ಬಹುಭಾಷಾ ತಾರೆ ರಾಕುಲ್ ಪ್ರೀತ್ ಸಿಂಗ್ ಅಭಿನಯದ ಚಿತ್ರವೊಂದು ಮೈಲಿಗಲ್ಲು ಸಾಧಿಸಿದೆ. ಯುಟ್ಯೂಬ್‌ನಲ್ಲಿ 100 ಕೋಟಿಗೂ ಅಧಿಕ ವೀಕ್ಷಣೆ ಕಾಣುವ ಮೂಲಕ ಭಾರತೀಯ ಸಿನಿಮಾ ರಂಗದಲ್ಲಿ ದಾಖಲೆ ಬರೆದಿದೆ. ಹೌದು, ಶ್ರೀನು ವೇಟ್ಲ ನಿರ್ದೇಶನದ, ರಾಕುಲ್ ಪ್ರೀತ್ ಸಿಂಗ್ ಹಾಗೂ ಬೆಲ್ಲಮಕೊಂಡ ಶ್ರೀನಿವಾಸ್ ಅಭಿನಯದ ತೆಲುಗಿನ ‘ಜಯ ಜಾನಕಿ ನಾಯಕ’ ಚಿತ್ರವು 2017ರಲ್ಲಿ ತೆರೆಕಂಡಿತ್ತು. ಆದರೆ, ಥಿಯೇಟರ್‌ನಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದಾದ ಬಳಿಕ ‘ಜಯ ಜಾನಕಿ ನಾಯಕ’ ಚಿತ್ರದ ಹಿಂದಿ ವರ್ಷನ್ ‘ಖೂಂಖಾರ್’ ಟೈಟಲ್‌ನಲ್ಲಿ 2019ರ ಫೆ. 8ರಂದು ‘ಪೆನ್ ಮೂವೀಸ್’ ಯುಟ್ಯೂಬ್‌ನಲ್ಲಿ ಚಾನೆಲ್‌ನಲ್ಲಿ ರಿಲೀಸ್ ಆಗಿತ್ತು. ನೋಡ-ನೋಡುತ್ತಲೇ ಸಿನಿಮಾದ ವೀಕ್ಷಣೆ ದಿನದಿಂದ ದಿನಕ್ಕೆ ಏರಿಕೆಯಾಗಿದೆ. ಯುಟ್ಯೂಬ್‌ನಲ್ಲಿ ರಿಲೀಸ್‌ಗೊಂಡು ಈ ಏಳು ವರ್ಷಗಳ ಅವಧಿಯಲ್ಲಿ ಚಿತ್ರವು 100 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಆ ಮೂಲಕ ಯುಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆಯಾದ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿನಿಮಾ ಮಂದಿರಲ್ಲಿ ್ಲಾಪ್ ಆಗಿದ್ದ ಈ ಸಿನಿಮಾ ಯುಟ್ಯೂಬ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ನಟಿ ರಾಕುಲ್ ಪ್ರೀತ್ ಸಿಂಗ್ ಜಾಲತಾಣದ ಮೂಲಕ ಖುಷಿ ಹಂಚಿಕೊಂಡು ‘ನಿಮ್ಮ ಪ್ರೀತಿ, ಪ್ರೋತ್ಸಾಹದಿಂದ ‘ಜಯ ಜಾನಕಿ ನಾಯಕ’ ಚಿತ್ರ ಈ ದಾಖಲೆ ಮಾಡಲು ಸಾಧ್ಯವಾಯಿತು. ಹಾಗೆಯೇ, ಸಿನಿಮಾದ ಜತೆಗಿನ ನೆನಪುಗಳನ್ನು ಈಗ ಮತ್ತೊಮ್ಮೆ ಸ್ಮರಿಸುವಂತಾಗಿದೆ. ಎಲ್ಲರಿಗೂ ಧನ್ಯವಾದಗಳು’ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ರಾಕುಲ್ ಪ್ರೀತ್ ಸಿಂಗ್ ‘ಇಂಡಿಯನ್ 3’ ಚಿತ್ರದಲ್ಲಿ ನಟಿಸಿದ್ದು, ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. -ಏಜೆನ್ಸೀಸ್