ದೇಶದ ಏಕತೆಗೆ ಬದ್ಧ: ಆಯ್ಕೆಯ ನಂತರ ಬೈಡೆನ್ ಮೊದಲ ಭಾಷಣ

Bieden 1
Published on

ಅಮೆರಿಕದ 46ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಜೋ ಬೈಡೆನ್ ದ್ವೇಷ ರಾಜಕೀಯ ಮಾಡುವುದಿಲ್ಲವೆಂದು ಸೂಚ್ಯವಾಗಿ ತಿಳಿಸಿದ್ದಾರೆ. ದೇಶದ ಏಕತೆಗೆ ಒತ್ತು ನೀಡುವುದರ ಜತೆಗೆ, ಪ್ರತಿಪಕ್ಷದ ಜತೆ ಸಹಕಾರದಿಂದ ಇರುವುದಾಗಿ ತಿಳಿಸಿದ್ದಾರೆ. ಆದರೆ ಸೋಲನ್ನು ಒಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್, ಕಾನೂನು ಹೋರಾಟದ ಮಾತನ್ನಾಡಿದ್ದಾರೆ. ಈ ಕುರಿತ ಕ್ಯಾಂಪೇನನ್ನು ಸೋಮವಾರ ಆರಂಭಿಸುವುದಾಗಿಯೂ ತಿಳಿಸಿದ್ದಾರೆ. ಹೀಗಾಗಿ ಅಧ್ಯಕ್ಷೀಯ ಚುನಾವಣೆಯು ‘ಮಳೆ ನಿಂತರು ಮರದ ಹನಿ ನಿಲ್ಲದು’ ಎಂಬಂತಾಗಿದೆ.

ವಾಷಿಂಗ್ಟನ್: ‘ದೇಶವಾಸಿಗಳು ಗಟ್ಟಿದನಿಯಲ್ಲಿ ಬೆಂಬಲ ನೀಡಿದ್ದಾರೆ. ಸ್ಪಷ್ಟ ಜಯವನ್ನು ಪ್ರಕಟಿಸಿದ್ದಾರೆ. ಈ ವಿಶ್ವಾಸ ನನ್ನನ್ನು ವಿನೀತನನ್ನಾಗಿ ಮಾಡಿದೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಿದೆ. ದೇಶವನ್ನು ಒಗ್ಗೂಡಿಸುವ ಅಧ್ಯಕ್ಷನಾಗಿರುವೆ’ ಎಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾದ ಡೆಮಾಕ್ರಟಿಕ್ ಪಕ್ಷದ ಮುಖಂಡ ಜೋ ಬೈಡೆನ್ ಹೇಳಿದರು. ಚುನಾವಣಾ ಫಲಿತಾಂಶದ ನಂತರ ತಮ್ಮ ತವರು ರಾಜ್ಯ ಡೆಲವೇರ್​ನ ವಿಲ್ಮಿಂಗ್ಟನ್​ನಲ್ಲಿ ಮೊದಲ ಬಾರಿಗೆ ಶನಿವಾರ ಮಾತನಾಡಿದರು. ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಉಪಸ್ಥಿತರಿದ್ದರು.

‘ಕಳೆದ ನಾಲ್ಕು ವರ್ಷಗಳಿಂದ ಜನರಲ್ಲಿ ಇರುವ ಅಸಮಾಧಾನವನ್ನು ನಾನು ಬಲ್ಲೆ. ಆದರೀಗ ಇಂಥದನ್ನು ಹೋಗಲಾಡಿಸುವ ಸಮಯ ಮತ್ತು ಸುಧಾರಣೆ ಪರ್ವ ಬಂದಿದೆ. ಜತೆಗೆ ಕಠಿಣ ಮಾತುಗಳನ್ನು ಸೌಮ್ಯಗೊಳಿಸಬೇಕಿದೆ. ದೇಶದ ಅಭ್ಯುದಯಕ್ಕಾಗಿ ಹಗೆತನವನ್ನು ಬಿಡಬೇಕಿದೆ. ನಾವು ಶತ್ರುಗಳಲ್ಲ, ಅಮೆರಿಕನ್ನರು ಎಂಬುದನ್ನು ನೆನಪಿಡಬೇಕು’ ಎಂದು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದ್ವೇಷ ಸಾಧಿಸುವುದಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದರು ಮತ್ತು ಬೆಂಬಲಿಗರು ಕೂಡ ರಿಪಬ್ಲಿಕನ್ ಗೆಳೆಯರೊಂದಿಗೆ ಸಹಕಾರದಿಂದ ಇರಲು ಮನವಿ ಮಾಡಿದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ವೇದಿಕೆಗೆ ಬರುತ್ತಿದ್ದಂತೆ ಬೆಂಬಲಿಗರು ‘ನಾವು ನಿಮ್ಮನ್ನು ಪ್ರೀತಿಸುತ್ತೇವೆ ಜೋ’ ಎಂದು ಜೋರುದನಿಯಲ್ಲಿ ಘೋಷಿಸಿದರು.

ತಾಯಿಯನ್ನು ಸ್ಮರಿಸಿದ ಕಮಲಾ

ನೂತನ ಉಪಾಧ್ಯಕ್ಷೆಯಾಗಿ ಚುನಾಯಿತೆಯಾಗಿರುವ ಕಮಲಾ ಹ್ಯಾರಿಸ್, ತಮ್ಮ ತಾಯಿ ಶ್ಯಾಮಲಾ ಗೋಪಾಲನ್​ರನ್ನು ನೆನಪಿಸಿಕೊಂಡರು. ‘ನಾನು ಇಂದು ಇಲ್ಲಿ ಇರುವುದಕ್ಕೆ ಕಾರಣ ನನ್ನ ತಾಯಿ. 19ನೇ ವರ್ಷದಲ್ಲಿ ಭಾರತದಿಂದ ಅಮೆರಿಕಕ್ಕೆ ಬಂದು ವಿದ್ಯಾರ್ಜನೆ ಮಾಡಿ, ಬದುಕನ್ನು ಕಟ್ಟಿಕೊಂಡ ಅಮ್ಮ, ಬಹುಶಃ ನಾನು ಈ ಮಟ್ಟಕ್ಕೆ ಬೆಳೆಯುವೆ ಎಂದು ಎಣಿಸಿರಲಿಲ್ಲ. ಆದರೆ, ಅಮೆರಿಕದಲ್ಲಿ ಇಂಥ ಸಾಧನೆ ಸಾಧ್ಯವಿದೆ ಎಂಬ ಅರಿವು ಆಕೆಗೆ ಇತ್ತು’ ಎಂದು ರ್ಯಾಲಿಯಲ್ಲಿ ಭಾವುಕರಾಗಿ ನುಡಿದರು. ‘ನನ್ನ ಅಮ್ಮನ ತಲೆಮಾರಿನ ಕಪು್ಪವರ್ಣೀಯರು, ಏಷ್ಯಾದವರು, ಶ್ವೇತವರ್ಣೀಯರು, ಲ್ಯಾಟಿನ್​ಗಳು, ಅಮೆರಿಕದ ಮೂಲನಿವಾಸಿ ಮಹಿಳೆಯರು ಈ ಕ್ಷಣವನ್ನು ಎಷ್ಟು ಸಂಭ್ರಮಿಸಿರಬಹುದು ಎಂಬುದನ್ನು ಕಲ್ಪಿಸಿಕೊಂಡೇ ಚಕಿತಳಾಗಿರುವೆ’ ಎಂದರು.

ಪೂರ್ವಜರ ಊರಲ್ಲಿ ಸಂಭ್ರಮ

ಕಮಲಾ ಹ್ಯಾರಿಸ್ ಅವರ ತಾಯಿಯ ಊರಾದ ತಮಿಳುನಾಡಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂನ ಜನರು ಕಮಲಾ ಗೆಲುವನ್ನು ಹಬ್ಬದಂತೆ ಆಚರಿಸಿದ್ದಾರೆ. ಶುಭ ಕೋರುವ ರಂಗೋಲಿ, ಶುಭಾಶಯದ ಫ್ಲೆಕ್ಸ್​ಗಳು ಗ್ರಾಮದಲ್ಲಿ ರಾರಾಜಿಸಿವೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಜನರು ಸಂಭ್ರಮಾಚರಣೆ ನಡೆಸಿದರು. ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಯನ್ನೂ ನಡೆಸಲಾಯಿತು.

