

ವಾಷಿಂಗ್ಟನ್: ನಾಲ್ಕು ದಿನಗಳಿಂದ ಇಡೀ ಜಗತ್ತಿನ ಕುತೂಹಲ ಕೆರಳಿಸಿದ್ದ ಮತ ಎಣಿಕೆ ಹೈಡ್ರಾಮಾಕ್ಕೆ ಕೊನೆಗೂ ಭಾರತೀಯ ಕಾಲಮಾನ ಶನಿವಾರ ರಾತ್ರಿ ತೆರೆಬಿದ್ದಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಮಾಜಿ ಉಪಾಧ್ಯಕ್ಷ, 77 ವರ್ಷದ ಜೋ ಬೈಡೆನ್ ಹಲವು ನಾಟಕೀಯ ವಿದ್ಯಮಾನಗಳ ಬಳಿಕ ಪ್ರಯಾಸದಿಂದಲೇ ಜಯಭೇರಿ ಬಾರಿಸಿದ್ದಾರೆ. 284 ಎಲೆಕ್ಟೋರಲ್ ಕಾಲೇಜುಗಳ ಬೆಂಬಲ ಪಡೆದ ಬೈಡೆನ್ ಅಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸಲಿದ್ದರೆ, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸತತ 2ನೇ ಅವಧಿಯ ಕನಸು ಭಗ್ನಗೊಂಡಿದೆ.
ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿರುವುದು ಭಾರತ ಮತ್ತು ಅಮೆರಿಕದ ಬಾಂಧವ್ಯ ಹೊಸ ಸ್ತರಕ್ಕೆ ಜಿಗಿಯುವ ಆಶಾಕಿರಣ ಮೂಡಿಸಿದೆ. ಟ್ರಂಪ್ (74) ಸೋಲು ವೀರೋಚಿತವಾಗಿದ್ದರೂ ತಮ್ಮ ಹೋರಾಟ ಮುಗಿದಿಲ್ಲ ಎಂದಿದ್ದು, ಕಾನೂನು ಹೋರಾಟದ ಸುಳಿವು ನೀಡಿದ್ದಾರೆ.
ಅಮೆರಿಕದಲ್ಲೂ ಅರಳಿದ ಕಮಲ
ಬೈಡೆನ್ ಗೆಲುವು ಸಾಧಿಸುತ್ತಿದ್ದಂತೆ ಭಾರತೀಯ ಸಂಜಾತೆ ಕಮಲಾ ಹ್ಯಾರಿಸ್, ಅಮೆರಿಕದ ಉಪಾಧ್ಯಕ್ಷ ಸ್ಥಾನ ಅಲಂಕರಿ ಸುವುದು ಖಚಿತವಾಗಿದ್ದು, ಹೊಸ ಇತಿಹಾಸ ನಿರ್ವಣವಾಗಿದೆ. ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಕಪು್ಪವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಕಮಲಾ ಈ ಚುನಾವಣೆಯಲ್ಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಬಳಿಕ ಹಿಂದೆ ಸರಿದಿದ್ದರು. ಬೈಡೆನ್ ಮುಂದಿನ ಚುನಾವಣೆಗೆ ನಿಲ್ಲುವುದು ಅನುಮಾನ. ಹೀಗಾಗಿ ಕಮಲಾ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ. ಭಾರತೀಯ ಮೂಲದ ಅಮೆರಿಕನ್ನರು, ಕಪು್ಪವರ್ಣೀಯರು ಹಾಗೂ ಮಹಿಳೆಯರು ಬೈಡೆನ್ಗೆ ಬೆಂಬಲಿಸಿದ್ದು, ಇದರ ಹಿಂದೆ ಕಮಲಾ ಪ್ರಭಾವ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಮ್ಮ ಮುಂದಿರುವ ಕೆಲಸ ಕಷ್ಟಕರವಾಗಿದೆ. ನಾನು ಅಮೆರಿಕದ ಎಲ್ಲ ಪ್ರಜೆಗಳ ಅಧ್ಯಕ್ಷನಾಗಿ ಕೆಲಸ ಮಾಡುವೆ ಎಂದು ಭರವಸೆ ನೀಡುತ್ತೇನೆ. | ಜೋ ಬೈಡೆನ್ ಅಮೆರಿಕ ನಿಯೋಜಿತ ಅಧ್ಯಕ್ಷ ಚುನಾವಣೆ ಸಂಬಂಧಿತ ಎಲ್ಲ ನಿಯಮ ಪಾಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡ ಕಾನೂನು ಕ್ರಮ ಕೈಗೊಳ್ಳಲಿದೆ. ನಿಜವಾಗಿ ಗೆದ್ದವರೇ ಅಧ್ಯಕ್ಷರಾಗಬೇಕು. | ಡೊನಾಲ್ಡ್ ಟ್ರಂಪ್ ಅಮೆರಿಕ ನಿರ್ಗಮಿತ ಅಧ್ಯಕ್ಷ
ಭಾರತಕ್ಕೆ ಹಲವು ನಿರೀಕ್ಷೆ
ಜೋ ಬೈಡೆನ್ ಭಾರತಕ್ಕೆ ಅಪರಿಚಿತರಲ್ಲ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ಉಪಾಧ್ಯಕ್ಷರಾಗಿದ್ದ ಬೈಡೆನ್ ಭಾರತಕ್ಕೆ ಹಲವು ಸಲ ಭೇಟಿ ನೀಡಿದ್ದಾರೆ ಮತ್ತು ಭಾರತ ಅಮೆರಿಕದ ಬಾಂಧವ್ಯದ ಪೂರ್ಣ ಅರಿವು ಮತ್ತು ದಕ್ಷಿಣ ಏಷ್ಯಾದಲ್ಲಿ ಭಾರತದ ಸ್ನೇಹ ಎಷ್ಟು ಮುಖ್ಯ ಎಂಬ ಸಂಗತಿಗಳು ಅವರಿಗೆ ಗೊತ್ತಿದೆ. ಜತೆಗೆ ತಮಿಳುನಾಡು ಮೂಲದವರಾದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆಯಾಗಿರುವ ಕಾರಣ ಭಾರತ ಮತ್ತು ಅಮೆರಿಕ ಬಾಂಧವ್ಯ ಹಿಂದೆಂದಿಗಿಂತಲೂ ಗಟ್ಟಿಯಾಗಲಿದೆ ಎಂಬ ನಿರೀಕ್ಷೆ ಇದೆ.
ಪ್ರೊಫೆಸರ್ ಈಗ ದೇಶದ ಮೊದಲ ಮಹಿಳೆ
ಜೋ ಬೈಡೆನ್ರ ಪತ್ನಿ ಜಿಲ್ ಬೈಡೆನ್ (69) ವೃತ್ತಿಯಲ್ಲಿ ಪ್ರಾಧ್ಯಾಪಕಿಯಾಗಿದ್ದು, ಜನವರಿ 20ರಿಂದ ದೇಶದ ಮೊದಲ ಮಹಿಳೆ (ಫಸ್ಟ್ ಲೇಡಿ) ಗೌರವ ಪಡೆಯಲಿದ್ದಾರೆ. ಬೈಡೆನ್ ದಂಪತಿಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಅಮೆರಿಕದ ಬಹುತೇಕ ಮಹಿಳೆಯರು ಮನೆ ಮತ್ತು ಉದ್ಯೋಗ ಎರಡನ್ನೂ ಸಂಭಾಳಿಸುತ್ತಾರೆ. ಆದರೆ, ಫಸ್ಟ್ ಲೇಡಿಯಾದವರು ಉದ್ಯೋಗ ಮಾಡುವಂತಿಲ್ಲ ಎಂದು ಓಹಿಯೊ ವಿವಿಯ ಇತಿಹಾಸದ ಪ್ರಾಧ್ಯಾಪಕಿ ಕ್ಯಾಥರೀನ್ ಜೆಲ್ಲಿಸನ್ ಹೇಳಿದ್ದಾರೆ.