

ವಾಷಿಂಗ್ಟನ್: ಜಗತ್ತಿನ ಅತಿದೊಡ್ಡ ಆನ್ಲೈನ್ ಬಿಜಿನೆಸ್ ಕಂಪನಿ ಅಮೆಜಾನ್ನ ಷೇರುಮೌಲ್ಯ ಮಂಗಳವಾರ ಹಠಾತ್ ಗಗನಮುಖಿಯಾಗಿದ್ದು, ಕಂಪನಿಯ ಮಾಲೀಕ ಜೆಫ್ ಬೆಜೋಸ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಮೈಕ್ರೋಸಾಫ್ಟ್ ಜೊತೆಗಿನ ಕ್ಲೌಡ್ಕಂಪ್ಯೂಟಿಂಗ್ ಒಪ್ಪಂದವೊಂದನ್ನು ರದ್ದುಪಡಿಸುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಘೋಷಿಸಿದ ಬೆನ್ನಲ್ಲೇ ಅಮೆಜಾನ್ ಷೇರುಗಳ ಮೌಲ್ಯದಲ್ಲಿ ಶೇಕಡ 4.7 ಏರಿಕೆಯಾಗಿ ಬೆಜೋಸ್ ಸಂಪತ್ತು ದಾಖಲೆಯ ಏರಿಕೆ ಕಂಡಿತು. ಅವರೀಗ 211 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯನಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಅಮೆಜಾನ್ ಮೌಲ್ಯ ಏರಿಕೆಯಾದ್ದರಿಂದ ಬಿಜೋಸ್ ಸಂಪತ್ತಿನಲ್ಲಿ 8.4 ಬಿಲಿಯನ್ ಡಾಲರ್ ಹೆಚ್ಚಳವಾಗಿ ಒಟ್ಟು ಸಂಪತ್ತು 221 ಬಿಲಿಯನ್ ಡಾಲರ್ಗೆ ಏರಿದೆ ಎಂದು ಬ್ಲೂಮ್ರ್ಬಗ್ ಬಿಲಿಯನೇರ್ಸ್ ಇಂಡೆಕ್ಸ್ ತಿಳಿಸಿದೆ.
ಜನವರಿಯಲ್ಲಿ ಎಲನ್ ಮಸ್ಕ್ ಸಂಪತ್ತು ಸಂಕ್ಷಿಪ್ತ ಅವಧಿಗೆ 210 ಬಿಲಿಯ ಡಾಲರ್ಗೆ ಏರಿದ್ದೇ ಈ ಹಿಂದಿನ ಅತ್ಯಧಿಕ ಸಂಪತ್ತಾಗಿತ್ತು. ಬಿಜೋಸ್ ಮತ್ತು ಎಲನ್ ಮಸ್ಕ್ ಇವರಿಬ್ಬರೇ ಈ ವರ್ಷದ ಪ್ರಥಮಾರ್ಧದಲ್ಲಿ ಜಗತ್ತಿನ ಕುಬೇರರಾಗಿ ಮೆರೆದಿದ್ದಾರೆ. ಆದರೆ ಮಾರ್ಚ್ ಮಧ್ಯದಿಂದೀಚೆಗೆ ಅಮೆಜಾನ್ ಷೇರು ಮೌಲ್ಯದಲ್ಲಿ ಶೇಕಡ 20 ಏರಿಕೆಯಾಗಿರುವುದರಿಂದ ಬೆಜೋಸ್ ಹಿಡಿತವೇ ಬಿಗಿಯಾಗಿತ್ತು.
ಫ್ರಾನ್ಸ್ನ ಐಷಾರಾಮಿ ಉತ್ಪನ್ನಗಳ ದಿಗ್ಗಜ ಬರ್ನಾಡ್ ಅರ್ನಾಲ್ಟ್ 168.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಕುಬೇರರ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಆಗಿದ್ದೇನು?
2019ರಲ್ಲಿ ಮೈಕ್ರೋಸಾಫ್ಟ್ ಕಂಪನಿಯೊಂದಿಗೆ ಮಾಡಿಕೊಳ್ಳಲಾಗಿದ್ದ 10 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ರದ್ದುಪಡಿಸುವುದಾಗಿ ಪೆಂಟಗನ್ ಮಂಗಳವಾರ ಪ್ರಕಟಿಸಿದೆ. ಇದರಿಂದ ಅಮೆಜಾನ್ ಕಂಪನಿಗೆ ಲಾಭವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ಷೇರು ಬೆಲೆ ಏರಿಕೆ ಕಂಡಿದೆ.