

|ಕೀರ್ತಿನಾರಾಯಣ ಸಿ. ಬೆಂಗಳೂರು
ಪಿಯುಸಿ ಉತ್ತೀರ್ಣರಾಗಿದ್ದರೆ ಸಾಕು ಪ್ರತಿ ತಿಂಗಳು 30,000 ರೂ. ಸಂಬಳ! ಅದೂ ಮನೆಯಲ್ಲಿ ಕುಳಿತುಕೊಂಡೇ ಸಂಪಾದಿಸಬಹುದು. ವಾಟ್ಸ್ ಆಪ್ನಲ್ಲಿ ಒಂದು ರೆಸ್ಯೂಮ್ ಕಳುಹಿಸಿ, ನಾವು ಹೇಳಿದ ಜಾಗಕ್ಕೆ ಬಂದು ಸಂದರ್ಶನದಲ್ಲಿ ಭಾಗಿಯಾದರೆ ಸಾಕು.... ಹೀಗೆ ಹೇಳುವವರ ಮಾತು ನಂಬಿಕೊಂಡು ಕೆಲಸ ಸಿಗುವ ಆಸೆಯಿಂದ ವ್ಯವಹಾರ ಮುಂದುವರಿಸಿದರೆ ಹಣ ಕಳೆದುಕೊಳ್ಳುವುದು ನಿಶ್ಚಿತ!
ಸರ್ಕಾರಿ ಯೋಜನೆಗಳ ಹೆಸರೇಳಿಕೊಂಡೇ ಉದ್ಯೋಗ ಭಾಗ್ಯ ಕಲ್ಪಿಸುವುದಾಗಿ ಪ್ರತಿನಿತ್ಯ ಸಾವಿರಾರು ಉದ್ಯೋಗಾಕಾಂಕ್ಷಿಗಳಿಂದ ನೋಂದಣಿ ಶುಲ್ಕ, ಜಿಎಸ್ಟಿ ಶುಲ್ಕ ಎಂದೆಲ್ಲ ಹಣ ಸಂಗ್ರಹಿಸಿ ಮೋಸ ಮಾಡುವ ಜಾಲವಾಗಿರಬಹುದು ಎಚ್ಚರ! ಕೇಂದ್ರ ಸರ್ಕಾರದ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯದಡಿ ನ್ಯಾಷನಲ್ ಕರಿಯರ್ ಸರ್ವೀಸ್(ಎನ್ಸಿಎಸ್) ವೆಬ್ಸೈಟ್ ಆರಂಭಿಸಲಾಗಿದೆ. ಸರ್ಕಾರದ ಈ ವೆಬ್ಸೈಟ್ನಲ್ಲಿರುವ ‘ಜಾಬ್ ಸೀಕರ್’ನಲ್ಲಿ ಲಿಂಕ್ ಅಪ್ಲೋಡ್ ಮಾಡಿ, ವಂಚಿಸಲಾಗುತ್ತಿದೆ. ಪದವಿ ಅಥವಾ ದ್ವಿತೀಯ ಪಿಯು ಪಾಸಾಗಿದ್ದರೆ ಸಾಕು ಎಂದೇಳಿ ಬಡ ಹಾಗೂ ಮಧ್ಯಮ ವರ್ಗದ ಯುವಕ-ಯುವತಿಯರನ್ನೇ ಟಾರ್ಗೆಟ್ ಮಾಡಲಾಗಿದೆ. ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಯುವಕರು ಹೆಚ್ಚು ಮೋಸ ಹೋಗುತ್ತಿದ್ದಾರೆ. ನೋಂದಣಿ ಶುಲ್ಕ ಎಂದು 550 ರೂ.ನಿಂದ 1000 ರೂ.ವರೆಗೆ ಹಾಗೂ ಜಿಎಸ್ಟಿ ಎಂದು 1500 ರೂ.ನಿಂದ 3500 ರೂ.ವರೆಗೆ ಸುಲಿಗೆ ಮಾಡಲಾಗುತ್ತಿದೆ.
