ಬೆಂಗಳೂರಿನಲ್ಲಿಯೇ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ, ರಾಜ್ಯ ಕಾರ್ಯರಿಣಿಗೆ ದಳಪತಿಗಳ ಚಿಂತನೆ

Hd Devegowda
Published on

ಬೆಂಗಳೂರು:

ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಜತೆಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸುವ ಬಗ್ಗೆ ಪಕ್ಷದ ವರಿಷ್ಠರು ಚಿಂತನೆ ನಡೆಸುತ್ತಿದ್ದು, ಬೆಂಗಳೂರಿನಲ್ಲಿಯೇ ಆಯೋಜನೆಗೊಳ್ಳುವ ಸಾಧ್ಯತೆ ಇದೆ.

ರಾಷ್ಟ್ರೀಯ ಕಾರ್ಯಕಾರಿಣಿಯನ್ನು ದೆಹಲಿಯಲ್ಲಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆದಿತ್ತು. ಆದರೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಆರೋಗ್ಯದ ದೃಷ್ಟಿಯಿಂದ ಬೆಂಗಳೂರಿನಲ್ಲಿಯೇ ಆಯೋಜನೆ ಮಾಡುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಬರಲಾಗಿದೆ.

ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುವ ಸಂದರ್ಭದಲ್ಲಿಯೇ ರಾಜ್ಯ ಕಾರ್ಯಕಾರಿಣಿಯನ್ನು ನಡೆಸುವುದು ಸೂಕ್ತ ಎನ್ನುವುದು ಹಲವು ಮುಖಂಡರ ಅಭಿಪ್ರಾಯವಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಇದಕ್ಕೆ ಅಸ್ತು ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿಯೇ ಕಾರ್ಯಕಾರಿಣಿ ನಡೆಸುವುದು ನಿರ್ಧಾರವಾಗಿದ್ದು, ಯಾವಾಗ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ.

ಬಿಹಾರ ಚುನಾವಣೆ ಹತ್ತಿರುವ ಬರುತ್ತಿರುವ ಹಿನ್ನೆಲೆಯಲ್ಲಿ ದೀಪಾವಳಿಗೆ ಮುನ್ನ ಆಯೋಜಿಸಿ ಸಂಘಟನಾತ್ಮಕ ಚಟುವಟಿಕೆ ಪರಾಮರ್ಶೆ ಮಾಡಬೇಕು ಎನ್ನುವುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮಾರ್ಗದರ್ಶನ ನೀಡಿದ್ದು, ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ದೀಪಾವಳಿಗೂ ಮೊದಲು ಅಥವಾ ನಂತರ ಆಗಬಹುದು ಎಂದು ಮೂಲಗಳು ಖಚಿತಪಡಿಸಿವೆ.

ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದಲ್ಲಿ ಪಕ್ಷದ ಪದಾಧಿಕಾರಿಗಳ ಬದಲಾವಣೆಯೂ ಚರ್ಚೆಗೆ ಬರಬಹುದು. ಅಗತ್ಯ ಇರುವ ಕಡೆಯಲ್ಲಿ ಪಕ್ಷದ ಪುನಾರಚನೆಗೂ ವರಿಷ್ಠರು ಮುಂದಾಗಬಹುದು ಎಂದು ಮೂಲಗಳು ಖಚಿತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net