‘ಸೆಕೆಂಡ್ ಜಂಟಲ್​ವ್ಯಾನ್’

ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿರುವ ಹಿನ್ನೆಲೆಯಲ್ಲಿ ಅವರ ಪತಿ ಡೌಗ್ಲಾಸ್ ಎಮಾಫ್ ‘ಸೆಕೆಂಡ್ ಜಂಟಲ್​ವ್ಯಾನ್’ ಗೌರವ ಪಡೆದ ಮೊದಲ ವ್ಯಕ್ತಿಯಾಗಲಿದ್ದಾರೆ. ಅಮೆರಿಕ ಅಧ್ಯಕ್ಷರ ಪತ್ನಿಯನ್ನು ‘ಫಸ್ಟ್ ಲೇಡಿ’ ಮತ್ತು ಉಪಾಧ್ಯಕ್ಷರ ಪತ್ನಿಯನ್ನು ‘ಸೆಕೆಂಡ್ ಲೇಡಿ’ ಎಂದು ಸಂಬೋಧಿಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳೆ ಆಯ್ಕೆ ಆಗಿರುವುದರಿಂದ ಅವರ ಪತಿ ‘ಸೆಕೆಂಡ್ ಜಂಟಲ್​ವ್ಯಾನ್’ ಎಂಬ ವಿಶೇಷಣ ಪಡೆಯುತ್ತಾರೆ.

ಕಾನೂನು ಹೋರಾಟವೆಂದ ಟ್ರಂಪ್

ಸೋಲನ್ನು ಒಪ್ಪಿಕೊಳ್ಳದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫಲಿತಾಂಶವನ್ನು ನಿರಾಕರಿಸಿದ್ದಾರೆ. ಚುನಾವಣೆಯಲ್ಲಿ ವ್ಯಾಪಕ ವಂಚನೆ ನಡೆದಿದೆ. ಇದನ್ನು ಕೋರ್ಟ್​ನಲ್ಲಿ ಪ್ರಶ್ನಿಸಲಾಗುವುದು ಎಂದು ಮತ್ತೆ ಗುಟುರು ಹಾಕಿದ್ದಾರೆ. ಆದರೆ

ಈ ಆರೋಪಕ್ಕೆ ಪೂರಕವಾದ ಪುರಾವೆಯನ್ನು ಅವರು ನೀಡಿಲ್ಲ. ಸೋಮವಾರದಿಂದ ವಿವಿಧ ಕೋರ್ಟ್​ಗಳಲ್ಲಿ ಹೂಡಿರುವ ದಾವೆಗಳ ಕ್ಯಾಂಪೇನ್ ಆರಂಭವಾಗಲಿದೆ. ಚುನಾವಣಾ ಕಾನೂನುಗಳನ್ನು ಎತ್ತಿಹಿಡಿದು, ಅರ್ಹ ವಿಜೇತರನ್ನು ನ್ಯಾಯಾಲಯ ಗುರುತಿಸಲಿದೆ. ಅಮೆರಿಕದ ಜನರು ಪ್ರಾಮಾಣಿಕವಾದ ಚುನಾವಣೆ ಪಡೆದುಕೊಳ್ಳಲಿದ್ದಾರೆ. ಈ ರೀತಿ ಮಾಡುವುದರಿಂದ ಮಾತ್ರ ಜನರಿಗೆ ಚುನಾವಣೆಗಳಲ್ಲಿ ವಿಶ್ವಾಸ ಉಳಿಯಲು ಸಾಧ್ಯ ಎಂದು ಟ್ರಂಪ್ ಹೇಳಿದ್ದಾರೆ. ಮತದಾನದಲ್ಲಿನ ಅವ್ಯವಹಾರ ಕುರಿತು ನ್ಯಾಯಾಂಗ ಇಲಾಖೆ ತನಿಖೆ ನಡೆಸಲಿದೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ. ಸೋಲು ಒಪು್ಪವಂತೆ ಅಳಿಯನಿಂದ ಸಲಹೆ: ಚುನಾವಣೆಯಲ್ಲಿ ಸೋತಿರುವುದನ್ನು ಒಪ್ಪಿಕೊಂಡರೆ ಸಾರ್ವಜನಿಕವಾಗಿ ಗೌರವ ಉಳಿಯುತ್ತದೆ ಎಂಬ ಸಲಹೆಯನ್ನು ಟ್ರಂಪ್​ಗೆ ಅವರ ಅಳಿಯ ಜೇರೆಡ್ ಕುಶ್ನರ್ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಟ್ರಂಪ್ ನೀತಿ ರದ್ದತಿಗೆ ಬೈಡೆನ್ ಸಿದ್ಧತೆ

