ಜೋಗ ಫಾಲ್ಸ್ ಪ್ರವಾಸಿಗರಿಗೆ ಮುಕ್ತ

jog (1)
ಜೋಗ ಜಲಪಾತ ವೀಕ್ಷಣೆಗೆ ಮುಕ್ತವಾದ ಹಿನ್ನೆಲೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಕಣ್ತುಂಬಿಕೊಂಡರು.
Published on

ಕಾರ್ಗಲ್: ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಜೋಗ ಜಲಪಾತ ವೀಕ್ಷಣೆಗೆ ಕಳೆದ ನಾಲ್ಕು ತಿಂಗಳಿಂದ ತಾತ್ಕಾಲಿವಾಗಿ ಹೇರಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ ವೀಕ್ಷಣೆಗೆ ಗುರುವಾರ ಮುಕ್ತಗೊಳಿಸಲಾಯಿತು.

185 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಜೋಗ ಜಲಪಾತದ ಅಭಿವೃದ್ಧಿ ಕಾಮಗಾರಿಗಳ ಪೈಕಿ ನಿರ್ಮಾಣ ಹಂತದಲ್ಲಿರುವ ವೀಕ್ಷಣಾ ಗೋಪುರಕ್ಕೆ (ವ್ಯೆ ಡೆಕ್) ಪ್ರವಾಸಿಗರಿಗೆ ಅನುಮತಿ ಇರಲಿಲ್ಲ. ಕೇವಲ ಮೈಸೂರು ಬಂಗಲೆ ಎದುರಿನಿಂದ ಮಾತ್ರ ನಿಂತು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಕಾಮಗಾರಿಗಳಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಜಿಲ್ಲಾಡಳಿತವು ಜ.1ರಿಂದ ತಾತ್ಕಾಲಿಕ ನಿಷೇಧ ಹೇರಿತ್ತು. ಗುರುವಾರ ಕಾರ್ಮಿಕ ದಿನಾಚರಣೆ ರಜೆ ಹಿನ್ನೆಲೆಯಲ್ಲಿ ಸಾಕಷ್ಟು ಪ್ರವಾಸಿಗರು ಜಲಪಾತವನ್ನು ಕಣ್ತುಂಬಿಕೊಂಡರು.

ಜೋಗ ಜಲಪಾತದ ಒಳಭಾಗದಲ್ಲಿ ವಿವಿಧ ಕಾಮಗಾರಿಗಳ ಜತೆಗೆ ಅತ್ಯಂತ ಸೂಕ್ಷ್ಮವಾದ ಪ್ರವೇಶದ್ವಾರ ಗೋಪುರದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮುಕ್ತಾಯದ ಹಂತ ತಲುಪಿದೆ. ಆದ್ದರಿಂದ ಪ್ರವಾಸಿಗರಿಗೆ ದೀರ್ಘಾವಧಿಯಾಗಿ ನಿರಾಸೆ ಆಗದಿರಲಿ ಎಂಬ ಕಾರಣಕ್ಕೆ ಮುಖ್ಯ ಪ್ರವೇಶ ದ್ವಾರವನ್ನು ಹೊರತುಪಡಿಸಿ, ಪ್ರವೇಶದ್ವಾರದ ಹೊರಭಾಗದ ಕೊನೆಯಲ್ಲಿ ದಾರಿ ಮಾಡಿ ಕೇವಲ ಜಲಪಾತ ಪ್ರದೇಶ ವೀಕ್ಷಿಸಲು ಅನುವಾಗುವಂತೆ ಜೋಗ ನಿರ್ವಹಣಾ ಪ್ರಾಧಿಕಾರ ಕ್ರಮ ಕೈಗೊಂಡಿದೆ.

ಕಾಮಗಾರಿಗಳಿಗೆ ಯಾವುದೇ ಅಡಚಣೆ ಆಗದಂತೆ ಪ್ರವಾಸಿಗರು ಪ್ರವೇಶದ್ವಾರದ ಹೊರಬದಿಯಿಂದ ತೆರಳಿ ಜಲಪಾತ ವೀಕ್ಷಿಸಿ ಹಿಂದಿರುಗಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ವಾಹನಗಳನ್ನು ಹೊರಗೆ ಪಾರ್ಕಿಂಗ್ ಮಾಡುವಂತೆ ಸೂಚಿಸಲಾಗಿದೆ ಎಂದು ಜೆಎಂಎ ಖಾಸಗಿ ಭದ್ರತಾ ಅಧಿಕಾರಿ ಭಾಸ್ಕರ್ ಮಾಹಿತಿ ನೀಡಿದರು.

ಜಲಪಾತದ ಒಳಭಾಗದಲ್ಲಿ ಸಣ್ಣಪುಟ್ಟ ಕಾಮಕಾರಿಗಳು ನಡೆಯುತ್ತಿವೆ. ಇನ್ನೆರಡು 2 ತಿಂಗಳಲ್ಲಿ ಪೂರ್ಣಗೊಳಿಸಿ ಪ್ರವಾಸಿಗರಿಗೆ ಮುಕ್ತವಾಗಿಸಬೇಕಿದೆ. ಜೋಗದಲ್ಲಿ ಮೇ 9ಕ್ಕೆ ಪ್ರವಾಸೋದ್ಯಮ ಇಲಾಖೆಯ ಪೂರ್ವಭಾವಿ ಸಭೆ ನಿಗದಿಯಾಗಿದೆ. ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಧರ್ಮಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net