ವಂಚನೆ ಹೇಗೆ?: ನೀವು ಎನ್ಸಿಎಸ್ ವೆಬ್ಸೈಟ್ಗೆ ಹೋಗಿ ಉದ್ಯೋಗ ಲಭ್ಯತೆಯ ವಿವರ ಹುಡುಕಾಡಿದರೆ ಜಾಬ್ ಸೀಕರ್ ಎಂಬ ವಿಭಾಗ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಇನ್ಸುರೆನ್ಸ್ ಕಂಪನಿ, ಬ್ಯಾಂಕ್ಗಳು, ಸಾಫ್ಟ್ವೇರ್ ಕಂಪನಿಗಳು ಹೀಗೆ ಬೇರೆಬೇರೆ ಸಂಸ್ಥೆಗಳಲ್ಲಿ ಹುದ್ದೆಗಳ ಮಾಹಿತಿ ದೊರೆಯುತ್ತದೆ. ಕೆಲ ಕಂಪನಿಗಳ ಲಿಂಕ್ನಲ್ಲಿ ವಾಟ್ಸ್ಆಪ್ನಲ್ಲಿ ವೈಯಕ್ತಿಕ ವಿವರ (ರೆಸ್ಯೂಮ್ ಕಳುಹಿಸಬೇಕು ಎಂದು ಸೂಚಿಸಲಾಗಿದೆ. ಎಚ್ಆರ್ ಎಂದು ಮೊಬೈಲ್ ನಂಬರ್ ಹಾಕಲಾಗಿದೆ. ಆ ನಂಬರ್ಗೆ ಕರೆ ಮಾಡಿದರೆ, ’ನಿಮ್ಮ ವಯಸ್ಸೆಷ್ಟು, ಎಲ್ಲಿಂದ ಕರೆ ಮಾಡುತ್ತಿದ್ದೀರಿ ಎಂದಷ್ಟೇ ಕೇಳುತ್ತಾರೆ. ನಂತರ ವಾಟ್ಸ್ಆಪ್ನಲ್ಲಿ ರೆಸ್ಯೂಮ್ ಕಳುಹಿಸಿ, 2 ಅಥವಾ 3 ದಿನದಲ್ಲಿ ಸಂದರ್ಶನ ಇದೆ. ಕೋಲ್ಕತ್ತ ಅಥವಾ ಇನ್ನಾವುದೋ ನಗರದ ಹೇಸರೇಳಿ, ಅಲ್ಲಿಗೆ ಬರುವಂತೆ ಹೇಳುತ್ತಾರೆ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಪಡೆದು ಕೊನೆಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಆಯಾ ಕೆಲಸಕ್ಕೆ ತಕ್ಕಂತೆ ಶುಲ್ಕ ಎಂದು 550 ರೂ.ನಿಂದ 1000 ರೂ.ವರೆಗೆ ಪಾವತಿಸಿಕೊಳ್ಳುತ್ತಾರೆ. ಪುನಃ ಜಿಎಸ್ಟಿ ಶುಲ್ಕ ಎಂದು 1500 ರೂ.ನಿಂದ 3500 ರೂ.ವರೆಗೆ ಕಟ್ಟಿಸಿಕೊಂಡು, ನಂತರ ಸಂಪರ್ಕ ಸಿಗದಂತೆ ಮಾಯವಾಗುತ್ತಾರೆ. ಪ್ರತಿನಿತ್ಯ ಕನಿಷ್ಠ 100 ಅಭ್ಯರ್ಥಿಗಳು ಸಂಪರ್ಕ ಮಾಡಿ, ತಲಾ ಒಬ್ಬರಿಂದ 3000 ರೂ. ಎಂದುಕೊಂಡರೂ 3 ಲಕ್ಷ ರೂ. ಲೂಟಿ ಹೊಡೆದಂತಾಗುತ್ತಿದೆ.
ಯಾರೂ ಠಾಣೆಗೆ ದೂರು ಕೊಡಲ್ಲ!: ಮೋಸ ಹೋದ ಅಭ್ಯರ್ಥಿಗಳು ಪೊಲೀಸ್ ಠಾಣೆಗೆ ದೂರು ಕೊಡುವುದಿಲ್ಲ. 1,000, 3,000 ರೂ. ಕಡಿಮೆ ಮೊತ್ತವೆಂಬ ಕಾರಣಕ್ಕೆ ಠಾಣೆ ಮೆಟ್ಟಿಲೇರುವುದಿಲ್ಲ. ದೂರು ಕೊಟ್ಟರೂ ಪೊಲೀಸರ ತನಿಖಾ ಕಿರಿಕಿರಿ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನಾಗುತ್ತಾರೆ. ವಂಚನೆಗೆ ಒಳಗಾಗಿದ್ದೇವೆ ಎಂದು ಹೇಳಿಕೊಂಡರೆ ಸ್ನೇಹಿತರು, ಪರಿಚಿತರ ಮುಂದೆ ಮುಜುಗರ ಅನುಭವಿಸಬೇಕು ಎಂಬ ಕಾರಣಕ್ಕೆ ವಂಚನೆ ವಿಚಾರವನ್ನು ಯಾರ ಬಳಿಯಲ್ಲೂ ಹೇಳಿಕೊಳ್ಳುವುದಿಲ್ಲ. ಇದು ವಂಚಕರಿಗೆ ವರದಾನವಾಗಿದೆ.
