ವಿಜಯದಶಮಿ ಬಳಿಕ ಜೆಡಿಎಸ್ ಸಂಘಟನೆಗೆ ಹೊಸ ರೂಪ

JDS-party-symbol
Published on

ಬೆಂಗಳೂರು:

ಜೆಡಿಎಸ್ ಸಂಘಟನೆಗೆ ವಿಜಯದಶಮಿ ಬಳಿಕ ಹೊಸ ರೂಪ ನೀಡಲು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ಸಭೆಯನ್ನು ಕರೆಯಲು ನಿರ್ಧರಿಸಿದ್ದಾರೆ.

ಪಕ್ಷದ ಸಂಘಟನೆ ನಿರೀಕ್ಷೆ ಮಟ್ಟಕ್ಕೆ ಆಗುತ್ತಿಲ್ಲ ಎನ್ನುವ ಕಾರ್ಯಕರ್ತರ ಮಾತುಗಳಿಗೆ ಮಣೆ ಹಾಕಿರುವ ಗೌಡರು, ಜಿಲ್ಲಾ ಮತ್ತು ತಾಲೂಕು ಘಟಕಗಳ ಸಭೆಯನ್ನು ಆಯೋಜಿಸಲು ತೀರ್ಮಾನಿಸಿದ್ದು, ಈ ನಿಟ್ಟಿನಲ್ಲಿ ಪಕ್ಷದ ಮುಖಂಡರಿಗೆ ಸೂಚನೆಗಳನ್ನು ನೀಡಲಾಗಿದೆ.

ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದಿರುವ ಜನರೊಂದಿಗೆ ಜನತಾದಳಕ್ಕೆ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ. ಆದರೆ, ತಳಮಟ್ಟದಿಂದ ಮುಖಂಡರ ತನಕ ಸಮನ್ವಯತೆ ಕೊರತೆ ಮಾತ್ರ ಹಲವು ಕಡೆಯಲ್ಲಿ ಹಾಗೆಯೇ ಮುಂದುವರಿದಿದೆ. ಈ ಕೊರತೆಯನ್ನು ನೀಗಿಸದೆ ಸಂಘಟನೆ ಮಾಡುವುದು ಸವಾಲಿನ ಕೆಲಸ. ಆದ್ದರಿಂದ ಇದಕ್ಕೆ ಮೊದಲು ಕ್ರಮ ತೆಗೆದುಕೊಳ್ಳಬೇಕು ಎನ್ನುವ ಸಲಹೆಯನ್ನು ದೇವೇಗೌಡರು ನೀಡಿದ್ದಾರೆ.

ಆಯಾ ಕ್ಷೇತ್ರದ ಶಾಸಕರು ಮತ್ತು ಮಾಜಿ ಶಾಸಕರು ಕೂಡ ಅವರವರ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಅವರು ಮತ್ತೊಂದು ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಗೌಡರು, ಶಾಸಕರು ಮತ್ತು ಮಾಜಿ ಶಾಸಕರು ಕಡ್ಡಾಯವಾಗಿ ನೆರೆ ಜಿಲ್ಲೆ ಮತ್ತು ಆಜು ಬಾಜಿನ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದಾರೆ.

ರಾಜ್ಯ ಮಟ್ಟದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ಪಕ್ಷಕ್ಕೆ ಜೋಶ್ ನೀಡಲು ಮುಂದಾಗಿರುವ ಗೌಡರು, ಜಿಲ್ಲಾ ಮಟ್ಟ ತಾಲೂಕು ಮಟ್ಟದ ದಳಪತಿಗಳಿಗೂ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗೂ ಪಕ್ಷವನ್ನು ಸಧೃಢವಾಗಿ ಕಟ್ಟಬೇಕಾದ ಮತ್ತು ಚುನಾವಣೆಗೆ ವೇದಿಕೆಯನ್ನು ಅಣಿಗೊಳಿಸಬೇಕಾದ ಅಗತ್ಯತೆ ದಳಪತಿಗಳ ಮೇಲಿದೆ ಎನ್ನುವುದನ್ನು ಗೌಡರು ಒತ್ತಿ ಹೇಳಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net