

ಮಂಡ್ಯ: ದುರಾಸೆಯಿಂದ ಮನುಕುಲ ವಿನಾಶದತ್ತ ದಾಪುಗಾಲು ಇಡುತ್ತಿರುವುದು ಗೋಚರವಾಗುತ್ತಿದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಎಚ್ಚರಿಸಿದರು.
ನಗರದ ಮರೀಗೌಡ ಬಡಾವಣೆಯ 2ನೇ ಕ್ರಾಸ್‌ನಲ್ಲಿ ಕೃಷಿಕ ಲಯನ್ಸ್ ಸಂಸ್ಥೆಯಿಂದ ವಿಶ್ವ ಜೀವಿವೈವಿಧ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜೀವವೈವಿಧ್ಯವನ್ನು ಮರಳಿ ನಿರ್ಮಿಸಿ ಎಂಬ ಘೋಷ ವಾಕ್ಯದೊಂದಿಗೆ ಕೆ.ಸಿದ್ದೇಗೌಡ(ಗುರೂಜಿ) ಉದ್ಯಾನ ನಿರ್ಮಾಣಕ್ಕೆ ಸಸಿ ನೆಟ್ಟು ಮಾತನಾಡಿದರು.
ಭೂಮಿ ವೈವಿಧ್ಯತೆಯ ಜೀವರಾಶಿಗಳ ಕಣಜವಾಗಿದೆ. ಜೀವಸಂಕುಲಗಳ ನಿಧಿ ಭೂ ಗ್ರಹವಾಗಿದೆ. ಜಗತ್ತಿನಲ್ಲಿ ಮನುಷ್ಯನ ನೆರವಿಲ್ಲದೇ ವನ್ಯಜೀವಿಗಳು ಬದುಕಿ ಉಳಿಯಬಲ್ಲವು ಹಾಗೂ ಬೆಳೆಯಬಲ್ಲವು. ಆದರೆ ವನ್ಯಜೀವಿಗಳಿಲ್ಲದೇ ಮನುಷ್ಯ ಬದುಕಲಾರ. ಪ್ರಾಣಿಗಳು ಮನುಕುಲದ ಜೀವಾಳ. ಸಾಕುಪ್ರಾಣಿಗಳು, ಪಕ್ಷಿಗಳು ಹಾಗೂ ವನ್ಯಜೀವಿಗಳ ಪರೋಕ್ಷ ಉಪಕಾರವನ್ನು ಸ್ಮರಿಸಬೇಕಿದೆ ಎಂದು ಸಲಹೆ ನೀಡಿದರು.
ಭೂಮಿಯಲ್ಲಿ ಅಸಂಖ್ಯಾತ ಜೀವಿಗಳು ಹುಟ್ಟುತ್ತವೆ ಬೆಳೆಯುತ್ತವೆ ಹಾಗೂ ಅಂತ್ಯಗೊಳುತ್ತವೆ. ಜೀವರಾಶಿಗಳು ಒಂದರಂತೆ ಇನ್ನೊಂದಿಲ್ಲ. ಇನ್ನೊಂದರಂತೆ ಮತ್ತೊಂದಿಲ್ಲ. ಜೀವಿಗಳಲ್ಲಿ ಕಂಡುವರುವ ಈ ವಿವಿಧತೆಯನ್ನೇ ಜೀವವೈವಿಧ್ಯತೆ ಎನ್ನುತ್ತೇವೆ. ವೈವಿಧ್ಯಮಯ ಜೀವರಾಶಿಗಳೊಂದಿಗೆ ಮನುಷ್ಯ ಬದುಕಬೇಕು. ಮನುಷ್ಯನೇ ಪರಿಸರ ಅಲ್ಲ. ಜೀವಸಂಪತ್ತು ಸಸ್ಯ ಸಂಪತ್ತಿನಿಂದ ಮಾತ್ರ ಮನುಷ್ಯ ಬದುಕಲಿಕ್ಕೆ ಸಾಧ್ಯವೇ ಹೊರತು ಮನುಷ್ಯನಿಂದ ಪರಿಸರ ಬದುಕುವುದಿಲ್ಲ ಎಂಬುದನ್ನು ಅರಿಯಬೇಕಿದೆ ಎಂದು ಸಲಹೆ ನೀಡಿದರು.
ಬದಲಾಗುತ್ತಿರುವ ಪ್ರಕೃತಿಯ ಬಗ್ಗೆ ಜಾಗೃತಿ ಹಾಗು ಮಾಹಿತಿ ನೀಡಲು ವಿಶ್ವ ವನ್ಯಜೀವಿ ದಿನವನ್ನು ವಿಶ್ವದ ಎಲ್ಲ ರಾಷ್ಟ್ರಗಳು ಆಚರಿಸಲಾಗುತ್ತಿದೆ. ಮಾನವನ ಚಟುವಟಿಕೆಗಳಿಂದ ವೃಕ್ಷ ಮತ್ತು ಪ್ರಾಣಿ ಜೀವ ಸಂಕುಲ ಸಮಸ್ಯೆ ಎದುರಿಸುತ್ತಿರುವ ವಿಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಪ್ರಕೃತಿಯ ಸಮತೋಲನಕ್ಕೆ ಜೀವವೈವಿಧ್ಯತೆಗಳು ಅಧಾರ. ಜೀವರಾಶಿಗಳು ಭೂಮಿಯ ಮೇಲಿರಲಿ, ನೀರಲ್ಲಿರಲಿ, ಮಣ್ಣಿನಲ್ಲಿರಲಿ ಅಥವಾ ಆಕಾಶದಲ್ಲಿ ಹಾರಾಡುತ್ತಿರಲಿ. ಅವುಗಳ ಪಾತ್ರ ಪರಿಸರ ನಿರ್ವಹಣೆಯಲ್ಲಿ ಅನನ್ಯವಾಗಿದೆ ಎಂದು ತಿಳಿಸಿದರು.
ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಕೃಷಿಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮೋಹನ್‌ಕುಮಾರ್, ದಂತ ವೈದ್ಯ ಡಾ.ಚಂದ್ರಶೇಖರ್, ಮಂಡ್ಯ ನಗರ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಶಿವಕುಮಾರ್, ಮುಖಂಡರಾದ ದೇವೇಗೌಡ, ಪ್ರೊ.ಶಂಕರೇಗೌಡ, ಪ್ರಾಧ್ಯಾಪಕ ನಂಜಪ್ಪ, ಯೋಗೇಶ್, ರವಿಕುಮಾರ್, ಸುರೇಶ್ ಕೀಲಾರ, ಭೀಮರಾಜ್, ತಿಲಕ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ವಿರೋಧಿ ನಿವೃತ್ತ ಶಿಕ್ಷಕ ಜಯಶಂಕರ್ ಅವರು ಬಟ್ಟೆ ಬ್ಯಾಗ್‌ಗಳನ್ನು ನಾಗರಿಕರಿಗೆ ವಿತರಿಸುವುದರ ಜತೆಗೆ ಪ್ಲಾಸ್ಟಿಕ್‌ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ ನೀಡಿದರು. ಅಂತೆಯೇ ಕೋಟ್ಯಾಂತರ ರೂ. ಬೆಳೆಬಾಳುವ ಜಾಗವನ್ನು ಉದ್ಯಾನಕ್ಕೆ ದಾನವಾಗಿ ನೀಡಿರುವ ಹಿನ್ನೆಲೆಯಲ್ಲಿ ಕೆ.ಸಿದ್ದೇಗೌಡ (ಗುರೂಜಿ) ಉದ್ಯಾನವನ ಎಂದು ಘೋಷಿಸಿ ಹೆಸರಿಟ್ಟು ಅಭಿವೃದ್ದಿಗಾಗಿ ನಗರಸಭೆಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.