26, 27ಕ್ಕೆ ಬೆಂಗಳೂರಲ್ಲಿ ಉದ್ಯೋಗ ಮೇಳ

job mela
ಡಿಸಿ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಮೇಳ ಸಮಿತಿ ಸಭೆಯಲ್ಲಿ ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಾತನಾಡಿದರು. ಪ್ರಶಾಂತ್, ಎಸ್.ಟಿ.ಸೋಮಶೇಖರ್ ಇತರರಿದ್ದರು.
Published on

ಚಿಕ್ಕಮಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.26 ಮತ್ತು 27ರಂದು ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ತಿಳಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಆಯೋಜಿಸಿದ್ದ ಉದ್ಯೋಗ ಮೇಳ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಉದ್ಯೋಗ ಮೇಳಕ್ಕೆ ಜಿಲ್ಲೆಯಲ್ಲಿರುವ ಉದ್ಯೋಗಾಕಾಂಕ್ಷಿಗಳನ್ನು ಸಜ್ಜುಗೊಳಿಸಲು ಇಲಾಖೆಯಿಂದ ಸೃಜಿಸಿರುವ ಸ್ಕಿಲ್ ಕನೆಕ್ಟೃ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಬೇಕು ಎಂದರು.
ಉದ್ಯೋಗ ಮೇಳವು ಸಂಪೂರ್ಣ ಡಿಜಿಟಲೀಕರಣ ಆಗಿರುವ ಕಾರಣ ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯೋಗ ವಿನಿಮಯ ಕಚೇರಿ ಹಾಗೂ ವಿವಿಧ ಸೇವಾ ವಲಯಗಳ ಉದ್ಯೋಗದಾತರನ್ನು ನೋಂದಣಿ ಮಾಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಮೇಳದಲ್ಲಿ ಎಲ್ಲ ರೀತಿಯ ವಿದ್ಯಾರ್ಹತೆ ಹೊಂದಿರುವವರು ನೋಂದಣಿ ಮಾಡಿಕೊಳ್ಳಬಹುದು ಹಾಗೂ ಪದವಿ ಪೂರೈಸಿದ ನಂತರ ಕೌಶಲ ತರಬೇತಿ ಪಡೆಯಲು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳು, ಸ್ವ ಸಹಾಯ ಸಂಘಗಳು, ಸರ್ಕಾರಿ ಕಚೇರಿ, ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಸಮುದಾಯದ ಸಂಪನ್ಮೂಲ ವ್ಯಕ್ತಿಗಳು ಶಾಲಾ ಕಾಲೇಜು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ಪ್ರಚಾರ ಕೈಗೊಂಡು ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಯಶಸ್ವಿಯಾಗಲು ಎಲ್ಲ ಇಲಾಖೆಗಳ ಅಧಿಕಾರಿಗಳು ನಿಗಾ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ್, ಬಿಸಿಎಂ ಇಲಾಖೆ ಉಪನಿರ್ದೇಶಕ ಎಸ್.ಟಿ.ಸೋಮಶೇಖರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜುಗಳ ಮುಖ್ಯಸ್ಥರು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net