

ನವದೆಹಲಿ: ಕರೊನಾ ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಡುತ್ತಿರುವವರಿಗೆ ಅಂದರೆ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ಅನಿವಾರ್ಯ.
ಇದರ ಹೊರತಾಗಿ ಕರೊನಾ ದಾಳಿಗೆ ತುತ್ತಾಗುವ ಹೆಚ್ಚು ಸಂಭಾವ್ಯತೆ ಇರುವುದು ಪೊಲೀಸರಿಗೆ. ಮುಂಬೈನಲ್ಲಿ ಈಗಾಗಲೇ 2,500ಕ್ಕೂ ಅಧಿಕ ಪೊಲೀಸರು ಕೋವಿಡ್ಗೆ ಒಳಗಾಗಿದ್ದಾರೆ.
ಕೋವಿಡ್ ತಡೆಯಲು ಪೊಲೀಸರು ಸಾಮಾನ್ಯ ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುವುದರಿಂದ ಒಂದು ಅಪಾಯವೂ ಇದೆ. ಅಡಿಯಿಂದ ಮುಡಿವರೆಗೆ ಮುಚ್ಚಿಕೊಂಡಿರುವುದು ಜನರಿಗೆ ಪೊಲೀಸರು ಯಾರು? ಇತರ ವೈದ್ಯಕೀಯ ಸಿಬ್ಬಂದಿ ಯಾರು ಎಂಬುದು ಗೊತ್ತಾಗುವುದು ಇಲ್ಲ. ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಶ್ರಮಪಡಬೇಕಾಗುತ್ತದೆ.
ಈ ಕಾರಣಕ್ಕಾಗಿಯೇ ಉತ್ತರಪ್ರದೇಶದ ಝಾನ್ಸಿ ಪೊಲೀಸರು ವಿಶೇಷ ಪಿಪಿಇ ಕಿಟ್ ಅಭಿವೃದ್ಧಿಪಡಿಸಿದ್ದಾರೆ. ಇದು ಇತರ ಕಿಟ್ಗಳಂತೆ ಬಿಳಿ ಅಥವಾ ತಿಳಿ ನೀಲಿ ಬಣ್ಣದಲ್ಲಿಲ್ಲ. ಬದಲಾಗಿ ಪಾರದರ್ಶಕವಾಗಿದೆ. ಇದನ್ನು ಧರಿಸಿದರೆ, ಪೊಲೀಸರ ಸಮವಸ್ತ್ರ ಗೋಚರಿಸುತ್ತದೆ. ಇದು ಕರ್ತವ್ಯ ನಿರ್ವಹಿಸಲು ಅನುವಾಗುತ್ತದೆ ಎನ್ನುತ್ತಾರೆ ಝಾನ್ಸಿ ಎಎಸ್ಪಿ ಡಿ. ಪ್ರದೀಪ್ಕುಮಾರ್ ತಿಳಿಸಿದ್ದಾರೆ.
ಇದರ ಇನ್ನೊಂದು ಪ್ರಯೋಜನವೆಂದರೆ ಇದು ಜಲ ನಿರೋಧಕವಾಘಿದೆ. ಹೀಗಾಗಿ ಇದನ್ನು ಮಳೆಯಲ್ಲಿಯೂ ಧರಿಸಿ ಕೆಲಸ ಮಾಡಬಹುದು. ಮುಂಗಾರು ಶುರುವಾಗಿರುವುದರಿಂದ ಸಿಬ್ಬಂದಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಸದ್ಯ ಇಂಥ 1,000 ಪಿಪಿಇ ಕಿಟ್ಗಳನ್ನು ಸಿದ್ಧಪಡಿಸಲಾಗಿದೆ.
ಕೋವಿಡ್ ಆಸ್ಪತ್ರೆ, ಕ್ವಾರಂಟೇನ್ ಕೇಂದ್ರ, ಕಂಟೇನ್ಮೆಂಟ್ ಝೋನ್ಗಳಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಒದಗಿಸಲಾಗುತ್ತದೆ ಎಂದು ಪ್ರದೀಪ್ಕುಮಾರ್ ಮಾಹಿತಿ ನೀಡಿದ್ದಾರೆ. ಇತ ಪೊಲೀಸರಿಗೂ ಇದು ಪ್ರಯೋಜನವಾಗಲಿದೆ ಎನ್ನುವ ವಿಶ್ವಾಸ ಅವರದ್ದು.