ಭುಗಿಲೆದ್ದ ಜಯಣ್ಣ-ಎಆರ್‌ಕೆ ಅಸಮಾಧಾನ

Published on

ಕೊಳ್ಳೇಗಾಲ : ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ರಾಜಕಾರಣದ ಕಾರ್ಯವೈಖರಿ, ಪ್ರಜಾಪ್ರಭುತ್ವ ವಿರೋಧಿ ನಿಲುವುಗಳನ್ನು ಒಪ್ಪಿಕೊಳ್ಳಲು ನನ್ನಿಂದ ಆಗುತ್ತಿಲ್ಲ ಎಂದು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ತಿಳಿಸಿದ್ದಾರೆ.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅವರ ನಡುವೆ ಬುಗ್ಗಿಲೆದ್ದಿರುವ ಅಸಮಾಧಾನ ಕ್ಷೇತ್ರದಾದ್ಯಂತ ಚರ್ಚೆಗೀಡಾಗಿದ್ದು, ಈ ಸಂಬಂಧ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಣ್ಣ, ಎ.ಆರ್.ಕೃಷ್ಣಮೂರ್ತಿ ಹಾಗೂ ನನ್ನ ನಡುವೆ ಆಂತರಿಕ ಚರ್ಚೆ, ಸಮಾಲೋಚನೆ ಸಾಧ್ಯವಾಗುತ್ತಿಲ್ಲ. ಆಂತರಿಕ ಸ್ವಾತಂತ್ರ್ಯಕ್ಕೂ ಅವರ ಬಳಿ ಅವಕಾಶವಿಲ್ಲ. ಇದು ಬಹಳ ನೋವು ತಂದಿದೆ ಎಂದು ತಿಳಿಸಿದರು.

ಬಿ.ರಾಚಯ್ಯ ಅವರ ಪುತ್ರರಾದ ಎ.ಆರ್.ಕೆ. ಅವರು ನನಗೆ ಬಹಳ ಪ್ರೀತಿ ಪಾತ್ರರು. ರಾಜ್ಯಪಾಲರ ಪುತ್ರನಿಗೂ, ಬಿ.ರಾಚಯ್ಯ ಅವರ ಪುತ್ರನಿಗೂ ಬಹಳ ವ್ಯತ್ಯಾಸವಿದೆ. ಸೌಜನ್ಯಯುತವಾದ ನಡವಳಿಕೆ ಇಲ್ಲದಿದ್ದಾಗ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಗೆ ಗೌರವ ಸಿಗದಿದ್ದಾಗ, ನಮ್ಮಂತವರು ಅವರೊಟ್ಟಿಗಿರುವುದು ಕಷ್ಟ. ಆದ್ದರಿಂದ ನಾನು ಅವರಿಂದ ಅಂತರ ಕಾಯ್ದುಕೊಂಡಿದ್ದೇನೆ ಎಂದರು.

ಇತ್ತೀಚೆಗೆ, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಬಹುಮತವಿತ್ತು. ಸದಸ್ಯರು, ಶಾಸಕರು, ಸಂಸದರು ಸೇರಿ 20 ಮತದ ಸಂಖ್ಯಾಬಲವಿತ್ತು. ಆದರೂ, ಬಿಜೆಪಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಸ್ತುತ 31 ಸದಸ್ಯರ ಪೈಕಿ ಕಾಂಗ್ರೆಸ್ ನಂಟಿನಲ್ಲಿ ಪ್ರಸ್ತುತ ಇಬ್ಬರು ಸದಸ್ಯರಿಲ್ಲ ಅಷ್ಟೆ. ಶಾಸಕರು ಬಿಜೆಪಿಯನ್ನು ನಿರ್ನಾಮ ಮಾಡಿದ್ದೇನೆ, ವಿರೋಧ ಪಕ್ಷವನ್ನೇ ಸ್ವಾಹ ಮಾಡಿದ್ದೇನೆ ಎಂಬ ಭ್ರಮೆಯಲ್ಲಿದ್ದಾರೆ. ಆದರಿಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ನಾಮ ಆಗಿದೆ ಎಂಬುದನ್ನು ಮರೆತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ : ಇತ್ತ ಎ.ಆರ್.ಕೆ. ರಾಜಕರಣದ ನಡೆ, ನಿಲುವು ಹಾಗೂ ಕಾರ್ಯ ವೈಖರಿ ಮೇಲೆ ಎಸ್.ಜಯಣ್ಣ ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಎ.ಆರ್.ಕೆ ಅಭಿಮಾನಿಯೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಎ.ಆರ್.ಕೆ ಅವರ ಗೆಲುವುನಿಂದಲೇ ಎಸ್.ಜಯಣ್ಣರಿಗೆ ನಿಗಮ ಮಂಡಳಿ ದೊರಕಿರುವುದು ಎಂದು ಟಾಂಗ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net