ಮಗು ಪಡೆಯಲು 9 ವರ್ಷ ಕಾದಿದ್ದ ದಂಪತಿಗೆ ಶಾಕ್​: ಅವಳಿ ಮಕ್ಕಳನ್ನು ಕೊಂದ ಸಾಕು ನಾಯಿಗಳು!

Twins
Published on

ಸಾವೋಪೌಲೊ: ನಾಯಿಗಿಂತ ನಿಯತ್ತಿನ ಪ್ರಾಣಿ ಇನ್ನೊಂದಿಲ್ಲ ಎಂಬುದು ಜನರ ನಂಬಿಕೆ ಹಾಗೂ ಸತ್ಯವೂ ಹೌದು. ತನ್ನನ್ನು ಸಾಕಿದವರಿಗಾಗಿ ಪ್ರಾಣವನ್ನು ನೀಡಲು ನಾಯಿ ಹಿಂಜರಿಯುವುದಿಲ್ಲ. ಯಾವುದೇ ಸ್ವಾರ್ಥವಿಲ್ಲದ ನಿಸ್ವಾರ್ಥ ಜೀವಿ ನಾಯಿ ಎನ್ನುತ್ತೇವೆ. ಆದರೆ, ಅದೆಲ್ಲವನ್ನು ಈ ಸ್ಟೋರಿಯಲ್ಲಿ ಎದರಾಗುವ ಶ್ವಾನಗಳು ಸುಳ್ಳು ಮಾಡಿಬಿಟ್ಟಿವೆ.

ಹೌದು, ಕೆಲವೇ ದಿನಗಳ ಹಿಂದೆ ಹುಟ್ಟಿದ ಅವಳಿ ಸಹೋದರಿಯರನ್ನು ಸಾಕು ನಾಯಿಗಳೇ ಮನೆಯಲ್ಲಿ ಯಾರು ಇಲ್ಲದ ವೇಳೆ ದಾಳಿ ಮಾಡಿ ಕಾಲುಗಳಿಂದ ಪರಚಿ, ಗಾಯಗೊಳಿಸಿ ಸಾಯಿಸಿರುವ ಮನಕಲಕುವ ಘಟನೆಯೊಂದು ಬ್ರೆಜಿಲ್​ನಿಂದ ವರದಿಯಾಗಿದೆ.

ಲ್ಯಾಬ್ರಡರ್​ ಮತ್ತು ಅಮೆರಿಕನ್​ ಫಾಕ್ಸ್​ಹುಂಡ್​ ಹೆಸರಿನ ಹೊಟ್ಟೆಕಿಚ್ಚಿನ ನಾಯಿಗಳೆರಡು ಶ್ವಾನ ಕುಲಕ್ಕೆ ಅವಮಾನವೆಸಗಿವೆ. ಬ್ರೆಜಿಲ್​ನ ಈಶಾನ್ಯ ರಾಜ್ಯ ಬಹಿಯಾದ ಪಿರಿಪಾ ನಗರದಲ್ಲಿ ಕಳೆದ ಮಂಗಳವಾರ ಘಟನೆ ನಡೆದಿದ್ದು, ಮಕ್ಕಳನ್ನು ಬಿಟ್ಟ ಪಕ್ಕದ ಮನೆಯವರೊಂದಿಗೆ ಮಾತನಾಡಲು ಮಾಲಕಿ ತೆರಳಿದ್ದಾಗ ಎರಡು ನಾಯಿಗಳು ಕೇವಲ 26 ದಿನಗಳ ಹಸುಗೂಸುಗಳನ್ನು ಪರಚಿ, ಗಾಯಗೊಳಿಸಿ ಕೊಂದಿವೆ.

ಬೆಡ್​ರೂಮ್​ನಲ್ಲಿ ಮಕ್ಕಳಿಬ್ಬರ ಅಳುವ ಶಬ್ಧ ಕೇಳಿ ತಾಯಿ ಎಲೈನ್​ ನೋವೈಸ್​ (29) ಓಡೋಡಿ ಬರುತ್ತಾಳೆ. ಆದರೂ, ಮಕ್ಕಳನ್ನು ಉಳಿಸಿಕೊಳ್ಳಲು ಆಕೆಯಿಂದ ಸಾಧ್ಯವಾಗುವುದಿಲ್ಲ.

ಕೌನ್ಸಿಲ್ ಉದ್ಯೋಗಿಯಾಗಿರುವ ನೋವೈಸ್ ಅವರಿಗೆ 9 ವರ್ಷಗಳಿಂದ ಮಕ್ಕಳಾಗಿರುವುದಿಲ್ಲ. ಅದೃಷ್ಟವೆಂಬತೆ ಅವಳಿ ಮಕ್ಕಳಾಗಿರುತ್ತದೆ. ಆದರೆ, ಉದ್ರಿಕ್ತ ಶ್ವಾನಗಳು ಅವಳಿ ಸಹೋದರಿಯರನ್ನು ಎಳೆದಾಡಿ, ತುಂಬಾ ಪರಚಿ ಗಾಯಗೊಳಿಸಿ ಬಿಡುತ್ತವೆ. ಅಲ್ಲದೆ, ಮಕ್ಕಳ ಹೊಟ್ಟೆಯ ಮೇಲೆ ಶ್ವಾನಗಳು ಮಾರಕ ಹಾನಿ ಮಾಡಿಬಿಡುತ್ತವೆ. ಇದರಿಂದಾಗಿ ಮಕ್ಕಳು ಮರಣ ಹೊಂದುತ್ತವೆ.

ಮನೆ ಪಕ್ಕದ ನರ್ಸ್​ ಗಂಭೀರವಾಗಿ ಗಾಯಗೊಂಡ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ. ಆದರೆ, ಒಂದು ಮಗು ಅದೇ ಸಂದರ್ಭದಲ್ಲಿ ಸಾವಿಗೀಡಾಗುತ್ತದೆ. ಇನ್ನೊಂದು ಮಗು ಬಾರ್ಬೋಸಾ ಮುನ್ಸಿಪಲ್​ ಆಸ್ಪತ್ರೆಯಲ್ಲಿ ಮರಣ ಹೊಂದುತ್ತದೆ.

ಮಕ್ಕಳ ಜನನದ ಬಳಿಕ ನಮ್ಮ ಮೇಲೆ ಹೆಚ್ಚಿನ ಗಮನವನ್ನು ಮಾಲೀಕರು ನೀಡುತ್ತಿಲ್ಲ ಎಂಬ ಹೊಟ್ಟೆಕಿಚ್ಚಿನಿಂದ ಶ್ವಾನಗಳು ಮಕ್ಕಳನ್ನು ಕೊಂದಿವೆ ಎಂದು ನಂಬಲಾಗಿದೆ. ಮಗುವಾಗುದಕ್ಕೂ ಮುನ್ನ ಕುಟುಂಬಸ್ಥರು ಶ್ವಾನಗಳನ್ನು ಹೆಚ್ಚು ಅಚ್ಚಿಕೊಂಡಿದ್ದರಂತೆ. ಆದರೂ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net