ಜೆಡಿಎಸ್ ಅಭ್ಯರ್ಥಿಯಾಗಿ ವಿವೇಕಾನಂದ; ಬಂಡಾಯ ಬಾವುಟ ಹಾರಿಸಿದ ಶ್ರೀಕಂಠೇಗೌಡ

K.T.Srikante Gowda
Published on

ಬೆಂಗಳೂರು:
ತೀವ್ರ ಕುತೂಹಲದ ಕಣವಾಗಿದ್ದ ದಕ್ಷಿಣ ಪದವಿಧರರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿವೇಕಾನಂದ ಅವರನ್ನು ಆಯ್ಕೆ ಮಾಡಲಾಗಿದೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಬುಧವಾರ ವಿವೇಕಾನಂದ ಅವರ ಹೆಸರನ್ನು ಅಂತಿಮಗೊಳಿಸಿ ಅವರಿಗೆ ಬಿ ಾರಂ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಜೆಡಿಎಸ್ ಮುಖಂಡರಾದ ನಿರಂಜನಮೂರ್ತಿ, ನಾಗಣ್ಣಗೌಡ ಅವರುಗಳು ಉಪಸ್ಥಿತರಿದ್ದರು.
ಜೆಡಿಎಸ್‌ನಿಂದ ಗೆದ್ದಿದ್ದ ಮರಿತಿಬ್ಬೇಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಅದೇ ಸ್ಥಾನಕ್ಕೆ ಸ್ಪರ್ಧೆ ಮಾಡಲು ಶ್ರೀಕಂಠೇಗೌಡ ಮತ್ತು ವಿವೇಕಾನಂದ ಅವರ ನಡುವೆ ಭರ್ಜರಿ ಪೈಪೋಟಿ ನಡೆದಿತ್ತು.
ಇಬ್ಬರೂ ಒಂದೇ ಗ್ರಾಮದವರಾಗಿದ್ದು, ವಿವೇಕಾನಂದ ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದು, ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಆಪ್ತರಾಗಿದ್ದಾರೆ.

ಬಂಡಾಯ ಸಾರಿದ ಶ್ರೀಕಂಠೇಗೌಡ
ಜೆಡಿಎಸ್ ಅಭ್ಯರ್ಥಿಗೆ ಬಿ ಾರಂ ಕೊಟ್ಟ ಬೆನ್ನಲ್ಲಿಯೇ ಪಕ್ಷದೊಳಗೆ ಭಿನ್ನಮತ ಸ್ಫೋಟಗೊಂಡಿದೆ.
ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಟಿ.ಶ್ರೀಕಂಠೇಗೌಡ ಅವರು ಬಂಡಾಯ ಬಾವುಟ ಹಾರಿಸಿದ್ದು, ಚುನಾವಣೆ ಸ್ಪರ್ಧೆಗೆ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ತನಗೆ ಟಿಕೆಟ್ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ ಸ್ಪರ್ಧಾ ತಯಾರಿಯನ್ನು ಬಿರುಸಿನಿಂದ ನಡೆಸಿದ್ದರು. ಮೈತ್ರಿಯಲ್ಲಿ ಬಿಜೆಪಿ ಪಾಲಾಗಿದ್ದ ಕ್ಷೇತ್ರವನ್ನು ಜೆಡಿಎಸ್‌ಗೆ ಉಳಿಸಿಕೊಂಡ ಬಳಿಕವೂ ತನಗೆ ಟಿಕೆಟ್ ಎನ್ನುವ ಖಾತ್ರಿಯಲ್ಲಿ ಶ್ರೀಕಂಠೇಗೌಡರಿದ್ದರು. ಕೊನೆ ಗಳಿಗೆಯಲ್ಲಿ ವಿವೇಕಾನಂದ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದರಿಂದ ಕೆಟಿಎಸ್ ಬಂಡಾಯ ಸಾರಿದ್ದಾರೆ.

*ನನಗೆ ಟಿಕೆಟ್ ಸಿಗುವ ಭರವಸೆಯಲ್ಲಿದ್ದೆ. ಕೊನೆ ಘಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ತೀವ್ರ ಬೇಸರವಾಗಿದೆ. ಸ್ಪರ್ಧೆಗೆ ತೀವ್ರ ಒತ್ತಡವಿದೆ. ನನಗೆ ಟಿಕೆಟ್ ಕೈ ತಪ್ಪುವಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ಪಾತ್ರವಿಲ್ಲ. ಆದರೆ, ಮಧ್ಯದವರು ತಪ್ಪಿಸಿದ್ದಾರೆ. ಈ ಬಗ್ಗೆ ಹಾಸನ, ಚಾಮರಾಜನಗರ ಮೈಸೂರಿನಲ್ಲಿ ಸಭೆ ನಡೆಸಿ ಸ್ಪರ್ಧೆಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ.
-ಕೆ.ಟಿ.ಶ್ರೀಕಂಠೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net