

ಕರ್ನಾಟಕದ ಎಲ್ಲ ಜಿಲ್ಲೆಗಳೂ ಹತ್ತುಹಲವು ವೈಶಿಷ್ಟ್ಯಗಳನ್ನು ಹೊಂದಿವೆ. ಸ್ಥಳೀಯ ಸಂಸ್ಕೃತಿಯ ಸೊಗಡಿನೊಂದಿಗೆ ಬೆಸೆದಿರುವ ಈ ವಿಶೇಷಗಳು ದೇಶದ ಗಮನವನ್ನು ಸೆಳೆದಿವೆ. ಗೌರವಕ್ಕೂ ಪಾತ್ರವಾಗಿವೆ. ಹಾಗಾಗಿಯೇ, ಕರ್ನಾಟಕ ಎಂದಾಕ್ಷಣ ಸಂಪದ್ಭರಿತ, ನಿಸರ್ಗರಮ್ಯ ರಾಜ್ಯದ ಚಿತ್ರಣ ಕಣ್ಮುಂದೆ ಬರುತ್ತದೆ. ಕನ್ನಡತನದ ಉತ್ಸಾಹ ಹೆಚ್ಚಿಸುವ ರಾಜ್ಯೋತ್ಸವದ ನವೆಂಬರ್ ತಿಂಗಳಲ್ಲಿ ವಿಜಯವಾಣಿ ಕರ್ನಾಟಕದ ಹಿರಿಮೆ-ಗರಿಮೆಗಳನ್ನು 30 ದಿನಗಳ ವಿಶೇಷ ಸರಣಿಯಲ್ಲಿ ಪ್ರಕಟಿಸುತ್ತಿದೆ. ಮಲ್ಲಿಗೆಯ ಪರಿಮಳ ಕನ್ನಡದ ಕಂಪನ್ನು ಹೆಚ್ಚಿಸಿರುವ ಬಗೆಯನ್ನು ಅರಿಯುತ್ತ ರಾಜ್ಯೋತ್ಸವವನ್ನು ಸಂಭ್ರಮಿಸೋಣ.
ಮೊಗ್ಗಿನ ಜಡೆಯ ಸಡಗರವಿರಲಿ, ಮದುವೆಯ ಸಂಭ್ರಮವಿರಲಿ ಅಥವಾ ದೇವತೆಗೆ ಸಲ್ಲಿಸುವ ಪೂಜೆಯಿರಲಿ- ಅಲ್ಲೆಲ್ಲ ಮೊದಲ ಪ್ರಾಶಸ್ಱ ಪಡೆಯುವುದು ಮಲ್ಲಿಗೆಯೇ. ಸಾಹಿತ್ಯ ಮತ್ತು ಚಲನಚಿತ್ರ ರಂಗದಲ್ಲೂ ತನ್ನ ಪರಿಮಳ ಬೀರಿದ ಮಲ್ಲಿಗೆ ಪುಷ್ಪೋದ್ಯಮಕ್ಕೆ ಹೊಸ ಶಕ್ತಿಯನ್ನೇ ತುಂಬಿದೆ. ಕರುನಾಡಿನ ರೈತರು, ಅದರಲ್ಲೂ ರೈತ ಮಹಿಳೆಯರು ವಿದೇಶಗಳಿಗೂ ಮಲ್ಲಿಗೆ ರಫ್ತು ಮಾಡಿ, ಸ್ವಾವಲಂಬನೆಯ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ.
ಮಲ್ಲಿಗೆ ಎಂದರೆ ಅದ್ಭುತ ಪರಿಮಳ, ಹೂಗಳ ಮತ್ತು ಸುಗಂಧದ ರಾಣಿ. ಪ್ರೇಮ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಪ್ರಸಿದ್ಧ ಕವನ ಸಂಕಲನದ ಹೆಸರು ‘ಮೈಸೂರು ಮಲ್ಲಿಗೆ’. ಕನ್ನಡದ ಅತ್ಯುತ್ತಮ ಸಾಹಿತ್ಯ ಕೃತಿಗಳಲ್ಲಿ ಒಂದಾಗಿರುವ ‘ಮೈಸೂರು ಮಲ್ಲಿಗೆ’ ಕೃತಿ 27 ಮರುಮುದ್ರಣಗಳನ್ನು ಕಂಡಿದೆ. ‘ಚೆಲ್ಲಿದರು ಮಲ್ಲಿಗೆಯಾ...’ ಎನ್ನುತ್ತಲೇ ಗಾಯಕರನೇಕರು ಈ ಹೂವಿನ ಕೀರ್ತಿಯನ್ನು ವಿದೇಶಗಳಿಗೂ ಹಬ್ಬಿಸಿದ್ದಾರೆ. ಪುಪ್ಪೋದ್ಯಮದ ಶಕ್ತಿಯಾಗಿ, ಕರುನಾಡಿನ ಸುಂದರ ಕೊಡುಗೆಯಾಗಿ ಮಲ್ಲಿಗೆ ಗುರುತಿಸಿಕೊಂಡಿದೆ.