ಟ್ರಂಪ್ ಆಡಳಿತದ ಅನೇಕ ನೀತಿಗಳನ್ನು ನೂತನ ಅಧ್ಯಕ್ಷ ಜೋ ಬೈಡೆನ್ ಜನವರಿ 20ರ ನಂತರ ಎಕ್ಸಿಕ್ಯೂಟಿವ್ ಆದೇಶದ ಮೂಲಕ ರದ್ದುಗೊಳಿಸುವ ಸಾಧ್ಯತೆ ಇದೆ. ಆದರೆ, ಸಂಸತ್​ನ ಮೇಲ್ಮನೆ (ಸೆನೆಟ್)ಯಲ್ಲಿ ರಿಪಬ್ಲಿಕನ್ ಬಲ ಹೆಚ್ಚಿರುವುದರಿಂದ ಎಕ್ಸಿಕ್ಯೂಟಿವ್ ಆದೇಶಕ್ಕೆ ಒಪ್ಪಿಗೆ ಪಡೆಯುವುದು ಕಠಿಣ ಸವಾಲಾಗಬಹುದು. ಟ್ರಂಪ್ ಆಡಳಿತದಲ್ಲಿ ಜಾರಿಯಾದ ಕಠಿಣ ವಲಸೆ ನೀತಿ, ಚೀನಾ ಜತೆಗಿನ ವಾಣಿಜ್ಯ ಸಮರ, ಕಾರ್ಪೆರೇಟ್ ತೆರಿಗೆ ಮತ್ತು ಸಿರಿವಂತಿಕೆಯ ತೆರಿಗೆ ಇಳಿಕೆ, 2010ರ ಒಬಾಮಾ ಹೆಲ್ತ್​ಕೇರ್ ಯೋಜನೆ ಸ್ಥಗಿತ, ಇರಾನ್ ಅಣ್ವಸ್ತ್ರ ಒಪ್ಪಂದ ರದ್ದು ಮುಂತಾದವು ಬೈಡೆನ್ ಆಡಳಿತದಲ್ಲಿ ಪರಿಷ್ಕೃತವಾಗುವ ಸಾಧ್ಯತೆ ಇದೆ. ಪ್ಯಾರಿಸ್ ಒಪ್ಪಂದಕ್ಕೆ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಮರುಸೇರ್ಪಡೆಯಾಗುವ ಸಂಭವ ಇದೆ. ಮುಸ್ಲಿಂ ದೇಶಗಳಿಂದ ವಲಸೆ ನಿರ್ಬಂಧ ಆದೇಶ ತೆರವುಗೊಳ್ಳಬಹುದು.

ಡಿ. 14ಕ್ಕೆ ಎಲೆಕ್ಟೋರಲ್​ಗಳಿಂದ ಮತದಾನ

ಜನರಿಂದ ಆಯ್ಕೆಯಾದ ಎಲೆಕ್ಟೋರಲ್​ಗಳು ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ಮತ ನೀಡುವ ಪಕ್ರಿಯೆ ಡಿ. 14ಕ್ಕೆ (ಡಿಸೆಂಬರ್​ನ ಎರಡನೇ ಬುಧವಾರದ ನಂತರ ಬರುವ ಸೋಮವಾರ) ನಡೆಯುತ್ತದೆ. ಈ ಎಲೆಕ್ಟೋರಲ್​ಗಳು ವಾಗ್ದಾನದಂತೆ ತಮ್ಮ ಅಭ್ಯರ್ಥಿಗೆ ಮತ ನೀಡುವುದು ಸರ್ವೆಸಾಮಾನ್ಯ. ಆದರೆ, ಕೆಲವೊಮ್ಮೆ ಇದನ್ನು ಮೀರಿ ಅಡ್ಡಮತದಾನ ನಡೆಯುತ್ತದೆ. ಇದರ ಜತೆಗೆ ಅಭ್ಯರ್ಥಿಗಳು ಎಲೆಕ್ಟೋರಲ್ ಕಾಲೇಜು ಮೂಲಕ ಪಡೆದ ಮತಗಳನ್ನು ರಾಜ್ಯಗಳ ಗವರ್ನರ್ ದೃಢೀಕರಿಸುತ್ತಾರೆ. ಎಲೆಕ್ಟೋರಲ್​ಗಳಿಂದ ಚಲಾವಣೆಯಾದ ಮತಗಳ ಎಣಿಕೆ ಜನವರಿ 6ರಂದು ನಡೆಯುತ್ತದೆ. ನಂತರ ಕಾಂಗ್ರೆಸ್ (ಸದಸ್ಯರು) ಸಭೆ ಸೇರಿ ಗವರ್ನರ್ ದೃಢೀಕರಿಸಿದ ಮತಗಳು ಮತ್ತು ಎಲೆಕ್ಟೋರಲ್​ಗಳು ಚಲಾಯಿಸಿದ ಮತಗಳನ್ನು ಪರಿಶೀಲಿಸಿ ಹೊಸ ಅಧ್ಯಕ್ಷರ ಆಯ್ಕೆಯನ್ನು ಅನುಮೋದಿಸುತ್ತದೆ. ಈ ಪ್ರಕ್ರಿಯೆಯೇ ಅಮೆರಿಕ ಅಧ್ಯಕ್ಷರ ಅಧಿಕೃತ ಆಯ್ಕೆ ಆಗಿದೆ.

