

ನವದೆಹಲಿ: ಗೃಹಸಚಿವ ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿರುವ ಸಂಯುಕ್ತ ಜನತಾದಳ ಪಕ್ಷದ ನಾಯಕ ಮತ್ತು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್, ನೀವು ಧೈರ್ಯವಾಗಿ ಘೋಷಿಸಿದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಸಮಯ ಮಿತಿಯೊಳಗೆ ಅನುಷ್ಠಾನ ಮಾಡಿ ಎಂದು ಸವಾಲು ಹಾಕಿದ್ದಾರೆ.
ಬುಧವಾರ ಟ್ವೀಟ್ ಮಾಡುವ ಮೂಲಕ ಅಮಿತ್ ಷಾ ಅವರನ್ನು ಪ್ರಶಾಂತ್ ಕಿಶೋರ್ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದ ನಾಗರಿಕರ ಭಿನ್ನಾಭಿಪ್ರಾಯವನ್ನು ಒಪ್ಪದಿರುವುದು ಯಾವುದೇ ಸರ್ಕಾರದ ಬಲದ ಸಂಕೇತವಲ್ಲ. ಅಮಿತ್ ಷಾ ಜಿ, ಸಿಎಎ ಮತ್ತು ಎನ್ಆರ್ಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ನೀವು ಲೆಕ್ಕಿಸುವುದೇ ಇಲ್ಲ ಎಂದಾದಲ್ಲಿ, ರಾಷ್ಟ್ರದ ಎದುರು ಧೈರ್ಯವಾಗಿ ಘೋಷಣೆ ಮಾಡಿದ ಸಿಎಎ ಮತ್ತು ಎನ್ಆರ್ಸಿಯನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತನ್ನಿ ಎಂದು ಸವಾಲೆಸೆದಿದ್ದಾರೆ.
ಎನ್ಆರ್ಸಿಯನ್ನು ಔಪಚಾರಿಕ ಮತ್ತು ಸ್ಪಷ್ಟವಾಗಿ ತಿರಸ್ಕರಿಸಿರುವ ಕಾಂಗ್ರೆಸ್ಗೆ ಭಾನುವಾರವಷ್ಟೇ ಪ್ರಶಾಂತ್ ಧನ್ಯವಾದಗಳನ್ನು ಹೇಳಿದ್ದರು. ಅದರಲ್ಲೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾಗೆ ವಿಶೇಷ ಧನ್ಯವಾದ ತಿಳಿಸಿದ್ದರು. ಇದರೊಂದಿಗೆ ತಮ್ಮ ಆಡಳಿತದ ಬಿಹಾರದಲ್ಲಿ ಸಿಎಎ ಮತ್ತು ಎನ್ಆರ್ಸಿ ಅನುಷ್ಠಾನ ಮಾಡುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ಹೊಗಳುವ ಮೂಲಕ ಜೆಡಿಯು ಮಿತ್ರಪಕ್ಷದ ಬಿಜೆಪಿಗೆ ತಿರುಗೇಟು ನೀಡಿದ್ದರು.
ಇದರ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ, ತುಂಬಾ ಬುದ್ಧಿವಂತ ಜನರು ಎನ್ಆರ್ಸಿ ಮತ್ತು ಸಿಎಎ ವಿಚಾರದಲ್ಲಿ ಯೋಜಿತ ಪ್ರಚಾರವನ್ನು ಮಾಡಿಕೊಳ್ಳುತ್ತಿದ್ದರೆ. ಜೆಡಿಯು ಬೆಂಬಲದೊಂದಿಗೆ ಸಂಸತ್ತಿನಲ್ಲಿ ಬಿಲ್ ಪಾಸ್ ಆಗಿದ್ದರು. ಇದೀಗ ವಿರೋಧಿಸುತ್ತಿರುವುದು ಸರಿಯೇ ಎಂದು ಪ್ರಶ್ನಿಸಿ, ಬಿಹಾರ ಸೇರಿ ಎಲ್ಲ ರಾಜ್ಯಗಳಲ್ಲೂ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಪ್ರತಿ ಸವಾಲು ಹಾಕಿದ್ದಾರೆ. (ಏಜೆನ್ಸೀಸ್)