ಯುವ ಸಮೂಹಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾರ್ಟ್‌ಅಪ್‌

3 smg 10
Published on

ಶಿವಮೊಗ್ಗ: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲವೇ ವಿಭಾಗಗಳಿಂದ ಭವಿಷ್ಯ ಎಂಬ ಭ್ರಮೆ ಬೇಡ. ಎಲ್ಲ ವಿಭಾಗಗಳು ಕೂಡ ತಮ್ಮದೇ ಅದ್ಭುತ ಅವಕಾಶಗಳನ್ನು ಹಿಡಿದಿಟ್ಟಿದೆ ಎಂದು ಇಸ್ರೋ ಸಂಸ್ಥೆಯ ಸಂವಹನ ಮತ್ತು ನಿಯಂತ್ರಣಾ ಕೇಂದ್ರದ ಉಪ ನಿರ್ದೇಶಕಿ ಕೆ.ಎಲ್.ಶಿವಾನಿ ಹೇಳಿದರು.

ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಇಂಜಿನಿಯರಿಂಗ್ ವಿಭಾಗಗಳಿಗೆ ನೂತನವಾಗಿ ಪ್ರವೇಶಾತಿ ಪಡೆದಿರುವ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಓರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಸಮೂಹಕ್ಕೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರವು ಇಸ್ರೋ ಮೂಲಕ ಮುಕ್ತ ಅವಕಾಶ ನೀಡುತ್ತಿದೆ. ವಿದ್ಯಾ ಸಂಸ್ಥೆಗಳು ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಸಂಶೋಧನೆ ಕುರಿತು ನಾವೀನ್ಯ ವೇದಿಕೆಗಳನ್ನು ನಿರ್ಮಾಣ ಮಾಡಬೇಕಿದೆ. ಇದರಿಂದ ಪ್ರಸ್ತುತತೆಯ ಆಧಾರಿತ ಕಲಿಕೆಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ವಿದ್ಯಾರ್ಥಿ ಜೀವನವೆಂಬುದು ಬದುಕಿನ ಅಮೂಲ್ಯ ಘಟ್ಟ. ನೀವು ನೀವಾಗಿರಲು ಸದಾ ಪ್ರಯತ್ನಿಸಬೇಕು. ನಮ್ಮಲ್ಲಿರುವ ಬಲ ಮತ್ತು ದುರ್ಬಲತೆಯನ್ನು ಮುಕ್ತವಾಗಿ ಸ್ವೀಕರಿಸಬೇಕು. ಇದರಿಂದ ಪ್ರಸ್ತುತತೆಯ ಅವಶ್ಯಕತೆಗಳಿಗೆ ತಕ್ಕಂತೆ ಬದುಕಿನಲ್ಲಿ ಸಧೃಡತೆಯಿಂದ ರೂಪಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮಾತನಾಡಿ, 25 ವರ್ಷಗಳಿಂದ ಎನ್‌ಇಎಸ್ ಯಾವುದೇ ಲಾಭಾಂಶದ ಹಂಬಲವಿಲ್ಲದೆ ಕಾರ್ಯನಿರ್ವಹಿಸುತ್ತಿದೆ. ಮಾನವ ಸಂಪನ್ಮೂಲಕ್ಕಿಂತ ಮಾನವ ಸಂಬಂಧಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಅಂಕದ ಹಿಂದೆ ಓಡದೆ ಮೌಲ್ಯದ ಹಿಂದೆ ಓಡಬೇಕಿದೆ ಎಂದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾತನಾಡಿ, ಕಾಲೇಜಿನ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿವಿಧ ಯೋಜನೆಗಳ ಮೂಲಕ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಕಳೆದ ವರ್ಷ 8 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ಆದ್ಯತೆಯು ಸ್ಪಷ್ಟವಾಗಿದ್ದಲ್ಲಿ ಕಲಿಕೆಯಲ್ಲಿ ಯಾವುದೇ ಗೊಂದಲ ಇರುವುದಿಲ್ಲ, ಅಂತೆಯೇ ಜ್ಞಾನಾರ್ಜನೆಯ ಆದ್ಯತೆಯಲ್ಲಿ ವೃತ್ತಿಪರ ಶಿಕ್ಷಣ ನಿಮ್ಮದಾಗಲಿ ಎಂದು ಹೇಳಿದರು.

ಇದೇ ವೇಳೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಎನ್‌ಇಎಸ್ ಉಪಾಧ್ಯಕ್ಷ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎನ್.ಟಿ.ನಾರಾಯಣರಾವ್, ಮಧುರಾವ್, ಸುಧೀರ್, ಅನಂತದತ್ತ, ಕುಲಸಚಿವ ಪ್ರೊ. ಟಿ.ಎಸ್.ಹೂವಯ್ಯಗೌಡ, ಪ್ರಾಚಾರ್ಯ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net