

ಬೆಂಗಳೂರು: ವಿಧಾನಸಭೆಯಿಂದ 18 ಜನ ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಅವರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ(JDS MLA writes to Speaker seeking withdrawal of suspension of 18 BJP MLAs)ಪತ್ರ ಬರೆದಿದ್ದಾರೆ.
ಮಾರ್ಚ್ 21 ರಂದು ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಪ್ರತಿಭಟಿಸಿ ತಮ್ಮ ಪೀಠದ ಎದುರು ಬಂದಾಗ ಪೀಠಕ್ಕೆ ಅಗೌರವ ತೋರಿದ ಕಾರಣ ನೀಡಿ ಬಿಜೆಪಿಯ 18 ಶಾಸಕರನ್ನು 6 ತಿಂಗಳು ಅಮಾನತು ಮತ್ತು ಕೆಲವು ಕಠಿಣ ನಿರ್ಣಯ ಕೈಗೊಂಡಿದ್ದೀರಿ. ಇದರಿಂದ ಕ್ಷೇತ್ರದಲ್ಲಿ ಶಾಸಕರ ಬಗ್ಗೆ ಅದರಲ್ಲೂ ನೂತನ ಶಾಸಕರ ಬಗ್ಗೆ ಸಾರ್ವಜನಿಕರು ಹಾಗೂ ಅಧಿಕಾರಿ ವರ್ಗದವರು ಅಗೌರವದಿಂದ ನೋಡುವಂತಾಗಿದೆ. ಆದ್ದರಿಂದ ತಾವು 18 ಜನ ಬಿಜೆಪಿ ಶಾಸಕರ 6 ತಿಂಗಳ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಶರಣಗೌಡ ಕಂದಕೂರ್ ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ತಾವು ಸ್ಪೀಕರ್ ಆದ ಮೇಲೆ ಪಕ್ಷಬೇಧವಿಲ್ಲದೆ ನೂತನ ಶಾಸಕರಿಗೆ ಸದನದಲ್ಲಿ ಮಾತನಾಡಲು ಅವಕಾಶ ಕಲ್ಪಿಸಿದ್ದೀರಿ. ವಿರೋಧ ಪಕ್ಷದ ಶಾಸಕರು ಪ್ರತಿಭಟನೆಗಿಳಿದು ಪೀಠದ ಎದುರು ಬಂದಾಗ ಮಾರ್ಷಲ್‌ಗಳು ಕೈ ಹಿಡಿದು ತಡೆಯಲು ಮುಂದಾದಾಗ ತಾವು ಖುದ್ದು ಮಾರ್ಷಲ್‌ಗಳ ಕೈಯನ್ನು ತಡೆದು ಶಾಸಕರಿಗೆ ಗೌರವ ನೀಡಿದ್ದೀರಿ. ತಡರಾತ್ರಿವರೆಗೆ ಕಲಾಪ ನಡೆಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಎಲ್ಲರನ್ನೂ ಒಂದೇ ರೀತಿ ಕಾಣುವ ಅಧಿಕಾರದ ಅಹಂ ಇಲ್ಲದೇ ಇರುವ ಸಭಾಧ್ಯಕ್ಷರು ತಾವಾಗಿದ್ದೀರಿ ಎಂದು ಶಾಸಕ ಶರಣಗೌಡ ಕಂದಕೂರ್ ಸ್ಪೀಕರ್ ಅವರನ್ನು ಶ್ಲಾಸಿದ್ದಾರೆ.