ಗಾಲ್ಪ್ ಆಡುತ್ತಿದ್ದ ಟ್ರಂಪ್!

ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಹೊರಬೀಳುವ ಸಂದರ್ಭದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಲ್ಪ್ ಆಟದಲ್ಲಿ ತಲ್ಲೀನರಾಗಿದ್ದರು ಎಂದು ತಿಳಿದುಬಂದಿದೆ. ಭಾರತೀಯ ಕಾಲಮಾನದ ಪ್ರಕಾರ ಶನಿವಾರ ರಾತ್ರಿ ಅಧ್ಯಕ್ಷೀಯ ಚುನಾವಣೆಯ ಸ್ಪಷ್ಟ ಫಲಿತಾಂಶ ಹೊರಬಿದ್ದಿತ್ತು. ಈ ವೇಳೆ ಟ್ರಂಪ್ ವರ್ಜೀನಿಯಾದಲ್ಲಿರುವ ತಮ್ಮ ಟ್ರಂಪ್ ನ್ಯಾಷನಲ್ ಗಾಲ್ಪ್ ಕ್ಲಬ್​ನಲ್ಲಿ ಆಟವಾಡುತ್ತಿದ್ದರು.

ಎಲೆಕ್ಷನ್ ಸ್ವಾರಸ್ಯ

  • ಪೀಟರ್ಸ್​ಬರ್ಗ್​ನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದ ಜೋ ಬೈಡೆನ್, ಪೆನ್ಸಿಲ್ವೇನಿಯಾದಲ್ಲಿ ಗೆಲುವಿನ ಮೂಲಕ ಸುಮಾರು ಒಂದು ವರ್ಷದ ಚುನಾವಣಾ ಜೈತ್ರಯಾತ್ರೆ ಮುಗಿಸಿದ್ದಾರೆ.
  • 1972ರಲ್ಲಿ 29ನೇ ವಯಸ್ಸಿಗೆ ಸೆನೆಟ್​ಗೆ ಆಯ್ಕೆ ಆಗಿದ್ದ ಬೈಡೆನ್ ಅತ್ಯಂತ ಕಿರಿಯ ವಯಸ್ಸಿನ ಸಂಸದರೆಂಬ ಶ್ರೇಯ ಪಡೆದಿದ್ದರು. ಈಗ 78ನೇ ವಯಸ್ಸಿನಲ್ಲಿ ಅಧ್ಯಕ್ಷಗಾದಿಗೇರುವ ಮೂಲಕ ಈ ಹುದ್ದೆ ಅಲಂಕರಿಸುವ ಅತ್ಯಂತ ಹಿರಿಯ ವಯಸ್ಸಿನವರೂ ಆಗಿದ್ದಾರೆ.
  • ಬೈಡೆನ್ ಮತ್ತು ಅವರ ಪತ್ನಿ ಜಿಲ್ ತಾವು ಸಾಕಿರುವ ಎರಡು ಜರ್ಮನ್ ಶೆಫರ್ಡ್ ಶ್ವಾನಗಳನ್ನು ಶ್ವೇತಭವನಕ್ಕೆ ತರಲಿದ್ದಾರೆ.
  • ಟ್ರಂಪ್ 1992ರ ನಂತರ ಮರುಆಯ್ಕೆಯಲ್ಲಿ ಸೋತ ಅಧ್ಯಕ್ಷ ಎಂಬ ಅಪಖ್ಯಾತಿ. 1992ರಲ್ಲಿ ಜಾರ್ಜ್ ಡಬ್ಲ್ಯೂ ಬುಷ್ ಮರುಆಯ್ಕೆ ಆಗಿರಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net