ಶಶಿಕಲಾ ರಾಜಾತಿಥ್ಯ ಕೇಸಿನ ತನಿಖೆ ನನೆಗುದಿಗೆ!: ಎಫ್​ಎಸ್​ಎಲ್ ವರದಿ ವಿಳಂಬ, ಕೇಂದ್ರ ಕಾರಾಗೃಹದಲ್ಲಿರುವ ಜಯಲಲಿತಾ ಆಪ್ತೆ

Shashikala 3 jan 20
Published on

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸವಲತ್ತು ನೀಡಲಾಗಿದೆ ಎನ್ನಲಾದ ಪ್ರಕರಣದಲ್ಲಿ ಒಂದೂವರೆ ವರ್ಷ ಕಳೆದರೂ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್​ಎಸ್​ಎಲ್) ವರದಿ ಬಂದಿಲ್ಲ. ಇದರಿಂದ ಎಸಿಬಿ ತನಿಖೆ ನನೆಗುದಿಗೆ ಬಿದ್ದಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪೊಲೀಸ್ ಅಧಿಕಾರಿಗಳು ಲಂಚ ಪಡೆದು ನಿಯಮ ಉಲ್ಲಂಘಿಸಿ ಶಶಿಕಲಾಗೆ ಜೈಲಿನಲ್ಲಿ ವಿಶೇಷ ಸವಲತ್ತು ಮಾಡಿಕೊಟ್ಟಿದ್ದರು ಎನ್ನಲಾದ ಪ್ರಕರಣವು ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಆರಂಭದಲ್ಲಿ ತನಿಖೆ ಬಗ್ಗೆ ಆಸಕ್ತಿ ವಹಿಸಿ ಶಶಿಕಲಾ ಜೈಲಿನಲ್ಲಿ ಸವಲತ್ತು ಪಡೆದಿರುವುದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಇತರ ಸಾಕ್ಷ್ಯ ಕಲೆ ಹಾಕಿದ್ದರು. ಒಂದೂವರೆ ವರ್ಷದ ಹಿಂದೆ ಪರಿಶೀಲನೆಗಾಗಿ ಆ ದೃಶ್ಯಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಿದ್ದರು. ಆದರೆ, ಎಫ್​ಎಸ್​ಎಲ್​ನಿಂದ ಇದುವರೆಗೆ ವರದಿ ಬಂದಿಲ್ಲ. ಇದರಿಂದ ತನಿಖೆ ಪ್ರಗತಿಗೆ ಅಡ್ಡಿಯಾಗಿದೆ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏನಿದು ಪ್ರಕರಣ?

ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಜೈಲುಶಿಕ್ಷೆಗೆ ಗುರಿಯಾಗಿರುವ ಶಶಿಕಲಾ ಕೆಲ ವರ್ಷಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಜೆ ಅನುಭವಿಸುತ್ತಿದ್ದಾರೆ. ಇವರಿಗೆ ಜೈಲಿನಲ್ಲಿ ವಿಶೇಷ ಸವಲತ್ತು ಕೊಡಲಾಗುತ್ತಿದೆ ಎಂದು ಒಂದೂವರೆ ವರ್ಷದ ಹಿಂದೆ ಆರೋಪಿಸಲಾಗಿತ್ತು. ಇದಕ್ಕಾಗಿ ಆಗಿನ ಕಾರಾಗೃಹ ವಿಭಾಗದ ಡಿಜಿಪಿ ಎಚ್.ಎನ್. ಸತ್ಯನಾರಾಯಣ ರಾವ್ 2 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಅದೇ ವಿಭಾಗದಲ್ಲಿ ಐಜಿಪಿಯಾಗಿದ್ದ ಡಿ. ರೂಪಾ ಮೌದ್ಗಿಲ್ ದೂರಿದ್ದರು. ಆಗ ಶಶಿಕಲಾ ಅವರನ್ನು ಹೋಲುವ ಮಹಿಳೆಯೊಬ್ಬರು ನಗರದ ಹೊರಭಾಗದಲ್ಲಿ ಓಡಾಡುತ್ತಿರುವುದು ಮತ್ತು ಜೈಲಿನಲ್ಲಿ ವಿಶೇಷ ಸವಲತ್ತು ಪಡೆದಿರುವ ವಿಡಿಯೋ ವೈರಲ್ ಆಗಿತ್ತು. ರೂಪಾ ಮಾಡಿದ್ದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ, ಈ ಬಗ್ಗೆ ತನಿಖೆ ನಡೆಸುವಂತೆ ಎಸಿಬಿ ಅಧಿಕಾರಿಗಳಿಗೆ ಸೂಚಿಸಿತ್ತು. ವೈರಲ್ ಆಗಿದ್ದ ವಿಡಿಯೋ ತುಣುಕು ಹಾಗೂ ಇತರ ಕೆಲ ಸಾಕ್ಷ್ಯ ಸಂಗ್ರಹಿಸಿದ್ದ ಎಸಿಬಿ ಅಧಿಕಾರಿಗಳು ಪರಿಶೀಲನೆಗಾಗಿ ಎಫ್​ಎಸ್​ಎಲ್​ಗೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net