ಜೆಎಂಬಿ ಉಗ್ರನಿಗೆ 7 ವರ್ಷ ಜೈಲು

nia
Published on

ಬೆಂಗಳೂರು: ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಸಂಘಟನೆ ಮುಖಂಡನಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಬಾಂಗ್ಲಾದೇಶ ಮೂಲದ ಜಾಹಿದ್ದುಲ್ ಇಸ್ಲಾಂ ಅಲಿಯಾಸ್ ಕೌಸರ್ ಶಿಕ್ಷೆಗೆ ಒಳಗಾದ ಉಗ್ರ. ಡಕಾಯಿತಿ, ಪಿತೂರಿ, ಉಗ್ರ ಸಂಘಟನೆಗೆ ನಿಧಿ ಸಂಗ್ರಹ, ಮದ್ದುಗುಂಡುಗಳ ಸಂಗ್ರಹ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ.

ಬರ್ಮಾ ಮತ್ತು ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯ ಖಂಡಿಸಿ ಕೌಸರ್, ಬೌದ್ಧಧರ್ಮಿಯರನ್ನು ಟಾರ್ಗೆಟ್ ಮಾಡಿದ್ದ. ಅಲ್ಲದೆ, ಭಾರತದಿಂದ ರೊಹಿಂಗ್ಯಾ ಮುಸ್ಲಿಮರನ್ನು ಹೊರಹಾಕಲು ಕೇಂದ್ರ ಸರ್ಕಾರ ದಿಟ್ಟ ನಿರ್ಧರ ತೆಗೆದುಕೊಳ್ಳುತ್ತಿತ್ತು. ಹಾಗಾಗಿ ಬೌಧ ಧರ್ಮಿಯರ ಜತೆಗೆ ಹಿಂದುಗಳನ್ನೂ ಟಾರ್ಗೆಟ್ ಮಾಡಿ ಬಾಂಬ್ ಸ್ಫೋಟಿಸಲು ಪ್ಲ್ಯಾನ್ ಮಾಡಿದ್ದ.

ಪಾಟ್ನಾ ಜಿಲ್ಲೆ ಬೋಧ್‌ಗಯಾ ಬುದ್ಧ ಮಂದಿರಕ್ಕೆ ದೇಶ, ವಿದೇಶಗಳಿಂದ ಬೌಧಧರ್ಮಿಯರು ಬರುತ್ತಿದ್ದರು. ಇವರನ್ನೇ ಟಾರ್ಗೆಟ್ ಮಾಡಿ 2013 ಜು.7ರಂದು ಬೋಧ್‌ಗಯಾದಲ್ಲಿ ಸರಣಿ ಬಾಂಬ್ ಸ್ಫೋಟಿಸಿದ್ದ. ಆನಂತರ ಕೌಸರ್ ತನ್ನ ಸಹಚರರ ಜತೆ ಬೆಂಗಳೂರಿಗೆ ಬಂದು ರಾಮನಗರ, ಸೋಲದೇವನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಅಡಗಿದ್ದರು.

ಇಲ್ಲಿಯೂ ಸ್ಫೋಟಕ ತಯಾರಿಕೆ ಮಾಡಿದ್ದ. ಈ ಸುಳಿವು ಪತ್ತೆ ಮಾಡಿದ ಎನ್‌ಐಎ ಅಧಿಕಾರಿಗಳು ಸಹಾಯದಿಂದ 2019ರ ಜೂನ್‌ನಲ್ಲಿ ರಾಮನಗರದಲ್ಲಿ ಜೆಎಂಬಿ ಉಗ್ರ ಕೌಸರ್ ಸೇರಿ ಇತರರನ್ನು ಬಂಧಿಸಿದ್ದರು. ಪ್ರಕರಣದ ಹೆಚ್ಚಿನ ತನಿಖೆ ಕೈಗೊಂಡ ಎನ್‌ಐಎ ಅಧಿಕಾರಿಗಳು, ವಿಚಾರಣೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಈಗಾಗಲೇ ಇತರ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net