ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಓದಿದ ಶಾಲೆಗಳಿಗೆ ಕಾಯಕಲ್ಪ; 16 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ, 11 ಶಾಲೆಗಳಿಗೆ ಅನುದಾನ ಬಿಡುಗಡೆ

dfgdsfsdfsdf
Published on

|ದೇವರಾಜ್ ಕನಕಪುರ

ಬೆಂಗಳೂರು: ರಾಜ್ಯದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ವ್ಯಾಸಂಗ ಮಾಡಿದ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಪುರಸ್ಕೃತರು ವ್ಯಾಸಂಗ ಮಾಡಿದ 11 ಶಾಲೆಗಳ ಸವೋತಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 16.88 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಿಂದಾಗಿ ದುರಸ್ತಿಯಲ್ಲಿರುವ ಶಾಲೆಗಳಿಗೆ ಹೊಸ ಕಳೆ ಬರಲಿದೆ.

ಕ್ರಿಯಾ ಯೋಜನೆ: ರಾಜ್ಯದ ವಿವಿಧ ಭಾಗಗಳಲ್ಲಿರುವ 11 ಸರ್ಕಾರಿ ಶಾಲೆಗಳಲ್ಲಿ ಕನ್ನಡ ಸಾಹಿತ್ಯ ಜ್ಞಾನಪೀಠ ಪ್ರಶಸ್ತಿ ಪುರಸ್ಕರು ವ್ಯಾಸಂಗ ಮಾಡಿದ್ದು, ಈ ಶಾಲೆಗಳಿಗೆ ಅವಶ್ಯವಾಗಿ ಬೇಕಾಗಿರುವ ಕಟ್ಟಡ, ಕುಡಿಯುವ ನೀರಿನ ಘಟಕ, ಶೌಚಗೃಹ, ಕಾಪೌಂಡ್, ಕ್ರೀಡಾ ಸಾಮಾಗ್ರಿ, ಗ್ರಂಥಾಲಯ, ಪಿಠೋಪಕರಣಗಳನ್ನು ಪಟ್ಟಿಯನ್ನು ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಣ ಇಲಾಖೆ ಈಗಾಗಲೇ ಪಡೆದಿದೆ.

ಅನುಷ್ಠಾನಕ್ಕೆ ಸಮಿತಿ: ಅನುದಾನ ಬಿಡುಗಡೆ ಮಾಡಿದ್ದು, ಇದರ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಈ ಸಮಿತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕಾರ್ಯದರ್ಶಿ, ಜಿಲ್ಲಾ ಪಂಚಾಯತ್​ನ ಉಪ ಕಾರ್ಯದರ್ಶಿ, ಸಂಬಂಧಿಸಿದ ಜಿಲ್ಲಾ ಪಂಚಾಯತ್​ನ ಕಾರ್ಯಪಾಲಕ ಅಭಿಯಂತರ, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಸದಸ್ಯರಾಗಿರುತ್ತಾರೆ.

ಈ ಕ್ರಿಯಾ ಯೋಜನೆಯನ್ನು ಆರು ತಿಂಗಳ ಕಾಲಮಿತಿಯಲ್ಲಿ ಪೂರೈಸಬೇಕೆಂದು ಸೂಚಿಸಿದೆ. ಅನುದಾನದ ಮಿತಿಯೊಳಗೆ ಹಾಗೂ ಸರ್ಕಾರದಿಂದ ಯಾವುದೇ ಹೆಚ್ಚುವರಿ ಅನುದಾನ ಕೊರತೆಯಾಗದಂತೆ 2021-22ನೇ ಆರ್ಥಿಕ ಸಾಲಿನ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಬಿಡುಗಡೆ ಮಾಡಲಾಗಿರುವ ಅನುದಾನ ಬಳಕೆಯ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಕ್ತ ಲೆಕ್ಕ ಪತ್ರಗಳನ್ನು ಇಡಬೇಕು.

ಎಲ್ಲ ಖರೀದಿ ನಿಯಮಗಳನ್ನು ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯ -1999 ಅದರಡಿಯಲ್ಲಿ ಹೊರಡಿಸಲಾಗಿರುವ ನಿಯಮಗಳನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ಮತ್ತು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶಾಲೆ ಮತ್ತು ಅನುದಾನದ ಮಾಹಿತಿ, ಜ್ಞಾನಪೀಠ ಸಾಹಿತಿ ಶಾಲೆ ಅನುದಾನ ಲಕ್ಷಗಳಲ್ಲಿ;

ಕುವೆಂಪು ಸರ್ಕಾರಿ ಶಾಲೆ, ತೀರ್ಥಹಳ್ಳಿ 51.50

ಬೇಂದ್ರೆ ಸರ್ಕಾರಿ ಶಾಲೆ, ಧಾರವಾಡ 589.30

ಕಾರಂತರು ಸರ್ಕಾರಿ ಶಾಲೆ, ಕೋಟ 105.00

ಮಾಸ್ತಿ ಸರ್ಕಾರಿ ಶಾಲೆ, ಶಿವಾರಪಟ್ಟಣ 55.90

ವಿ.ಕೃ.ಗೋಕಾಕ್ ಸರ್ಕಾರಿ ಪ್ರಾಥಮಿಕ ಶಾಲೆ, ಸವಣೂರು 55.00

ಸರ್ಕಾರಿ ಪ್ರೌಢ ಶಾಲೆ, ಸವಣೂರು 245.95

ಅನಂತಮೂರ್ತಿ ಸರ್ಕಾರಿ ಶಾಲೆ, ದೂರ್ವಾಸಪುರಂ 52.50

ಕೆಪಿಎಸ್, ತೀರ್ಥಹಳ್ಳಿ 100.85

ಕಾರ್ನಾಡ್ ಸರ್ಕಾರಿ ಶಾಲೆ, ಶಿರಸಿ 91.25

ಮಾರಿಕಾಂಬಾ ಶಾಲೆ, ಶಿರಸಿ 221.09

ಕಂಬಾರ ಸರ್ಕಾರಿ ಶಾಲೆ, ಘೋಡಗೇರಿ, ಹಾವೇರಿ 120.00

ಒಟ್ಟು: 11 1688.34

ದೊರೆಸ್ವಾಮಿ ಪರಿಕಲ್ಪನೆ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ವ್ಯಾಸಂಗ ಮಾಡಿದ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಿದ್ದ ಪ್ರೊ.ಎಂ.ಆರ್.ದೊರೆಸ್ವಾಮಿ ಅವರು ಎಲ್ಲ ಶಾಲೆಗಳಿಂದ ಅಧಿಕೃತ ಮಾಹಿತಿ ಪಡೆದು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಆನಂತರ ಈ ಶಾಲೆಗಳನ್ನು ಅಭಿವೃದ್ಧಿ ಮಾಡುವುದಾಗಿ ಬಜೆಟ್​ನಲ್ಲಿ ಘೋಷಣೆ ಮಾಡಿತ್ತು.

ಸರ್ಕಾರ ನಾನು ನೀಡಿದ ಪ್ರಸ್ತಾಪವನೆ ಒಪ್ಪಿ, ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವುದು ಖುಷಿಯ ವಿಚಾರವಾಗಿದೆ. ಇದು ಜ್ಞಾನಪೀಠ ಪುರಸ್ಕೃತರಿಗೆ ನೀಡುವ ಗೌರವವಾಗಿದೆ.

|ಎಂ.ಆರ್.ದೊರೆಸ್ವಾಮಿ, ಶಿಕ್ಷಣ ಸುಧಾರಣೆಗಳ ಮಾಜಿ ಸಲಹೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net