ತುಮಕೂರು: ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸಂಪದ್ಭರಿತ ಕ್ಷೇತ್ರವೆಂಬ ಹೆಗ್ಗಳಿಕೆ ಹೊಂದಿರುವ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕರಾಗಲು ಎಲ್ಲಿಲ್ಲದ ಪೈಪೋಟಿಯಿದೆ.
ಚುನಾವಣೆ ಸಂದರ್ಭದಲ್ಲಂತೂ ಹಣದ ಹೊಳೆಯೇ ಹರಿಯಲಿದ್ದು, ಜೆಡಿಎಸ್-ಬಿಜೆಪಿ ಜಿದ್ದಾಜಿದ್ದಿಗೆ ಕ್ಷೇತ್ರ ಸಾಕ್ಷಿಯಾಗಲಿದೆ. ಸತತ ಗೆಲುವಿನ ಕನಸಿನ ಗುಂಗಿನಲ್ಲಿರುವ ಹಾಲಿ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್‌ಗೆ ಬಿಜೆಪಿಯ ಬಿ.ಸುರೇಶಗೌಡ ಪ್ರಬಲ ಪೈಪೋಟಿಯಿದೆ.
2008ರಲ್ಲಿ ಜನ್ಮತಾಳಿದ ಕ್ಷೇತ್ರದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಹಾಗಾಗಿ, ಜೆಡಿಎಸ್ ಹಾಗೂ ಬಿಜೆಪಿ ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಿದೆ.
ಡಿ.ಸಿ.ಗೌರಿಶಂಕರ್
ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವ ಕಾಂಗ್ರೆಸ್‌ನಲ್ಲಿ ಇನ್ನೂ ಅಭ್ಯರ್ಥಿ ಫೈನಲ್ ಆಗಿಲ್ಲ. ಜತೆಗೆ ಮಾಜಿ ಸಂಸದ ಎಸ್. ಪಿ.ಮುದ್ದಹನುಮೇಗೌಡ ಪಕ್ಷ ತೊರೆದ ನಂತರವಂತೂ ಅಳಿದುಳಿದ ಕಾರ್ಯಕರ್ತರು ಕೈಗೆ ಗುಡ್‌ಬೈ ಹೇಳಿದ್ದಾರೆ.
ಕೈ ಟಿಕೆಟ್ ಬಯಸಿ ಮಾಜಿ ಶಾಸಕ ಆರ್.ನಾರಾಯಣ, ಡಿಕೆಶಿ ಪರಮಾಪ್ತ ಸೂರ್ಯಮುಕುಂದರಾಜ್, ಶ್ರೀನಿವಾಸ್ ಹಾಗೂ ಎ.ಡಿ.ನರಸಿಂಹರಾಜು ಎಂಬವವರು ಅರ್ಜಿ ಸಲ್ಲಿಸಿದ್ದು, ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರವಾದ್ದರಿಂದ ಡಿಕೆಶಿ ಒಪ್ಪಿದವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ. ಕುಣಿಗಲ್‌ನಲ್ಲಿ ಅನುಕೂಲವಾಗುವಂತೆ ಇಲ್ಲಿ ಅಭ್ಯರ್ಥಿ ಆಯ್ಕೆ ನಡೆಯುವ ಸಾಧ್ಯತೆಯಿದೆ. 2008 ಹಾಗೂ 2013ರಲ್ಲಿ ಸತತ ಗೆಲುವು ಪಡೆದು ಹ್ಯಾಟ್ರಿಕ್ ಕನಸಿನಲ್ಲಿದ್ದ ಬಿ.ಸುರೇಶ್‌ಗೌಡಗೆ 2018ರಲ್ಲಿ ಸೋಲಿನ ರುಚಿ ತೋರಿಸಿದ್ದ ಡಿ.ಸಿ.ಗೌರಿಶಂಕರ್ ಮತ್ತೊಮ್ಮೆ ಗೆಲುವಿನ ಕನಸಿನಲ್ಲಿದ್ದಾರೆ, ಇವರಿಗೆ ಸೋಲುಣಿಸಲು ಸುರೇಶ್‌ಗೌಡ ಕೂಡ ಕೊಂಟಕಟ್ಟಿ ಕ್ಷೇತ್ರದೆಲ್ಲೆಡೆ ರಾಜಕೀಯ ತಂತ್ರಗಾರಿಕೆಯಲ್ಲಿ ಮುಳುಗಿದ್ದಾರೆ.