

ಬಾಳೆಹೊನ್ನೂರು: ಸಭೆ, ಸಮಾರಂಭಗಳ ವೇದಿಕೆಯಲ್ಲಿ ಅತಿಥಿಗಳು ಮಾಡುವ ಭಾಷಣ ಕೇಳುಗರಿಗೆ ಭೂಷಣವಾಗಿರಬೇಕು ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ ಚಿಕ್ಕಮಗಳೂರಿನ ವಿಜಯಕುಮಾರ್ ಹೇಳಿದರು.
ಪಟ್ಟಣದ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಬೆಳಸೆಯ ಖಾಂಡ್ಯ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಭಾಷಣ ಕೇಳುಗರಿಗೆ ಸ್ಫೂರ್ತಿಯಾಗಿರಬೇಕು. ಭಾಷಣದ ಸಂದರ್ಭದಲ್ಲಿ ಅಲ್ಲಿನ ಸ್ಥಿತಿಗತಿಗಳನ್ನು ಅರಿತು, ಆ ಸಮಯಕ್ಕೆ ತಕ್ಕಂತೆ ಮಾತನಾಡಬೇಕು. ಆಗ ಭಾಷಣಕಾರನಿಗೂ ಗೌರವ ಹಾಗೂ ಕೇಳುಗರಿಗೂ ಸಂತಸ ದೊರೆಯಲಿದೆ. ಬೇಕಾಬಿಟ್ಟಿಯಾಗಿ ಮಾತನಾಡದೆ ಹಿತಮಿತವಾಗಿ, ವಿನೂತನ ಶೈಲಿಯಲ್ಲಿ ಮಾತನಾಡಿದರೆ ಭಾಷಣಕ್ಕೆ ಮೌಲ್ಯ ದೊರೆಯಲಿದೆ ಎಂದರು.
ಜೇಸಿ ಅಧ್ಯಕ್ಷ ಎನ್.ಶಶಿಧರ್ ಮಾತನಾಡಿ, ಶಿಬಿರದಲ್ಲಿ ತರಬೇತಿ ಪಡೆದವರು ಉತ್ತಮ ಭಾಷಣಕಾರರಾಗಿ ರೂಪುಗೊಳ್ಳುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು. ಶಿಬಿರದಲ್ಲಿ 20 ಜನ ತರಬೇತಿ ಪಡೆದರು. ಸಹ ತರಬೇತುದಾರ ಸುರೇಂದ್ರ ಮಾಸ್ತರ್, ಕೆ.ಎಂ.ರಾಘವೇಂದ್ರ, ಕಾಫಿ ಬೆಳೆಗಾರ ಅನೂಪ್ ಅರಿಗೆ, ಕ್ರಿಕೆಟ್ ಆಟಗಾರ ಯತೀ ಶ್ಯಾಮ್, ಜೇಸಿ ಕಾರ್ಯದರ್ಶಿ ಶೃಜಿತ್ ಹುಯಿಗೆರೆ, ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ರಚನ್ ಹುಯಿಗೆರೆ, ಸಿ.ಪಿ.ರಮೇಶ್ ಇತರರಿದ್ದರು.