

ಬೆಂಗಳೂರು: ‘ಭ್ರಷ್ಟಾಚಾರಂ ಕಾಂಗ್ರೆಸ್ ಲಕ್ಷಣಂ’ ಎನ್ನುವುದಕ್ಕೆ ಎತ್ತಿನಹೊಳೆ ಪೈಪ್ ಲೈನ್ ಒಡೆದಿರುವುದೇ ಸಾಕ್ಷಿ ಎಂದು ಜೆಡಿಎಸ್ ಸರ್ಕಾರವನ್ನು ಕಿಚಾಯಿಸಿದೆ.
ಕಾಂಗ್ರೆಸ್ ಸರ್ಕಾರದ ಒಣ ಪ್ರತಿಷ್ಠೆಗೆ ಬಯಲುಸೀಮೆ ಜನರ ಜೀವಜಲ ಪೋಲಾಗುತ್ತಿದೆ. ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಹಠಕ್ಕೆ ಬಿದ್ದು ಆತುರಾತುರವಾಗಿ ಪ್ರಚಾರದ ಗೀಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟನೆ ಹೈಡ್ರಾಮಾ ಮಾಡಿದ್ದರು.
ಅದರ ದುಷ್ಪರಿಣಾಮ ಒಂದೇ ವಾರಕ್ಕೆ ಪೈಪ್ಲೈನ್ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ ಎಂದು ಜೆಡಿಎಸ್ ಟಾಂಗ್ ಕೊಟ್ಟಿದೆ.
ಮಿಸ್ಟರ್ ಸಿಎಂ, ಡಿಸಿಎಂನವರೇ, ಇದು ನಿಮ್ಮ ಭ್ರಷ್ಟ ಸರ್ಕಾರದ ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಗಳ ನಿಜಬಣ್ಣ ಬಯಲು ಮಾಡಿದೆ. ಎತ್ತಿನಹೊಳೆ ಯೋಜನಾ ವೆಚ್ಚ 12,912 ಕೋಟಿ ರೂ. ಇದ್ದದ್ದು, ಈಗ 23,251 ಕೋಟಿ ರೂ.ಗೆ ತಲುಪಿದೆ. ಈಗಾಗಲೇ 16,076 ಕೋಟಿ ಖರ್ಚು ಮಾಡಿದ್ದೀರಿ. ಜನರ ದುಡ್ಡಿನಲ್ಲಿ ನಿಮ್ಮ ಜಾತ್ರೆ ಎಂದು ಜೆಡಿಎಸ್ ಟೀಕಿಸಿದೆ.
ಬರಪೀಡಿತ ಜಿಲ್ಲೆಗಳಿಗೆ ನೀರು ಕೊಡುವ ನೆಪದಲ್ಲಿ ಲೋಟಿಕೋರ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಇದು ಕೋಟಿ ಕೋಟಿ ಹಣ ಎತ್ತುವ ಯೋಜನೆಯಾಗಿ ಮಾರ್ಪಟ್ಟಿದೆ. ಎತ್ತಿನಹೊಳೆ ಎತ್ತುವಳಿಗೆ ಅನುಕೂಲವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.