ಬಂಡಾಯ ಶಮನಕ್ಕಾಗಿ ಶಾಸಕರ ಕಾಲು ಹಿಡಿಯಲು ಹೋದ ಜೆಡಿಎಸ್ ಅಭ್ಯರ್ಥಿ!

Mandya JDS F
Published on

ಮಂಡ್ಯ: 'ಉದರನಿಮಿತ್ತಂ ಬಹುಕೃತವೇಷಂ' ಎನ್ನುವಂತೆ ಚುನಾವಣೆ ಹಿನ್ನೆಲೆಯಲ್ಲೂ ನಾನಾ ನಾಟಕಗಳು ಕಾಣಸಿಗುತ್ತವೆ. ಅಂಥವುಗಳ ಪೈಕಿ ಇದೂ ಒಂದು. ಇಲ್ಲೊಬ್ಬ ಅಭ್ಯರ್ಥಿ ಬಂಡಾಯ ಶಮನಕ್ಕಾಗಿ ಶಾಸಕನ ಕಾಲಿಗೆ ಬಿದ್ದ ಪ್ರಸಂಗವೂ ನಡೆದಿದೆ.

ಮಂಡ್ಯ ಜೆಡಿಎಸ್​ನಲ್ಲಿ ಭುಗಿಲೆದ್ದ ಅಸಮಾಧಾನದ ಹಿನ್ನೆಲೆಯಲ್ಲಿ ಅದರ ಶಮನಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪುತ್ರ ಡಾ.ರಮೇಶ್ ಮಧ್ಯಪ್ರವೇಶ ಮಾಡಿದ್ದಾರೆ. ಮಂಡ್ಯದ ಕಲ್ಲಹಳ್ಳಿಯಲ್ಲಿರುವ ಶಾಸಕ ಎಂ. ಶ್ರೀನಿವಾಸ್ ಮನೆಯಲ್ಲಿ ಈ ಪ್ರಹಸನ ನಡೆದಿದೆ.

ಜೆಡಿಎಸ್​ ಟಿಕೆಟ್ ಕೈತಪ್ಪಿದ್ದರಿಂದ ಮೂವರು ಜೆಡಿಎಸ್​ ನಾಯಕರು ಪಕ್ಷೇತರರಾಗಿ ಸ್ಪರ್ಧೆಗೆ ಮುಂದಾದ ಹಿನ್ನೆಲೆಯಲ್ಲಿ ಇವೆಲ್ಲ ನಡೆದಿದೆ. ಶಾಸಕ ಎಂ.ಶ್ರೀನಿವಾಸ್ ಮನೆಗೆ ಡಾ.ರಮೇಶ್ ನೇತೃತ್ವದಲ್ಲಿ ಜೆಡಿಎಸ್‌ ನಿಯೋಗ ಭೇಟಿ ನೀಡಿದ್ದು, ಶಾಸಕರ ಮನವೊಲಿಸುವ ಯತ್ನ ನಡೆಸಿದೆ. ಬಂಡಾಯಗಾರರ ಮನವೊಲಿಸಲು ಮುಂದಾದ ಡಾ.ರಮೇಶ್​ಗೆ ಜೆಡಿಎಸ್​ ಅಭ್ಯರ್ಥಿ ರಾಮಚಂದ್ರು, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಮತ್ತಿತರರು ಜೊತೆಯಾಗಿದ್ದರು.

ನನಗೆ ಸಫೋರ್ಟ್ ಮಾಡಿ ಎಂದು ಮಂಡ್ಯ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಬಂಡಾಯ ನಾಯಕನ ಕಾಲಿಗೆ ಕಾಲು ಹಿಡಿಯಲು ಹೋಗಿದ್ದಾರೆ. ಬಂಡಾಯ ಏಳಬೇಡಿ ಎಂದು ಕಾಲು ಹಿಡಿಯಲು ಹೋಗಿದ್ದು, ಆಗ ನಾನು ಸಫೋರ್ಟ್ ಮಾಡಲ್ಲ ಹೋಗು ಎಂದು ಶ್ರೀನಿವಾಸ್ ನೂಕಿದ್ದೂ ನಡೆದಿದೆ. ರಾಮಚಂದ್ರಗೆ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಶ್ರೀನಿವಾಸ್ ಬಂಡಾಯ ಎದ್ದಿದ್ದಾರೆ.

ನಾನು ಎಂ.ಶ್ರೀನಿವಾಸ್ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ಅವರನ್ನು ನೋಡಿ ತುಂಬಾ ದಿನ ಆಗಿತ್ತು. ನಾನು ರಾಜಕೀಯ ವಿಚಾರವಾಗಿ ಯಾವುದೇ ಮಾತನಾಡಿಲ್ಲ. ನಾನು ಯಾವ ಪಕ್ಷದಲ್ಲೂ ಇಲ್ಲ. ನಾನ್ಯಾಕೆ ರಾಜಕೀಯ ಮಾತನಾಡಲಿ? ಎಂದು ಆ ಬಳಿಕ ಡಾ.ರಮೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ನಿರ್ಧಾರ ಅಚಲ, ಬದಲಾಗುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯದಲ್ಲಿ ಶಾಸಕ ಎಂ. ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ. ದೇವೇಗೌಡರ ಮಗ ರಮೇಶ್ ಸಂಧಾನಕ್ಕೆ ಬಂದಿದ್ದರು. ದೂರವಾಣಿ ಮೂಲಕ ಸಹ ನಾಯಕರ ಜೊತೆ ಮಾತನಾಡಿಸಿದ್ದರು. ನಾನು ಯಾರ ಮಾತಿಗೂ ಒಪ್ಪಲ್ಲ. ನಾವು ಬಂಡಾಯವಾಗಿ ಸ್ಪರ್ಧಿಸೋದು ಖಚಿತ. ಮೂರು ಜನರ ಪೈಕಿ ಒಬ್ಬರು ಕಣದಲ್ಲಿ ಇರುತ್ತಾರೆ. ನಾಳೆ ಬೆಳಿಗ್ಗೆ ಬೆಂಬಲಿಗರ ಸಭೆ ಕರೆದಿದ್ದೇನೆ. ಆ ಸಭೆಯಲ್ಲಿ ಮೂವರಲ್ಲಿ ಒಬ್ಬರ ಆಯ್ಕೆ ಮಾಡುತ್ತೇವೆ. ನಮ್ಮ ಅಂತಿಮ ತೀರ್ಮಾನ ಬಂಡಾಯವೇ ಹೊರತು ಸಂಧಾನವಲ್ಲ ಎಂದು ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net