ಜೆಡಿಎಸ್ ತೆನೆ ಹೊರೆ ಹೊರುವ ನಾಯಕರಿಗಾಗಿ ನಡೆದಿದೆ ಹುಡುಕಾಟ

hdk
Published on

ಬೆಂಗಳೂರು:

ಎಚ್.ಡಿ.ಕುಮಾರಸ್ವಾಮಿ ಅವರು, ಕೇಂದ್ರದಲ್ಲಿ ಸಚಿವ ಸ್ಥಾನದ ಜವಬ್ದಾರಿ ಹೊತ್ತ ಮೇಲೆ ಜೆಡಿಎಸ್ ಪಕ್ಷದ ಸಂಘಟನೆಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದ ಕಾರಣ ಪರ‌್ಯಾಯ ಸಾಧ್ಯತೆಗಳ ಬಗ್ಗೆ ಪಕ್ಷದ ವರಿಷ್ಠರು ಗಮನಹರಿಸಿದ್ದಾರೆ.

ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಅವರೂ ಕೂಡ ಜವಬ್ದಾರಿ ಮುಕ್ತಗೊಳಿಸುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ. ದೇವೇಗೌಡರ ಸ್ಥಾನಕ್ಕೆ ಕುಮಾರಸ್ವಾಮಿ ಅವರೇ ನಿಯೋಜನೆಗೊಳ್ಳುವ ಸಾಧ್ಯತೆ ಇದೆ.

ಇನ್ನು ರಾಜ್ಯದಲ್ಲಿ ತೆರವಾಗುವ ಅಧ್ಯಕ್ಷ ಹುದ್ದೆಗೆ ರಾಜ್ಯದಾದ್ಯಂತ ಕ್ರೀಯಾಶೀಲವಾಗಿ ಪಕ್ಷ ಸಂಘಟನೆ ಮಾಡುವ ನಾಯಕತ್ವ ಹೊಂದಿರುವ ನಾಯಕರ ತಲಾಷ್ ನಡೆಯುತ್ತಿದೆ. ಕುಮಾರಸ್ವಾಮಿ ಅವರ ಸುಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಬೇಕು ಎನ್ನುವ ಒತ್ತಾಯಗಳು ಪಕ್ಷದೊಳಗೆ ದಟ್ಟವಾಗಿವೆ. ಯುವಕರಿಗೆ ಅವಕಾಶ ನೀಡಿದರೆ ಉತ್ತಮ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ, ಹಿರಿಯರು ಇದಕ್ಕೆ ಯಾವ ರೀತಿಯಲ್ಲಿ ಸಹಕಾರ ನೀಡುತ್ತಾರೆ ಎನ್ನುವುದು ಕುತೂಹಲಕಾರಿಯಾಗಿದೆ. ಯಾರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕು ಎನ್ನುವುದು ಇನ್ನೂ ಅಂತಿಮ ನಿರ್ಣಯವಾಗಿಲ್ಲ. ಆದರೆ, ಈ ನಿಟ್ಟಿನಲ್ಲಿ ಚರ್ಚೆಗಳು ಮಾತ್ರ ಭರ್ಜರಿಯಾಗಿಯೇ ನಡೆಯುತ್ತಿವೆ.

ಈ ನಡುವೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತೆ ಹಾಸನ ಜಿಲ್ಲೆಯಲ್ಲಿ ಸಕ್ರೀಯವಾಗಿದ್ದು, ಸಭೆ ಸಮಾರಂಭಗಳನ್ನು ನಡೆಸಲು ಮುಂದಾಗಿದ್ದಾರೆ. ಅಷ್ಟೆ ಅಲ್ಲ, ನಿಂತು ಹೋಗಿದ್ದ ಸುದ್ದಿಗೋಷ್ಠಿಗಳು ಮತ್ತೆ ಪ್ರಾರಂಭವಾಗಿದ್ದು, ಸರ್ಕಾರದ ಮೇಲೆ ವಾಗ್ದಾಳಿ ಎಂದಿನಂತೆ ನಡೆಸುತ್ತಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಸಜ್ಜು ಮಾಡಲು ಈಗಿನಿಂದಲೇ ಕಸರತ್ತು ಪ್ರಾರಂಭವಾಗಿವೆ ಎಂದು ಮೂಲಗಳು ಖಚಿತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net