

ಬೆಂಗಳೂರು: ಜಿಲ್ಲಾವಾರು ಕೈಗಾರಿಕೆಗಳ ಸ್ಥಿತಿ-ಗತಿ ವರದಿ ತರಿಸಿಕೊಳ್ಳಲು ಜೆಡಿಎಸ್ ಕಾರ್ಮಿಕ ಘಟಕ ನಿರ್ಣಯಿಸಿದೆ. ಜೆ.ಪಿ.ಭವನದಲ್ಲಿ ಜೆಡಿಎಸ್ ಹಿರಿಯ ಮುಖಂಡ ಎ.ಬಿ.ಮಾಲಕರೆಡ್ಡಿ ಹಾಗೂ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಎಸ್.ಶ್ರೀರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಯಿತು.
ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು ತಮ್ಮ ತಮ್ಮ ಜಿಲ್ಲೆಗಳಲ್ಲಿರುವ ಕೈಗಾರಿಕೆಗಳು, ಅವುಗಳ ಉತ್ಪಾದನೆ, ಅಲ್ಲ್ಲಿರುವ ಕಾರ್ಮಿಕರ ಸಂಖ್ಯೆ, ಲಾಭದಲ್ಲಿವೆಯೋ? ನಷ್ಟದಲ್ಲಿವೆಯೋ ಎಂಬ ಬಗ್ಗೆ ವರದಿ ಕಳುಹಿಸಿಕೊಡಲು ಸೂಚಿಸಲಾಯಿತು.
ಹೀಗೆ ತರಿಸಿಕೊಳ್ಳುವ ವರದಿಯನ್ನು ಕೇಂದ್ರ ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಳುಹಿಸಿ ಸಮಸ್ಯೆಗಳಿದ್ದಲ್ಲಿ ಪರಿಹರಿಸಲು ಪ್ರಯತ್ನಿಸಲಾಗುವುದು. ಜತೆಗೆ ಆಯಾ ಕಾರ್ಖಾನೆಗಳಲ್ಲಿ ನಾಯಕತ್ವವನ್ನು ಹುಟ್ಟು ಹಾಕಬೇಕು ಎಂದು ಜಿಲ್ಲಾಧ್ಯಕ್ಷರಿಗೆ ತಿಳಿಸಲಾಯಿತು.
ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಕಾರ್ಮಿಕ ವಲಯವನ್ನು ಪ್ರತಿನಿಧಿಸುವವರೇ ಇಲ್ಲ. ಹಾಗಾಗಿ ಸಮರ್ಥ ನಾಯಕತ್ವ ಬೆಳೆಸುವುದರ ಜತೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಕಾರ್ಮಿಕ ನಾಯಕರಿಗೆ ಸ್ಥಾನ ಕಲ್ಪಿಸಲು ವರಿಷ್ಠರ ಮೇಲೆ ಒತ್ತಡ ಹೇರಲೂ ಸಭೆ ನಿರ್ಣಯಿಸಿತು.
ಎಸ್.ಕೆ.ಕಾಂತ, ಎಂ.ಎಸ್.ಕೃಷ್ಣನ್, ಸೂರ್ಯನಾರಾಯಣ್, ಶ್ರೀರಾಮರೆಡ್ಡಿ ಮತ್ತಿತರ ನಾಯಕರು ಯಾವುದೇ ಪಕ್ಷದಲ್ಲಿದ್ದರೂ ಕಾರ್ಮಿಕ ವಲಯದ ಹಿತರಕ್ಷಣೆಗೆ ಸದನದ ಹೊರಗೂ ಒಳಗೂ ಹೋರಾಟ ಮಾಡುತ್ತಿದ್ದರು. ಈಗ ಅಂತಹ ನಾಯಕತ್ವದ ಕೊರತೆ ಉಭಯ ಸದನಗಳಲ್ಲಿ ಕಂಡು ಬರುತ್ತಿದೆ. ಹಾಗಾಗಿ ಕಾರ್ಮಿಕ ಮುಖಂಡರನ್ನು ಮೇಲ್ಮನೆ ಹಾಗೂ ಕೆಳಮನೆಗೆ ಆಯ್ಕೆ ಮಾಡುವ ಕುರಿತು ಪಕ್ಷದ ಹೈಕಮಾಂಡ್ ಗಮನ ಸೆಳೆಯಲು ಸಭೆ ತೀರ್ಮಾನಿಸಿತು.
ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ನೀಡಿದೆ. ಕೇಂದ್ರ ಸರ್ಕಾರ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ನೀಡುವ ವಿಧೇಯಕಕ್ಕೆ ಒಪ್ಪಿಗೆ ನೀಡಿದೆ. ಹಾಗಾಗಿ ಮಹಿಳಾ ನಾಯಕತ್ವವನ್ನು ಬೆಳೆಸಲು ಆದ್ಯತೆ ನೀಡಬೇಕಿದೆ. ಗಾರ್ಮೆಂಟ್ ಕ್ಷೇತ್ರದ ಸಮಸ್ಯೆ ಪರಿಹಾರಕ್ಕಂತೂ ಮಹಿಳಾ ಹೋರಾಟ ಅವಶ್ಯಕತೆ ಇದೆ. ಕಾರಣ ಗಾರ್ಮೆಂಟ್ಸ್‌ಗಳಲ್ಲಿ ಕಾರ್ಮಿಕ ಸಂಘಟನೆಯನ್ನು ಬಲಪಡಿಸಬೇಕು ಎಂದು ಸಭೆ ಒಮ್ಮತದ ತೀರ್ಮಾನ ಕೈಗೊಂಡಿತು.
ಜೆಡಿಎಸ್ ಸದಸ್ಯತ್ವ ನೋಂದಣಿ ಮತ್ತು ಬೂತ್ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಸಣ್ಣ ಕೈಗಾರಿಕೆ ಮೊದಲುಗೊಂಡು ಎಲ್ಲ ಕೈಗಾರಿಕೆಗಳಲ್ಲಿರುವ ಕಾರ್ಮಿಕರ ಸದಸ್ಯತ್ವ ಮಾಡಿಸಬೇಕು ಎಂದು ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಎಸ್.ಶ್ರೀರಾಮಯ್ಯ ಜಿಲ್ಲಾಧ್ಯಕ್ಷರಿಗೆ ಸೂಚಿಸಿದರು.
ಪಕ್ಷದ ಎಲ್ಲ ಘಟಕಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಮಾನ ನೀಡಬೇಕು. ವಿಶೇಷವಾಗಿ ಕಾರ್ಮಿಕ ವಿಭಾಗದಲ್ಲಿ ಮಹಿಳೆಯರಿಗೇ ಆದ್ಯತೆ ನೀಡಬೇಕು. ಎಲ್ಲ ಹಂತದಲ್ಲೂ ಮಹಿಳಾ ಮುಖಂಡರನ್ನು ಗುರುತಿಸಿ ಅವರನ್ನು ಪದಾಧಿಕಾರಿಗಳಾಗಿ ಮಾಡಿಕೊಳ್ಳಬೇಕು ಎಂದು ಶ್ರೀರಾಮಯ್ಯ ತಾಕೀತು ಮಾಡಿದರು.
ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಮಾತನಾಡಿ, ಕಾರ್ಮಿಕ ಸಂಘಟನೆಗಳು ಇತ್ತೀಚಿನ ದಿನಗಳಲ್ಲಿ ಬಲಹೀನಗೊಳ್ಳುತ್ತಿವೆ. ಮೊದಲು ಈ ಸಂಘಟನೆಗಳು ಹೋರಾಟದ ಪ್ರಮುಖ ಶಕ್ತಿಗಳಾಗಿದ್ದವು. ಕಾರ್ಮಿಕ ಸಂಘಟನೆಗಳು ಬಲಶಾಲಿಯಾದರೆ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹಾಗಾಗಿ ಕಾರ್ಮಿಕ ಶಕ್ತಿ ಬಲಪಡಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಹೆಜ್ಜೆ ಹಾಕಬೇಕು ಎಂದು ಸಲಹೆ ನೀಡಿದರು.