ಜಿಐ ಟ್ಯಾಗ್ ಗರಿ: ಕರ್ನಾಟಕದಲ್ಲಿ ಕೆಲ ವಿಶಿಷ್ಟ ಉತ್ಪನ್ನಗಳು ಆಯಾ ಸ್ಥಳದೊಂದಿಗೆ ಬೆಸೆದುಕೊಂಡು ಭೌಗೋಳಿಕ ಸೂಚ್ಯಂಕ ಅಂದರೆ ಜಿಐ (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಪಡೆದುಕೊಂಡಿವೆ. ರಾಜ್ಯದ ಮೂರು ಸ್ಥಳಗಳ ಮಲ್ಲಿಗೆಗೆ ಜಿಐ ಟ್ಯಾಗ್ನ ಗರಿ ಸಂದಿದೆ. ಮೈಸೂರು ಮಲ್ಲಿಗೆ, ಹಡಗಲಿ ಮಲ್ಲಿಗೆ, ಉಡುಪಿ ಮಲ್ಲಿಗೆಯ ವ್ಯಾಪ್ತಿ ಉದ್ಯಮವಾಗಿಯೂ ಬೆಳೆದಿದೆ. ತಮ್ಮ ಪರಿಮಳಕ್ಕಾಗಿ ವಿಶ್ವಾದ್ಯಂತ ಪ್ರಸಿದ್ಧವಾಗಿರುವ ಈ ಎಲ್ಲ ಮೂರು ಹೂವಿನ ಪ್ರಭೇದಗಳಿಗೆ ಪೇಟೆಂಟ್ ಮಾಡಲಾಗಿದೆ ಮತ್ತು ಬೌದ್ಧಿಕ ಆಸ್ತಿ ಹಕ್ಕಿನ ಅಡಿಯಲ್ಲಿ ನೋಂದಾಯಿಸಲಾಗಿದೆ.
ಉಡುಪಿ ಮಲ್ಲಿಗೆ: ನೂರು ವರ್ಷಗಳ ಹಿಂದೆ ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಲ್ಲಿಗೆ (ಜಾಸ್ಮಿನಮ್ ಸಾಂಬಾಕ್’ ತಳಿ) ವ್ಯವಸಾಯ ಆರಂಭವಾಯಿತು. ಪ್ರಸ್ತುತ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಇಲ್ಲಿನ ಮಲ್ಲಿಗೆಗೆ ಮುಂಬೈ, ಇಚಲಕರಂಜಿ ಸೇರಿದಂತೆ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಉಡುಪಿ ಜಿಲ್ಲೆಯಲ್ಲಿ ಕೃಷಿ ಜಮೀನಿನಲ್ಲಿ ಮಾತ್ರವಲ್ಲ, ಗೃಹಿಣಿಯರು ಮನೆಯ ಟೆರೇಸ್ನಲ್ಲೂ ಮಲ್ಲಿಗೆ ಬೆಳೆದು ಸಾವಿರಾರು ರೂಪಾಯಿ ಆದಾಯ ಮಾಡಿಕೊಂಡಿರುವುದು ಸ್ಪೂರ್ತಿಯೇ ಸರಿ. ಇಲ್ಲಿಯ ಬೆಳೆಗಾರರು ಮಲ್ಲಿಗೆ ಆಂಡ್ರಾಯ್್ಡ ಅಪ್ಲಿಕೇಶನ್ ಕೂಡ ರೂಪಿಸಿಕೊಂಡು, ಮಲ್ಲಿಗೆ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಉಡುಪಿ ಮಲ್ಲಿಗೆಯನ್ನು ವಿಶೇಷವಾಗಿ ದೇವಾಲಯಗಳ ದೇವತೆಗಳ ಪೂಜೆಗಾಗಿ ಹೂಮಾಲೆಗಳನ್ನು ತಯಾರಿಸಲು ಹಾಗೂ ಮದುವೆ ಸಮಾರಂಭಗಳಿಗಾಗಿ ಬಳಸಲಾಗುತ್ತದೆ. ಖಿನ್ನತೆ ನಿರೋಧಕ ಔಷಧ ತಯಾರಿಕೆಯಲ್ಲೂ ಮಲ್ಲಿಗೆಯನ್ನು ಬಳಸಲಾಗುತ್ತದೆ.
ಹಡಗಲಿ ಮಲ್ಲಿಗೆ: ಮುಂಚೆ ಬಳ್ಳಾರಿ ಜಿಲ್ಲೆಗೆ ಸೇರಿದ್ದ, ಈಗ ವಿಜಯನಗರ ಜಿಲ್ಲೆಯಲ್ಲಿರುವ ಹೂವಿನ ಹಡಗಲಿ ತನ್ನ ಹೆಸರಿನೊಂದಿಗೆ ಹೂವನ್ನು ಹೊಂದಿ, ಪ್ರಸಿದ್ಧಿ ಪಡೆದಿದೆ. ಅಂಚೆ ಇಲಾಖೆಯ ವಿಶೇಷ ಅಂಚೆ ಲಕೋಟೆಯಲ್ಲಿ ‘ಹಡಗಲಿ ಮಲ್ಲಿಗೆ’ ವಿಜೃಂಭಿಸಿದೆ (2021). ವಿಜಯನಗರ ಅರಸರ ಕಾಲದಿಂದಲೂ ಇಲ್ಲಿನ ಸೂಜಿ ಮಲ್ಲಿಗೆ ಖ್ಯಾತಿ ಗಳಿಸಿದ್ದು, ಹಂಪಿಯ ಅಧಿದೇವತೆ ವಿರೂಪಾಕ್ಷ ಪಂಪಾಂಬಿಕೆಯವರ ಪೂಜೆಗೆ ನಿತ್ಯವೂ ಮಲ್ಲಿಗೆ ಹೂವನ್ನು ಇಲ್ಲಿನ ತುