ಜೆಡಿಎಸ್ ಸೀಟು ಹಂಚಿಕೆ ಮಾತುಕತೆ ಮುಂದಕ್ಕೆ; ಗೋವಾ ಸಿಎಂ ಮೊರೆ ಹೋದ ಕುಮಾರಸ್ವಾಮಿ

BJP JDS
Published on

ಬೆಂಗಳೂರು: ಬಿಜೆಪಿ-ಜೆಡಿಎಸ್ ಜತೆ ಮೈತ್ರಿ ಅಂತಿಮಗೊಂಡಿದೆ. ಆದರೆ, ಸೀಟು ಹಂಚಿಕೆ ಮಾತ್ರ ಮುಂದೂಡುತ್ತಲೇ ಇದೆ.

ಮೈತ್ರಿಯಾಗಿ ಒಂದೇ ಒಂದು ವಾರದೊಳಗೆ ಸೀಟು ಹಂಚಿಕೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಜೆಡಿಎಸ್ ವರಿಷ್ಠರು ಈ ನಿಟ್ಟಿನಲ್ಲಿ ಉತ್ಸುಕತೆ ಕೂಡ ತೋರಿದ್ದರು. ಎರಡು ಮೂರು ಬಾರಿ ದೆಹಲಿ ವರಿಷ್ಠರ ಭೇಟಿಗೆ ಸಮಯ ಕೇಳಿದ್ದರು. ಆದರೆ ಇನ್ನೂ ಭೇಟಿಗೆ ಕಾಲ ಕೂಡಿ ಬಂದಿಲ್ಲ.

ಮೈತ್ರಿ ಮಾತುಕತೆ ಸಂದರ್ಭದಲ್ಲಿ ತೋರಿದ ಉತ್ಸುಕತೆಯನ್ನು ಬಿಜೆಪಿ ಹೈಕಮಾಂಡ್ ಸೀಟು ಹಂಚಿಕೆ ವಿಚಾರದಲ್ಲಿ ತೋರುತ್ತಿಲ್ಲವೆಂದು ಹೇಳಲಾಗುತ್ತದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಅ.22 ರಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಮೈತ್ರಿಗೆ ಮಧ್ಯಸ್ಥಿಕೆ ವಹಿಸಿದ್ದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಬಳಿ ತೆರಳಿ ಬಿಜೆಪಿ ದೆಹಲಿ ಹೈಕಮಾಂಡ್ ಮೇಲೆ ಒತ್ತಡ ಹಾಕಿಸಿದ್ದಾರೆ. ಆದರೂ ಕುಮಾರಸ್ವಾಮಿ ಭೇಟಿಗೆ ಇನ್ನೂ ಸಮಯ ನಿಗದಿಯಾಗಿಲ್ಲ.

ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿ ಬಿಜೆಪಿ ಹೈಕಮಾಂಡ್ ಬ್ಯೂಸಿ ಆಗಿರುವುದರಿಂದ ಭೇಟಿಗೆ ಕಾಲಾವಕಾಶ ನೀಡಿಲ್ಲ ಎಂದು ಹೇಳಲಾಗುತ್ತದೆ. ಅಲ್ಲದೆ ಸೀಟು ಹಂಚಿಕೆ ಮಾಡುವ ಮುನ್ನ ಬಿಜೆಪಿ ಹೈಕಮಾಂಡ್ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಿಸುವ ಇರಾದೆ ಹೊಂದಿದೆ. ಹಾಗಾಗಿ ಸೀಟು ಹಂಚಿಕೆ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿವೆ.

ಸಮನ್ವಯದ ಸಮಸ್ಯೆ

ಏಕಾಏಕಿ ಸೀಟು ಹಂಚಿಕೆ ಮಾಡಿದರೆ ರಾಜ್ಯ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಸಮನ್ವಯದ ಕೊರತೆ ಉಂಟಾಗಬಹುದು. ಅಲ್ಲದೆ ಜೆಡಿಎಸ್ ಜತೆ ಕೋ-ಆರ್ಡಿನೇಟ್ ಮಾಡಲು ಬಿಜೆಪಿಯ ಒಬ್ಬ ನಾಯಕರಿಗೆ ಹೊಣೆ ವಹಿಸಬೇಕಾಗುತ್ತದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಚರ್ಚೆ ವಿಳಂಬಗುತ್ತಿದೆ ಎನ್ನಲಾಗಿದೆ.

ರಾಜ್ಯನಾಯಕರಿಗೆ ಸ್ಪಷ್ಟ ಮಾಹಿತಿ ಇಲ್ಲ

ಸೀಟು ಹಂಚಿಕೆ ಹಾಗೂ ಚುನಾವಣಾ ಕಾರ್ಯತಂತ್ರದ ಸೂಕ್ಷ್ಮ ವಿಚಾರಗಳ ಬಗ್ಗೆ ಬಿಜೆಪಿ ರಾಜ್ಯ ನಾಯಕರಿಗೂ ಸ್ಪಷ್ಟ ಮಾಹಿತಿ ಇಲ್ಲ. ಇನ್ನೊಂದು ಮೂಲಗಳ ಪ್ರಕಾರ ನ.5ರ ಬಳಿಕ ಇಲ್ಲವೇ ಪಂಚರಾಜ್ಯ ಚುನಾವಣಾ ಲಿತಾಂಶ ಪ್ರಕಟವಾದ ಬಳಿಕ ಜೆಡಿಎಸ್ ವರಿಷ್ಠರ ಜತೆ ಮಾತುಕತೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತದೆ.

ಒಮ್ಮತ ಮೂಡಿಸುವ ಅನಿವಾರ್ಯತೆ

ರಾಜ್ಯದ ಯಾವುದೇ ನಾಯಕರನ್ನೂ ಸಂಪರ್ಕಿಸದೇ ಜೆಡಿಎಸ್ ಜತೆ ಬಿಜೆಪಿ ದೆಹಲಿ ಹೈಕಮಾಂಡ್ ಮೈತ್ರಿ ಒಪ್ಪಂದ ಮಾಡಿಕೊಂಡಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕರ ಆಯ್ಕೆ ಬಳಿಕ ಸೀಟು ಹಂಚಿಕೆ ಮಾತುಕತೆ ನಡೆದರೆ ಹೆಚ್ಚು ಲಪ್ರದವಾಗಬಹುದು. ಜತೆಗೆ ಉಭಯ ಪಕ್ಷಗಳಲ್ಲಿ ಒಮ್ಮತ ಮೂಡಿಸಲು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿ ದೆಹಲಿ ವರಿಷ್ಠರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ 28 ಸ್ಥಾನಗಳ ಪೈಕಿ ಜೆಡಿಎಸ್ ಹಾಸನ, ಮಂಡ್ಯ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಲು ಪೂರ್ವ ಸಿದ್ಧತೆ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net