ಮರಿಯಮ್ಮರ ಆದರ್ಶ ಎಲ್ಲರಿಗೂ ಪ್ರೇರಣೆ

9-MDG-CRISTIAN
ಮೂಡಿಗೆರೆ ತಾಲೂಕಿನ ಗೋಣಿಬೀಡು ಚರ್ಚ್‌ನಲ್ಲಿ ಮಾತೆ ಮರಿಯಮ್ಮನವರ ಪೂಜೆ ನಡೆಯಿತು. ಧರ್ಮ ಗುರುಗಳಾದ ಫಾ. ಫೀಟರ್ ಬ್ರ್ಯಾಂಕ್, ಫಾ. ಅಮರ್ ಲೋಬೋ, ಫಾ. ಸ್ಟೀವನ್ ಡಿಸೋಜ ಇತರರಿದ್ದರು.
Published on

ಮೂಡಿಗೆರೆ: ಏಸುಕ್ರಿಸ್ತರ ತಾಯಿ ಮಾತೆ ಮರಿಯಮ್ಮನವರು ಕ್ರೈಸ್ತರಿಗೆ ಶ್ರೇಷ್ಠ ತಾಯಿಯಾಗಿದ್ದಾರೆ ಎಂದು ಮೂಡಿಗೆರೆ ಸಂತ ಅಂತೋಣಿ ಚರ್ಚ್ ಧರ್ಮಗುರು ಫಾ.ಸುನಿಲ್ ರೊಡ್ರಿಗಸ್ ಹೇಳಿದರು.
ಭಾನುವಾರ ಮಾತೆ ಮರಿಯಮ್ಮ ಅವರ ಜನ್ಮದಿನದ ಪೂಜೆ ನೆರವೇರಿಸಿ ಮಾತನಾಡಿ, ಮರಿಯಮ್ಮರ ನಿಷ್ಕಳಂಕ ಪ್ರೀತಿಯನ್ನು ಗೌರವಿಸುವ ನಾವು ಮಹಿಳೆಯರಿಗೆ ಗೌರವ ನೀಡಬೇಕು. ಪ್ರಸ್ತುತ ಮಹಿಳೆಯರಿಗೆ ಭದ್ರತೆ ಅವಶ್ಯಕತೆಯಿದೆ. ಮಹಿಳೆಯರ ಬಗ್ಗೆ ಕೀಳರಿಮೆ ಸಲ್ಲದು. ಮರಿಯಮ್ಮರ ಆದರ್ಶ ಗುಣಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಚರ್ಚ್‌ನಲ್ಲಿ ಹೊಸಕ್ಕಿ ಭತ್ತದ ತೆನೆಯನ್ನು ಧರ್ಮಗುರುಗಳು ಮಂತ್ರಿಸಿ ಆಶೀರ್ವದಿಸಿದರು. ಪೂಜೆ ಬಳಿಕ ಭತ್ತದ ತೆನೆ, ಕಬ್ಬು ಹಾಗೂ ಸಿಹಿಯನ್ನು ಭಕ್ತಾದಿಗಳಿಗೆ ವಿತರಿಸಲಾಯಿತು. ಬಾಲಿಕಾ ಮಾತೆಗೆ ಭಕ್ತಾದಿಗಳು ಹೂವು ಸಮರ್ಪಿಸಿ ಭಕ್ತಿ ಮೆರೆದರು.
ಹಬ್ಬದ ಸಂದೇಶ ನೀಡಿದ ಚಿಕ್ಕಮಗಳೂರು ಚರ್ಚ್ ಧರ್ಮಗುರು ಆಂಡ್ರ್ಯೂ ಜಯರಾಜ್, ತಾಯಿ ಸ್ಥಾನ ಶ್ರೇಷ್ಠವಾದುದು. ತಾಯಿಯನ್ನು ಗೌರವಿಸಿದಲ್ಲಿ ಉತ್ತಮ ಮಾರ್ಗದಲ್ಲಿ ನಡೆದು ಸನ್ನಡತೆ ವ್ಯಕ್ತಿಗಳಾಗಿ ಮಾರ್ಪಡುತ್ತೇವೆ ಎಂದು ತಿಳಿಸಿದರು. ಧರ್ಮ ಗುರುಗಳಾದ ಫಾ.ಪೀಟರ್ ಬ್ರ್ಯಾಂಕ್, ಫಾ.ಅಮರ್ ಲೋಬೊ, ಬೆಟ್ಟದಮನೆ ಎಸ್ಟೇಟ್ ಚರ್ಚ್ ಧರ್ಮಗುರು ಫಾ.ಸ್ಟೀವನ್ ಡಿಸೋಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net