ಎನ್‌ಎಸ್‌ಎಸ್‌ನಿಂದ ಉದ್ಯೋಗ ಅವಕಾಶ: ಪರಿಸರ ನಾಗರಾಜ್

atnc
ಎಟಿಎನ್‌ಸಿ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಡಾ.ಪರಿಸರ ನಾಗರಾಜ್, ಜಿ.ವಿಜಯಕುಮಾರ್, ಪ್ರೊ.ಪಿ.ಆರ್.ಮಮತಾ, ಆರುಂಡಿ ಶ್ರೀನಿವಾಸ ಮೂರ್ತಿ, ಪ್ರೊ. ಕೆ.ಎಂ.ನಾಗರಾಜ್ ಇತರರಿದ್ದರು.
Published on

ಶಿವಮೊಗ್ಗ: ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಹಾದಿಯಲ್ಲಿ ಅಭಿವೃದ್ಧಿಗೊಳಿಸುವ ದೃಷ್ಟಿಯಿಂದ ಎನ್‌ಎಸ್‌ಎಸ್ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕುವೆಂಪು ವಿವಿ ನಿಕಟಪೂರ್ವ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಪರಿಸರ ನಾಗರಾಜ್ ಹೇಳಿದರು.

ಶನಿವಾರ ಎಟಿಎನ್‌ಸಿ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎನ್‌ಎಸ್‌ಎಸ್ ಬದುಕು ಕಟ್ಟಿಕೊಡುವ ಜತೆಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಸಹಾಯಕವಾಗುತ್ತದೆ. ಎನ್‌ಎಸ್‌ಎಸ್ ಸೇರಿದ ಮೇಲೆ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವಕಾಶಗಳು ಕೂಡ ಲಭಿಸುತ್ತವೆ ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ಎನ್‌ಎಸ್‌ಎಸ್ ಧೈರ್ಯ ಹಾಗೂ ಆತ್ಮಬಲವನ್ನು ಹೆಚ್ಚಿಸುತ್ತದೆ. ಸಾಮರಸ್ಯ, ಸೇವಾಭಾವನೆಯನ್ನು ಕಲಿಸುತ್ತದೆ ಎಂದರು.

ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಮಾತನಾಡಿ, ಈಗಾಗಲೇ ವಿದ್ಯಾರ್ಥಿಗಳಲ್ಲಿ ಎನ್‌ಎಸ್‌ಎಸ್ ಗುಣಗಳು ಇದ್ದೇ ಇರುತ್ತವೆ. ಅವುಗಳನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಜೋತುಬೀಳದೆ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಎಟಿಎನ್‌ಸಿ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಕೆ.ಎಂ.ನಾಗರಾಜ್, ಪ್ರಾಚಾರ್ಯೆ ಪ್ರೊ.ಪಿ.ಆರ್.ಮಮತಾ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net