ಟಿಎಂಸಿ ಪರ ನಟಿ-ಸಂಸದೆ ಜಯಾ ಬಚ್ಚನ್ ಪ್ರಚಾರ

ja
Published on

ಕೊಲ್ಕತಾ: ಪಶ್ಚಿಮ ಬಂಗಾಳದ ಸಿಎಂ ಆಗಿ ಮರುಚುನಾವಣೆ ಬಯಸುತ್ತಿರುವ ಮಮತಾ ಬ್ಯಾನರ್ಜಿ ಅವರಿಗೆ ಶುಭ ಶಕುನವೆಂಬಂತೆ ಹಿರಿಯ ನಟಿ ಮತ್ತು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು, ಟಿಎಂಸಿ ಪರ ಪ್ರಚಾರ ನಡೆಸಲಿದ್ದಾರೆ. ನಿನ್ನೆ ಸಂಜೆ ಕೊಲ್ಕತಾ ತಲುಪಿರುವ ಶ್ರೀಮತಿ ಬಚ್ಚನ್, ಟಾಲಿಗುಂಗ್​ನಲ್ಲಿ ಟಿಎಂಸಿ ಅಭ್ಯರ್ಥಿಯಾಗಿರುವ ಶಾಸಕ ಅರೂಪ್ ಬಿಸ್ವಾಸ್ ಅವರ ಪರ ಇಂದು ಕ್ಯಾಂಪೇನ್​​ ಮಾಡಲಿದ್ದಾರೆ.

ಮೂಲತಃ ಬಂಗಾಳದ ಜಬಲ್​ಪುರದವರಾದ ಜಯಾ ಅವರ ಭಾಗವಹಿಸುತ್ತಿರುವುದು 'ಬಂಗಾಳಕ್ಕೆ ತನ್ನ ಮಗಳೇ ಬೇಕು' ಎಂಬ ಟಿಎಂಸಿಯ ಜನಪ್ರಿಯ ಸ್ಲೋಗನ್ 'ಬಾಂಗ್ಲಾ ನಿಜೇರ್ ಮಾಯಿಕೇ ಛಾಯೇ' ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಲಿದೆ. ಕಳೆದ ತಿಂಗಳು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಅವರು ತಮ್ಮ ಪಕ್ಷವು ಟಿಎಂಸಿ ಪರ ಪ್ರಚಾರ ಮಾಡಲಿದೆ ಎಂದು ಹೇಳಿದ್ದಕ್ಕೆ ಅನುಗುಣವಾಗಿ ಜಯಾ ಬಂಗಾಳದಲ್ಲಿ ಹಾಜರಾಗಿದ್ದಾರೆ ಎನ್ನಲಾಗಿದೆ.

ಬಂಗಾಳದ ಸಿನಿಮಾ ಜಿಲ್ಲೆಯಾಗಿರುವ ಟಾಲಿಗುಂಗ್​​ನಲ್ಲಿ ಟಿಎಂಸಿಯ ಬಿಸ್ವಾಸ್​​ ವಿರುದ್ಧ ಸೆಣಸಲಿರುವ ಬಿಜೆಪಿ ಅಭ್ಯರ್ಥಿ ಎಂದರೆ ಜನಪ್ರಿಯ ಗಾಯಕರೂ ಆಗಿರುವ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ. ಹೀಗಾಗಿ ಚಿತ್ರನಟಿಯಾಗಿರುವ ಜಯಾ ಬಚ್ಚನ್ ಟಿಎಂಸಿ ಪರ ಸ್ಟಾರ್ ಕ್ಯಾಂಪೇನರ್ ಆಗಿ ಭಾಗವಹಿಸುವುದು ಮತದಾರರ ಮೇಲೆ ಉತ್ತಮ ಪ್ರಭಾವ ಬೀರಲಿದೆ ಎಂದು ಟಿಎಂಸಿ ಆಶಿಸುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net