ಮೀಸಲಾತಿಗಾಗಿ ವೀರಶೈವ ಲಿಂಗಾಯತರ ಹೋರಾಟ

swamiji
Published on

ಶಿವಮೊಗ್ಗ: ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಒಬಿಸಿ ಪಟ್ಟಿಯಲ್ಲಿ 3ಬಿಗೆ ಸೇರಿಸುವಂತೆ ಸೋಮವಾರ ರಾಜ್ಯವ್ಯಾಪಿ ಆಗ್ರಹಿಸಲಾಯಿತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೂ ವೀರಶೈವ ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಬಿ.ಎಸ್.ಕಡಕಬಾವಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಕ್ಕಿನ ಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಮುಂತಾದವರು ಪ್ರತಿಭಟನಾ ಮೆರವಣಿಗೆ ನೇತೃತ್ವ ವಹಿಸಿದ್ದರು.

ಬಸವೇಶ್ವರ ವೃತ್ತದ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಪ್ರತಿಭಟನಾ ಮೆರವಣಿಗೆಯಲ್ಲಿ ಡಿಸಿ ಕಚೇರಿವರೆಗೆ ತೆರಳಲಾಯಿತು. ವಿವಿಧ ಮಠಾಧೀಶರು ಕೂಡಾ ಕಾಲ್ನಡಿಗೆಯಲ್ಲೇ ತೆರಳಿದರು. ಕೇಂದ್ರ ಸರ್ಕಾರ ಇತರೆ ಹಿಂದುಳಿದ ವರ್ಗಗಳಿಗೆ ಒಬಿಸಿಯಲ್ಲಿ ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ 60 ವರ್ಷಗಳಿಂದ ಲಿಂಗಾಯತ ಸಮುದಾಯ ಹಿಂದುಳಿದ ಪಟ್ಟಿಯಲ್ಲಿದ್ದರೂ ಕೇಂದ್ರ ಸರ್ಕಾರ ಮಾತ್ರ ಒಬಿಸಿ ಪಟ್ಟಿಗೆ ಸೇರಿಸದೇ ಇರುವುದು ವಿಪರ್ಯಾಸವಾಗಿದೆ ಎಂದು ಹೇಳಿದರು.

ಈಗಾಗಲೇ ಹಿಂದುಳಿದ ಪಟ್ಟಿಗೆ ಸೇರಿರುವ ಇತರೆ ಸಮುದಾಯಗಳಿಗಿಂತ ವೀರಶೈವ ಲಿಂಗಾಯತ ಸಮುದಾಯ ಹಿಂದುಳಿದಿದೆ. ವೀರಶೈವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮತ್ತು ಸಮಾಜದ ಸರ್ವಾಂಗೀಣ ಬೆಳವಣಿಗೆಗಾಗಿ ಸಮುದಾಯದ ಎಲ್ಲಾ 98 ಉಪ ಜಾತಿಗಳನ್ನು ಕೇಂದ್ರ ಸರ್ಕಾರ ತಕ್ಷಣವೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 3ಬಿಗೆ ಸೇರಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net