ಹೆಲ್ಪ್ಲೈನ್ 1514ಕ್ಕೆ ಕರೆ ಮಾಡಿ!: ಎನ್ಸಿಎಸ್ ವೆಬ್ಸೈಟ್ ಅಸಲಿ. ಆದರೆ, ಜಾಬ್ ಸೀಕರ್ ವಿಭಾಗದಲ್ಲಿ ಕಂಪನಿಗಳ ಉದ್ಯೋಗ ಮಾಹಿತಿ ಪ್ರಕಟಿಸಲು ಅವಕಾಶವಿರುವುದರಿಂದ ಕೆಲ ಕಂಪನಿಗಳು ಇದರಿಂದ ಪ್ರಯೋಜನ ಪಡೆದುಕೊಳ್ಳುತ್ತವೆ. ಆದರೆ, ವಂಚಕರು ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಇಲ್ಲಿ ಉದ್ಯೋಗಕ್ಕಾಗಿ ನೋಂದಣಿ ಮಾಡಿಕೊಳ್ಳುವುದು ಉಚಿತ. ವಿಜಯವಾಣಿ ವತಿಯಿಂದ ಟೋಲ್ ಫ್ರೀ ಹೆಲ್ಪ್ಲೈನ್ 1514ಕ್ಕೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದಾಗ ಹೋಮ್ ಪೇಜ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಇದಕ್ಕೆ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೆಲ್ಪ್ಲೈನ್ಗೆ ಕರೆ ಮಾಡಿದರೆ ರಿಜಿಸ್ಟ್ರೇಷನ್ ಹೇಗೆ ಮಾಡಬೇಕು ಎಂಬುದನ್ನು ಅಲ್ಲಿನ ಸಿಬ್ಬಂದಿಯೇ ವಿವರಿಸಿ, ಮಾರ್ಗದರ್ಶನ ನೀಡುತ್ತಾರೆ.
ಈ ಬಗ್ಗೆ ಇರಲಿ ಎಚ್ಚರ...
ಯಾವ್ಯಾವ ಉದ್ಯೋಗ?
ಪೆನ್ಸಿಲ್ ಪ್ಯಾಕಿಂಗ್ ವಂಚನೆ: ಮನೆಯಿಂದಲೇ ಮಾಡುವ ಕೆಲಸಗಳಿಗೆ ಪ್ರತಿ ತಿಂಗಳು 30 ಸಾವಿರ ವೇತನ ಕೊಡಲಾಗುತ್ತೆ. ಮುಂಗಡವಾಗಿ 15 ಸಾವಿರ ನೀಡುತ್ತೇವೆ ಎಂದು ಹೇಳುತ್ತಾರೆ. ಉದಾಹರಣೆಗೆ ಪೆನ್ಸಿಲ್ ಪ್ಯಾಕಿಂಗ್ ಬಗ್ಗೆ ನಾವೇ ನಿಮಗೆ ನೇರವಾಗಿ ಕಂಪನಿಯ ವತಿಯಿಂದ ಪೆನ್ಸಿಲ್ಗಳನ್ನು ದೊಡ್ಡ ಬಾಕ್ಸ್ ಗಳಲ್ಲಿ ಕಳುಹಿಸಿಕೊಡುತ್ತೇವೆ. ನೀವು ಸಣ್ಣಸಣ್ಣ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಹಿಂತಿರುಗಿಸಬೇಕು. ಪ್ರತಿದಿನ 100 ಬಾಕ್ಸ್ ಪ್ಯಾಕ್ ಮಾಡಿದರೆ ನಿಮಗೆ ತಿಂಗಳಿಗೆ 30 ಸಾವಿರ ರೂ. ವೇತನ ನೀಡುತ್ತೇವೆ ಎನ್ನುತ್ತಾರೆ. ಅದೇ ರೀತಿ ಇಂಗ್ಲೀಷ್ನಲ್ಲಿರುವ ಡೇಟಾವನ್ನು ಇ-ಮೇಲ್ ಮೂಲಕ ಕಳುಹಿಸುತ್ತೇವೆ. ಅದನ್ನು ಟೈಪ್ ಮಾಡಿ ಪಿಡಿಎಪ್ ಮೂಲಕ ನಮಗೆ ಕಳುಹಿಸಬೇಕು. 1 ದಿನಕ್ಕೆ 10 ಪೇಜ್ ಡೇಟಾ ಎಂಟ್ರಿ ಮಾಡಿದರೆ ನಿಮಗೆ ಮಾಸಿಕ -ಠಿ;40 ಸಾವಿರ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ, ನೋಂದಣಿ ಶುಲ್ಕ ಬಳಿಕ ಪೆನ್ಸಿಲ್ ಪ್ಯಾಕಿಂಗ್ಗೆ ಜಿಎಸ್ಟಿ 3 ಸಾವಿರ ಕಟ್ಟಬೇಕು. ಡೇಟಾ ಎಂಟ್ರಿಯಾದರೆ 500 ಪೇಜ್ಗೆ ಜಿಎಸ್ಟಿ ತೆರಿಗೆ ಪಾವತಿಸಬೇಕು ಎನ್ನುತ್ತಾರೆ. ಹಣ ಕಟ್ಟಿದ ತರುವಾಯ ಕೊರಿಯರ್ ತೊಂದರೆ ಆಗಿದೆ. ಮೆಟಿರಿಯಲ್ ಸಾಗಿಸಲು ವೆಚ್ಚ, ಮಾಡಿರುವ ಡೇಟಾ ಎಂಟ್ರಿ ಸರಿಯಿಲ್ಲ ಎಂದು ನೆಪ ಹೇಳಿ ಇನ್ನಷ್ಟು ಹಣ ವಸೂಲಿ ಮಾಡುತ್ತಾರೆ.