ಜಿಂಗಾಲಕುಂಟೆ ಸರ್ವೇ ಕಾರ್ಯ ಮತ್ತೆ ಮುಂದೂಡಿಕೆ

klr forest
ಕೋಲಾರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ.
Published on

ಕೋಲಾರ: ಜಿಂಗಾಲಕುಂಟೆ ಅರಣ್ಯ ಜಮೀನು ಜಂಟಿ ಸರ್ವೇ ಕಾರ್ಯವನ್ನು ಮತ್ತೆ ಮುಂದೂಡಲಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಅರಣ್ಯ ಜಮೀನು ಸರ್ವೇಯನ್ನು ಈ ಮೊದಲು ನ.6, ಆನಂತರ ಡಿ.20ಕ್ಕೆ ನಿಗದಿಪಡಿಸಿ ಮುಂದೂಡಲಾಗಿತ್ತು. ಈಚೆಗೆ ಪ್ರಾದೇಶಿಕ ಆಯುಕ್ತರು ಜ.2ಕ್ಕೆ ನಿಗದಿಪಡಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈಗ ಅದನ್ನೂ ಮತ್ತೆ ಜ.15ಕ್ಕೆ ಮುಂದೂಡಲಾಗಿದೆ. ಸತತವಾಗಿ ಮೂರನೇ ಬಾರಿ ಮುಂದೂಡಿರುವುದರಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೊಸಹುಡ್ಯ ಸ.ನಂ.1 ಮತ್ತು 2 ರಲ್ಲಿ 62.39 ಎಕರೆ ಜಮೀನನ್ನು ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸ್ವಾಧಿನದಲ್ಲಿರುವ ಜಮೀನು ಅರಣ್ಯ ಇಲಾಖೆ ಸೇರಿದ್ದಾಗಿದೆ ಎಂದು ಇಬ್ಬರ ಮಧ್ಯೆ ಕಾನೂನು ಹೋರಾಟ ನಡೆದು ಜಂಟಿ ಸರ್ವೇಗೆ ಆದೇಶಿಸಿದ್ದಾರೆ. ಇದಕ್ಕೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಿದ್ಧರಿದ್ದರೂ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಅಡ್ಡಿ ಪಡಿಸಿದ್ದಲ್ಲದೆ ಪ್ರಕರಣವನ್ನು, ಕಂದಾಯ ಇಲಾಖೆ ಕಾರ್ಯವ್ಯಾಪ್ತಿಗೆ ಒಯ್ದಿದ್ದಾರೆ. ಆದ್ದರಿಂದ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಜಂಟಿ ಸಮೀಕ್ಷೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೊಸಹುಡ್ಯ ಅರಣ್ಯ ಜಮೀನಿಗೆ ಡಿ.20ರಂದು ತೆರಳಿ ಪರಿಶೀಲನೆ ನಡೆಸಿದ್ದರು. ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳದಂತೆ ಪ್ರಾದೇಶಿಕ ಆಯುಕ್ತರು ಡಿ.19ರಂದು ಮಧ್ಯ ಪ್ರವೇಶ ಮಾಡಿ ಪತ್ರ ಬರೆದು ಸೂಚಿಸಿದ್ದರು. ಜತೆಗೆ ಸಮೀಕ್ಷೆಯನ್ನು ಜ.2ಕ್ಕೆ ಮುಂದೂಡಿದರು. ಇದರಿಂದಾಗಿ ಕಂದಾಯ ಅಧಿಕಾರಿಗಳು ಹಾಗೂ ಅರ್ಜಿದಾರರು ಸ್ಥಳಕ್ಕೆ ಆಗಮಿಸಲಿಲ್ಲ.

ಹಿಂದಿನ ಜಿಲ್ಲಾಧಿಕಾರಿ ಅಕ್ರಂಪಾಷಾ ವರ್ಗಾವಣೆಯಾಗಿ ಹೊಸ ಜಿಲ್ಲಾಧಿಕಾರಿ ಬಂದಿರುವ ನೆಪವೊಡ್ಡಿ, ಅರಣ್ಯ ಮತ್ತು ಕಂದಾಯ ಜಮೀನಿನ ಗಡಿ ಗುರುತಿಸುವ ಸಮೀಕ್ಷೆಯನ್ನು ಜ.15ಕ್ಕೆ ನಿಗದಿಪಡಿಸಲಾಗಿದೆ. ಈ ಸಂಬಂಧ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಡಿ.26ರಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ.

ಜ.2ಕ್ಕೆ ಬೆಂಗಳೂರಿನಲ್ಲಿ ಸಭೆ

ಜಿಂಗಾಲುಕುಂಟೆ ಅರಣ್ಯ ಜಮೀನು ಸರ್ವೇಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ನಡೆಸುವ ವಿಚಾರವಾಗಿ ಜ.2ರಂದು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಬಹುಮಹಡಿಗಳ ಕಟ್ಟಡದಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿಯು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರು, ಭೂಮಾಪನ ಇಲಾಖೆ ಆಯುಕ್ತರು, ಅರಣ್ಯ ಇಲಾಖೆಯ ಮುಖ್ಯಸ್ಥರು, ಕೋಲಾರ ಡಿಸಿಎಫ್​ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಸಮೇತ ಪಾಲ್ಗೊಳ್ಳಲು ಪತ್ರ ಬರೆದಿದ್ದಾರೆ. ಜತೆಗೆ ಪ್ರಾದೇಶಿಕ ಆಯುಕ್ತರು ರಚನೆ ಮಾಡಿದ್ದ ಸಮಿತಿಯನ್ನು ರದ್ದುಗೊಳಿಸಿದ್ದಾರೆ ಎನ್ನಲಾಗುತ್ತಿದೆ.

ಕೋಟ್​...

ನ್ಯಾಯಾಲಯ, ಕೇಂದ್ರ ಸರ್ಕಾರದ ಆದೇಶದಂತೆ ಜಂಟಿ ಸರ್ವೇಗೆ ಕ್ರಮಕೈಗೊಳ್ಳಲಾಗಿತ್ತು. ಇದೀಗ ಮತ್ತೆ ಸರ್ವೇ ಮುಂದೂಡಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿ ಒದಗಿಸಲಾಗುವುದು.

> ಏಡುಕೊಂಡಲು, ಡಿಸಿಎ್​, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net