಚಾರ ನಡೆಸುತ್ತಿದ್ದಾರೆ. ಆದರೆ ಮತದಾರರು ಗುಪ್ತಗಾಮಿನಿಯಂತಿದ್ದು, ಎಲ್ಲರಿಗೂ ಜೈ ಎನ್ನುತ್ತಿದ್ದಾರೆ. ಸ್ಥಳೀಯ ಮುಖಂಡರು ತಮ್ಮ ತಮ್ಮ ಹಂತದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net