

ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ವೃತ್ತಿ ಕೌಶಲದ ಕೊರತೆಯಿರುವುದರಿಂದ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತರಗತಿಗಳಲ್ಲೇ ಉಪನ್ಯಾಸಕರು ವೃತ್ತಿ ಕೌಶಲದ ತರಬೇತಿ ನೀಡಬೇಕು. ಆಗ ಸುಲಭವಾಗಿ ಕೆಲಸ ಪಡೆಯಬಹುದು. ಪದವಿ ಹಂತದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರಯತ್ನ ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಐಡಿಎಸ್‌ಜಿ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ ಮತ್ತಿತರ ಚಟುವಟಿಕೆಗಳ ಸಮರೋಪದಲ್ಲಿ ಮಾತನಾಡಿ, ವಿದ್ಯೆ ಅನ್ಯರು ಕೈವಶ ಮಾಡಿಕೊಳ್ಳಲಾಗದ ಅಪೂರ್ವ ಸಂಪತ್ತು. ಆಸಕ್ತಿಯಿಂದ ಕಲಿತರೆ ಯಶಸ್ಸು ಸಿಗುತ್ತದೆ ಎಂದರು.
ವಿದ್ಯಾರ್ಥಿಗಳು ಕಲಿಕೆಯಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಸಿಕೊಂಡಾಗ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯ. ವಿದ್ಯೆ ಮೀರಿದ ಆಸ್ತಿ ಬೇರೊಂದಿಲ್ಲ. ಶಿಕ್ಷಣ ಮನುಷ್ಯನನ್ನು ಸುಸಂಸ್ಕೃತನನ್ನಾಗಿಸುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಾಗ ಬದುಕು ಹಸನಾಗುತ್ತದೆ. ಕ್ರೀಡಾ ಚಟುವಟಿಕೆಗಳಿಂದ ದೈಹಿಕವಾಗಿ ಸಬಲರಾಗಬಹುದು. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸಿಗೆ ಮುದ ನೀಡುತ್ತವೆ. ಓದಿನಷ್ಟೇ ಆಸಕ್ತಿ ಇರುವ ಚಟುವಟಿಕೆಗಳಲ್ಲೂ ತೊಡಿಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಯಾರೊಬ್ಬರೂ ಶಿಕ್ಷಣದಿಂದ ವಂಚನೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಕಡ್ಡಾಯ ಶಿಕ್ಷಣ, ವಿದ್ಯಾರ್ಥಿ ವೇತನ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಉನ್ನತ ಶಿಕ್ಷಣದಿಂದ ದೂರ ಉಳಿಯಬಾರದು ಎಂದು ಕಿವಿಮಾತು ಹೇಳಿದರು.
ಮಿಮಿಕ್ರಿ ದಯಾನಂದ ಮತ್ತು ಪ್ರವೀಣ ಕೆಂಪೇಗೌಡ ತಂಡದಿಂದ ಹಾಸ್ಯ ರಸಾಯನ ನಡೆಯಿತು.
ಶಿಕ್ಷಣ ಮತ್ತು ಆರೋಗ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆ ಶಿಕ್ಷಣದ ಮೇಲೆ ನಿಂತಿದೆ. ಬುದ್ಧ, ಬಸವ, ಅಬೇಡ್ಕರ್ ವಿಚಾರಧಾರೆಯಲ್ಲಿ ನಾಡು ಕಟ್ಟಬೇಕು. ಹಿರಿಯರು ಸರ್ವೇಜನಾ ಸುಖಿನೋಭವಂತು ಎಂದಿದ್ದರು. ವಿಶ್ವವೇ ಒಂದು ಕುಟುಂಬದ ರೀತಿಯಲ್ಲಿರಬೇಕು ಎಂದು ಬಯಸಿದ ದೇಶ ಭಾರತ. ಈ ಆಶಯಗಳನ್ನು ಸಾಕಾರಗೊಳಿಸಿ ಮುಂದುವರಿಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಎಂಎಲ್ಸಿ ಎಸ್.ಎಲ್.ಬೋಜೇಗೌಡ ಹೇಳಿದರು.
ಧರ್ಮದ ಹೆಸರಿನಲ್ಲಿ ಪಠ್ಯಪುಸ್ತಕ ರಾಜಕೀಯಕರಣಗೊಳ್ಳಬಾರದು. ಸಚಿವರು, ರಾಜಕಾರಣಿಗಳು ಪಠ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡದೆ ಶಿಕ್ಷಣ ಕ್ಷೇತ್ರದ ಸಾಧಕರಿಗೆ ಪಠ್ಯ ರಚನೆಯ ಜವಾಬ್ದಾರಿ ನೀಡಬೇಕು. ಈವರೆಗೆ ನಾವೆಲ್ಲ ಪಡೆದ ಶಿಕ್ಷಣದಲ್ಲಿ ಮೌಲ್ಯಗಳಿರಲಿಲ್ಲವೇ? ಪುಣ್ಯಕೋಟಿಯ ಕಥೆ, ಮುದ್ದಣ-ಮನೋರಮೆ ಸಲ್ಲಾಪದ ಪಠ್ಯದ ಜತೆಗೆ ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಪಠ್ಯ ಅವಶ್ಯಕವಾಗಿದೆ. ವ್ಯವಸಾಯದಲ್ಲಿರುವ ನೆಮ್ಮದಿ, ಖುಷಿ, ಸ್ವಾತಂತ್ರೃಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ. ಈ ಹಿಂದೆ ವಿದ್ಯೆ ಜತೆಗೆ ಕೃಷಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಮನುಷ್ಯನ ಜೀವನ ಕೃಷಿ ಮೇಲೆ ನಿಂತಿದೆ ಎಂಬುದನ್ನು ಯಾರೂ ಮರೆಯಬಾರದು. ಕೃಷಿ ಲಾಭದಾಯ ಕ್ಷೇತ್ರವಾಗಿದ್ದು ಯುವಕರು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪದವಿ, ಪಿಎಚ್.ಡಿ ಪಡೆದಿರುವ ಹಾಗೂ ಅಗ್ನಿಪಥ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ಸಿ.ಚಾಂದಿನಿ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್.ಸೋಮಶೇಖರ್, ಉಪನ್ಯಾಸಕ ಸತೀಶ್, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಇದ್ದರು.