

ಕೋಲಾರ: ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಅರಣ್ಯ ಜಮೀನು ಜಂಟಿ ಸರ್ವೇ ಕಾರ್ಯ ಮತ್ತೆ ಮುಂದೂಡಿಕೆಯಾಗಿರುವುದು ಸರ್ಕಾರವೇ ಬಲಾಢ್ಯರ ರಕ್ಷಣೆಗೆ ನಿಂತಿದೆಯೇ ಎಂಬ ಅನುಮಾನಕ್ಕೆ ಆಸ್ಪದ ನೀಡಿದೆ.
ಜಿಂಗಾಲಕುಂಟೆ ಅರಣ್ಯ ಜಮೀನು ಜಂಟಿ ಸರ್ವೇಯನ್ನು ಶುಕ್ರವಾರ 11ಕ್ಕೆ ಅನಿಗದಿಪಡಿಸಲಾಗಿತ್ತು. ಬೆಳಗ್ಗೆ 10.45ಕ್ಕೆ ಅರಣ್ಯ ಅಧಿಕಾರಿಗಳು ಆಗಮಿಸಿದ್ದರು. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಾಗದ ಕಾರಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿಕೊಂಡು ವಾಪಸ್ ತೆರಳಿದರು.
ಕೇಂದ್ರ ಫಾರೆಸ್ಟ್ ಜನರಲ್ ಅಫ್ ಇನ್‌ಸ್ಪೆಕ್ಟರ್ ಕಳುಹಿಸಿದ್ದ ಮೂರನೇ ಪತ್ರದ ಹಿನ್ನೆಲೆಯಲ್ಲಿ ಜಂಟಿ ಸರ್ವೇಗೆ ಎರಡೂ ಇಲಾಖಾಧಿಕಾರಿಗಳು ಚರ್ಚಿಸಿಯೇ ದಿನಾಂಕ ನಿಗದಿಪಡಿಸಲಾಗಿತ್ತು. ಇದರ ನಡುವೆ, ವಿಭಾಗೀಯ ಆಯುಕ್ತರು ಹೊರಡಿಸಿದ ಆದೇಶದಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು.
* ವರದಿ ಸಿದ್ಧಪಡಿಸಲು ಸೂಚನೆ
ಜಂಟಿ ಸರ್ವೇ ಕಾರ್ಯ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಸುಮಾರು 2 ತಾಸಿಗೂ ಹೆಚ್ಚು ಕಾದರೂ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೇ ಸ್ಥಳಕ್ಕೆ ಬರಲಿಲ್ಲ. ಆದ ಕಾರಣ ಬೆಳಗ್ಗೆಯಿಂದ ನಡೆದ ಘಟನಾವಳಿ ಒಳಗೊಂಡ ಸ್ಥಳ ಮಹಜರು ವರದಿ ಸಿದ್ಧಪಡಿಸುವಂತೆ ಏಡುಕೊಂಡಲು ಅಧಿಕಾರಿಗಳಿಗೆ ಸೂಚಿಸಿದರು.
* ಪ್ರಾದೇಶಿಕ ಆಯುಕ್ತರ ಆದೇಶವೇನು?
ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರು ಸರ್ವೇ ಕಾರ್ಯವನ್ನು ಜ.2ಕ್ಕೆ ಮುಂದೂಡುವಂತೆ ಗುರುವಾರ ರಾತ್ರಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರದ ಸರ್ವೇ ಕಾರ್ಯ ರದ್ದಾಯಿತು. ಆಯುಕ್ತರ ಮಧ್ಯ ಪ್ರವೇಶ ಅರಣ್ಯ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಎದುರುದಾರರಿಗೆ ಅರಣ್ಯ ಇಲಾಖಾಧಿಕಾರಿಗಳು ನೋಟಿಸ್ ನೀಡುವ ಅಽಕಾರವಿಲ್ಲ, ಸಕ್ಷಮ ಪ್ರಾಧಿಕಾರಿಯೂ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ, ಕಂದಾಯ ಇಲಾಖೆಯ ಅಧಿಕಾರಿಗಳು ನೋಟಿಸ್ ಪರಿಗಣಿಸಬೇಕಾಗಿಲ್ಲ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.
ಜ.2ರಂದು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತಂಡ ರಚನೆ ಮಾಡಿಕೊಂಡು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಭೂಮಾಪನ ಇಲಾಖೆ ಉಪನಿರ್ದೇಶಕ (ಡಿಡಿಎಲ್‌ಆರ್) ಹಾಗೂ ತಹಸೀಲ್ದಾರ್ ಜಂಟಿ ಸರ್ವೇ ನಡೆಸಬೇಕು. ೨೦೧೪ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ವರದಿ ಹಾಗೂ ಆ ವರದಿಯಲ್ಲಿನ ಅಂಶ ಗಮನದಲ್ಲಿಟ್ಟುಕೊಂಡು ಜಂಟಿ ಸರ್ವೆ ಕಾರ್ಯ ನಡೆಸಬೇಕು ಎಂದು ಸೂಚಿಸಿದ್ದಾರೆ
ಕೋಟ್...
ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅವರ ಕೆಲಸ ಮಾಡಿದ್ದಾರೆ. ಕಂದಾಯ ಇಲಾಖೆ ಇವತ್ತು ತಪ್ಪಿಸಿಕೊಂಡಿರಬಹುದು, ಆದರೆ, ನ್ಯಾಯಾಲಯದ ಆದೇಶ ಉಲ್ಲಂಘಿಸಲು ಸಾಧ್ಯವಿಲ್ಲ. ಯಾವತ್ತಿದ್ದರೂ ಒತ್ತುವರಿ ತೆರವು ಮಾಡಲೇ ಬೇಕು. ರಮೇಶ್‌ಕುಮಾರ್ ಬುದ್ಧಿ ಇಲ್ಲದ ಕೆಲಸ ಮಾಡಿಕೊಂಡಿದ್ದು, ಏರ್‌ಪೋರ್ಟ್ ಹತ್ತಿರ ಇದೆ ಎಂದು ವಿಮಾನ ಹತ್ತಿ ಊರು ಬಿಟ್ಟ ಮಾತ್ರಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
| ಜಿ.ಕೆ.ವೆಂಕಟಶಿವಾರೆಡ್ಡಿ, ಶಾಸಕ, ಶ್ರೀನಿವಾಸಪುರ
ಕೋಟ್...
ಪ್ರಜಾಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಒಂದೇ ಕಾನೂನು. ಈಗಾಗಲೇ ಒತ್ತುವರಿ ತೆರವಿನಿಂದ ಸಾಕಷ್ಟು ಮಂದಿ ಭೂಮಿ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಬಲಾಢ್ಯರು ಮಾಡಿಕೊಂಡಿರುವ ಒತ್ತುವರಿ ಜಮೀನು ತೆರವುಗೊಳಿಸದಿದ್ದರೆ ಸಾರ್ವಜನಿಕರಿಗೆ ಅಧಿಕಾರಿಗಳ ವಿರುದ್ಧ ತಪ್ಪು ಸಂದೇಶ ಹೋಗುತ್ತದೆ.
| ಸಮೃದ್ಧಿ ಮಂಜುನಾಥ್, ಶಾಸಕ, ಮುಳಬಾಗಿಲು