ಒಗ್ಗಟ್ಟಿನ ಜಪ, ಗೆಲುವಿಗೆ ಸಂಕಲ್ಪ; ಶಿಗ್ಗಾವಿ, ಸಂಡೂರಿನಲ್ಲಿ ಗರಿಗೆದರಿದ ಜೆಡಿಎಸ್ ಚಟುವಟಿಕೆ

JDS LOGO
Published on

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ಬಳಿಕ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಜೆಡಿಎಸ್ ಚಟುವಟಿಕೆಗಳು ಈಗ ಉಪ ಚುನಾವಣೆ ನೆಪದಲ್ಲಿ ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದಲ್ಲೂ ಗರಿಗೆದರಿವೆ.

ಮಂಡ್ಯ, ಮೈಸೂರು, ಬೆಂಗಳೂರು, ಎಚ್‌ಎಂಟಿ ್ಯಾಕ್ಟರಿ ಸುತ್ತ ಗಿರಕಿ ಹೊಡೆಯುತ್ತಿದ್ದ ಕುಮಾರಸ್ವಾಮಿ ಕಾರ್ಯಚಟುವಟಿಕೆ ಅನಿವಾರ್ಯವಾಗಿ ವಿಸ್ತಾರ ಪಡೆದುಕೊಳ್ಳುತ್ತಿದೆ.

ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪ ಚುನಾವಣೆ ೋಷಣೆಯಾದ ಹಿನ್ನೆಲೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡಬೇಕಾದ ಕಾರಣ ಜೆಡಿಎಸ್ ತನ್ನ ದಂಡಯಾತ್ರೆಯನ್ನು ಚುರುಕುಗೊಳಿಸಿದೆ.

ಶಿಗ್ಗಾವಿ ಮತ್ತು ಸಂಡೂರು ಪ್ರದೇಶದಲ್ಲಿ ಜೆಡಿಎಸ್ ಪ್ರಾಬಲ್ಯವಿಲ್ಲದೇ ಇದ್ದರೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಬೆವರು ಹರಿಸಲೇಬೇಕಿದೆ. ಕಾರಣ ಈ ಕ್ಷೇತ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಹುರಿದುಂಬಿಸಲು ವರಿಷ್ಠರು ಸಭೆ, ಸಮಾರಂಭ ಆಯೋಜಿಸಲು ಆಲೋಚಿಸಿದ್ದಾರೆ.

ಅದರ ಒಂದು ಭಾಗವಾಗಿ ಶನಿವಾರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನಸಭೆ ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಈ ಎರಡೂ ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ನಡೆಸಿ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಬಡಿದೆಬ್ಬಿಸಿದ್ದಾರೆ. ಮೈತ್ರಿಧರ್ಮ ಪಾಲನೆ ಮಾಡಲು ಪಕ್ಷದ ಮುಖಂಡರು ಹಾಗೂ ವರಿಷ್ಠರು ಕಾರ್ಯಕರ್ತರು, ಸ್ಥಳೀಯ ನಾಯಕರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸಮನ್ವಯ ಸಮಿತಿ ರಚನೆ

ಮೂರೂ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಎನ್‌ಡಿಎ ಮೈತ್ರಿಕೂಟ ತನ್ನೆಲ್ಲ ಶಕ್ತಿ, ಸಂಪನ್ಮೂಲ ವಿನಿಯೋಗಿಸಲು ಸನ್ನದ್ಧವಾಗಿದೆ. ಗೆಲುವಿನ ತಂತ್ರವಾಗಿ ಉಭಯ ಪಕ್ಷಗಳ ಸ್ಥಳೀಯ ಮುಖಂಡರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಜೆಡಿಎಸ್ ಚಾಲನೆ ನೀಡಿದೆ. ಅಲ್ಲದೆ, ಎರಡೂ ಪಕ್ಷಗಳಲ್ಲಿನ ಸ್ಥಳೀಯ ನಾಯಕರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸುವ ಕುರಿತು ಚಿಂತನೆ ನಡೆಸಿದೆ.

ಬಿಜೆಪಿಯಿಂದ ಸಕಾರಾತ್ಮಕ ನಿರೀಕ್ಷೆ

ಈ ಚುನಾವಣೆಯಲ್ಲಿ ಉಭಯ ಪಕ್ಷಗಳೂ ಕೈಜೋಡಿಸಿ ಹೋರಾಟ ಮಾಡಬೇಕಾಗಿರುವುದರಿಂದ ಒಂದಿನಿತೂ ವ್ಯತ್ಯಾಸಗಳು ಬಾರದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಈ ದೃಷ್ಟಿಯಿಂದ ಸಮನ್ವಯ ಸಮಿತಿ ರಚಿಸಿ ಚುನಾವಣೆ ಎದುರಿಸುವ ಕಾರ್ಯತಂತ್ರ ರೂಪಿಸಲು ಜೆಡಿಎಸ್ ನಾಯಕರು ಉತ್ಸುಕತೆ ತೋರಿದ್ದಾರೆ. ಈ ಕುರಿತು ಬಿಜೆಪಿಯಿಂದಲೂ ಸಕಾರಾತ್ಮಕ ಬೆಳವಣಿಗೆಯನ್ನು ನಿರೀಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net