

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಸ್ತಿ ವಿವಾದವನ್ನು ಮದ್ರಾಸ್ ಹೈಕೋರ್ಟ್ ಬಗೆಹರಿಸಿದ್ದು, ಜಯಲಲಿತಾ ಅವರು ಬಿಟ್ಟು ಹೋಗಿರುವ ಆಸ್ತಿಗೆ ಸೋದರಳಿಯ ಜೆ. ದೀಪಕ್ ಮತ್ತು ಸೋದರ ಸೊಸೆ ಜೆ. ದೀಪಾ ಅವರು ಹಕ್ಕುದಾರರಾಗಿರುವುದಾಗಿ ಹೇಳಿದೆ.
ಆನುವಂಶಿಕವಾಗಿ ಜಯಲಲಿತಾ ಅವರ ಆಸ್ತಿಯನ್ನು ಪಡೆಯಲು ಇವರಷ್ಟೆ ಅರ್ಹರಾಗಿದ್ದು, ಅವರ ಯಾವುದೇ ಆಸ್ತಿಯ ಮೇಲೆ ಸರ್ಕಾರದ ಅಧಿಕಾರವಿಲ್ಲ ಎಂದಿದೆ ಕೋರ್ಟ್. ಈ ಹಿನ್ನೆಲೆಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬಹುವರ್ಷಗಳವರೆಗೆ ನಡೆಯುತ್ತಿರುವ ಕಾನೂನು ಸಮರಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಮಾತ್ರವಲ್ಲದೇ ಪೋಯೆಸ್ ಗಾರ್ಡನ್ನಲ್ಲಿರುವ ಸುಮಾರು 90 ಕೋಟಿ ಮೌಲ್ಯದ 'ವೇದ ನಿಲಯಂ' ಬಂಗಲೆಯನ್ನು ತನ್ನ ವಶಕ್ಕೆ ಪಡೆಯಬೇಕೆಂದಿರುವ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ.
ದೀಪಕ್ ಮತ್ತು ದೀಪಾ ಅವರ ಅನುಮತಿ ಇಲ್ಲದೆಯೇ ಈ ಬಂಗಲೆಯನ್ನು ವಶಕ್ಕೆ ಪಡೆಯಬಾರದು ಎಂದು ನ್ಯಾಯಮೂರ್ತಿಗಳಾದ ಎನ್. ಕಿರುಬಕರನ್ ಮತ್ತು ಅಬ್ದುಲ್ ಖುದೋಸ್ ಅವರಿದ್ದ ನ್ಯಾಯಪೀಠ ಸ್ಪಷ್ಟಪಡಿಸುವ ಮೂಲಕ, ಬಂಗಲೆಗೆ ಸಂಬಂಧಿಸಿದಂತೆ ಹಲವಾರು ಯೋಜನೆ ರೂಪಿಸಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿದೆ.
'ವೇದ ನಿಲಯಂ' ಸ್ವಾಧೀನಪಡಿಸಿಕೊಳ್ಳಲು 2017ರ ಅಕ್ಟೋಬರ್ 5 ರಂದು ತಮಿಳು ಅಭಿವೃದ್ಧಿ ಮತ್ತು ಮಾಹಿತಿ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. 2019 ಜೂನ್ 28 ರಂದು ಭೂಮಿ ಮತ್ತು ಕಟ್ಟಡ ಸ್ವಾಧೀನ ಕ್ರಮದ ಬಗೆಗಿನ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ ಮೇ 6ರಂದು ಅಂತಿಮ ಘೋಷಣೆಯನ್ನು ಪ್ರಕಟಿಸಲಾಗಿತ್ತು. ಇದನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಮಾಡಿಕೊಳ್ಳುವ ಸಂಬಂಧ ಯೋಜನೆ ರೂಪಿಸಲಾಗಿತ್ತು.
'ವೇದ ನಿಲಯಂ' ಹಾಗೂ ಅದರಲ್ಲಿನ ಅಪರೂಪದ ವಸ್ತುಗಳನ್ನು ತಾತ್ಕಾಲಿಕವಾಗಿ ಸರ್ಕಾರದ ವಶಕ್ಕೆ ಪಡೆಯುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅಂಕಿತ ಹಾಕಿದ್ದರು. ಇದನ್ನು ದೀಪಕ್ ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು .ಅವರ ವಾದವನ್ನು ಪುರಸ್ಕರಿಸಿರುವ ಪೀಠ, ಈ ಆಸ್ತಿಗೆ ಆಡಳಿತಾತ್ಮಕ ಹಕ್ಕು ಇಬ್ಬರಿಗೆ ಇರುವುದಾಗಿ ಹೇಳಿದೆ.
ಖಾಸಗಿ ಆಸ್ತಿಯನ್ನು ಸಾರ್ವಜನಿಕವಾಗಿ ಬಳಸಿಕೊಳ್ಳಲು ಘೋಷಣೆ ಮಾಡಿರುವ ಸರ್ಕಾರದ ಕ್ರಮಕ್ಕೆ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇದೇ ವೇಳೆ, ಜಯಲಲಿತಾ ಅವರ ಜಮೀನಿನಲ್ಲಿಯೇ ಸಾರ್ವಜನಿಕ ಟ್ರಸ್ಟ್ ಒಂದನ್ನು ಸ್ಥಾಪಿಸುವುದಾಗಿ ದೀಪಕ್ ಹಾಗೂ ದೀಪಾ ಹೇಳಿದ್ದು, ಅದರಂತೆ ನಡೆದುಕೊಳ್ಳಲು ನ್ಯಾಯಮೂರ್ತಿಗಳು ಹೇಳಿದ್ದಾರೆ. 'ವೇದ ನಿಲಯಂ' ಬಂಗಲೆಯನ್ನು ಮುಖ್ಯಮಂತ್ರಿಗಳ ಗೃಹ ಕಚೇರಿಗಾಗಿ ಸ್ವಾಧೀನಪಡಿಸಿಕೊಳ್ಳುವ ಬದಲು ಅದರ ಭಾಗವನ್ನು ಜಯಲಲಿತಾ ಅವರ ಹೆಸರಿನಲ್ಲಿ ಸ್ಮಾರಕ ಸ್ಥಾಪನೆಗೆ ನೆರವಾಗುವಂತೆ ಹೇಳಿದ್ದಾರೆ.