

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜನ್ಮದಿನದ ಸಂದರ್ಭದಲ್ಲಿ ಬೃಹತ್ ಸಮಾವೇಶ(JDS grand convention on Deve Gowda's birthday) ಆಯೋಜಿಸಲು ಜೆಡಿಎಸ್ ನಿರ್ಧರಿಸಿದೆ.
ಈ ಸಮಾವೇಶವನ್ನು ಹಾಸನ ಅಥವಾ ಮೈಸೂರಿನಲ್ಲಿ ನಡೆಸುವ ಯೋಚನೆ ಇದೆ. ಲಕ್ಷಾಂತರ ಜನರನ್ನು ಸೇರಿಸಿ ದೇವೇಗೌಡೋತ್ಸವ ಆಚರಿಸಲು ಚಿಂತನೆ ನಡೆದಿದೆ. ಹಾಸನದಲ್ಲಿ ಕಾಂಗ್ರೆಸ್ ನಡೆಸಿದ ಸಮಾವೇಶಕ್ಕಿಂತ ದೊಡ್ಡದಾಗಿ ಸಂಘಟಿಸುವ ಆಲೋಚನೆ ನಡೆದಿದೆ.
ಸಮಾವೇಶಕ್ಕೆ ಪಕ್ಷಾತೀತವಾಗಿ ರಾಷ್ಟ್ರಮಟ್ಟದ ನಾಯಕರು, ಸಮುದಾಯದ ಮುಖಂಡರು ಹಾಗೂ ಮಠಾಧೀಶರನ್ನು ಆಹ್ವಾನಿಸುವ ಉದ್ದೇಶ ಹೊಂದಲಾಗಿದೆ.
ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ, ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ ಪ್ರಕರಣಗಳಿಂದ ಜೆಡಿಎಸ್‌ಗೆ ಮಂಕು ಕವಿದಿತ್ತು. ಜತೆಗೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಸ್ವಲ್ಪ ಮಟ್ಟಿಗೆ ಹಿಡಿತ ತಪ್ಪಿದೆ. ಬಿಜೆಪಿ ಸಖ್ಯ ಬೆಳೆಸಿದ ಬಳಿಕ ಜೆಡಿಎಸ್ ಈ ಮೊದಲಿನ ಕಸುವು ಉಳಿಸಿಕೊಂಡಿಲ್ಲ. ಹಾಗಾಗಿ ದೇವೇಗೌಡರ ಜನ್ಮದಿನದ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶಿಸುವುದರ ಜತೆಗೆ, ಹಳೇ ಮೈಸೂರು ಪ್ರದೇಶದಲ್ಲಿ ತನ್ನ ನೆಲೆಯಲ್ಲಿ ಗಟ್ಟಿಗೊಳಿಸುವುದು ಮತ್ತು ಕಾಂಗ್ರೆಸ್ ಹಾಸನದಲ್ಲಿ ನಡೆಸಿದ ಸಮಾವೇಶಕ್ಕೆ ಟಕ್ಕರ್ ಕೊಡುವುದು ಜೆಡಿಎಸ್ ಉದ್ದೇಶವಾಗಿದೆ.
ಮಾ. 6ರಂದು ಈ ಸಮಾವೇಶ ನಡೆಸುವ ಕುರಿತು ಪೂರ್ವಭಾವಿ ಸಭೆ ನಡೆಸಲು ಜೆಡಿಎಸ್ ಉದ್ದೇಶಿಸಿದೆ. ದೇವೇಗೌಡ ಅವರೇ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮೇ 18 ದೇವೇಗೌಡರ ಜನ್ಮದಿನವಾಗಿದ್ದು, ಅಂದೇ ಸಮಾವೇಶ ನಡೆಸುವ ಕುರಿತು ಪಕ್ಷದಲ್ಲಿ ಗಂಭೀತ ಚಿಂತನೆ ನಡೆದಿದೆ ಎನ್ನಲಾಗಿದೆ. ಆದರೆ, ಹಾಸನದಲ್ಲಿ ನಡೆಸಬೇಕೋ, ಮೈಸೂರಿನಲ್ಲಿ ನಡೆಸಬೇಕೋ ಎಂಬುದು ತೀರ್ಮಾನವಾಗಿಲ್ಲ. ಮಾ. 6ರಂದು ನಡೆಯುವ ಪೂರ್ವ ಸಿದ್ಧತಾ ಸಭೆಯಲ್ಲಿ ಸಮಾವೇಶದ ಬಗ್ಗೆ ಸ್ಪಷ್ಟನೆ ದೊರೆಯುವ ಸಾಧ್ಯತೆಗಳಿವೆ.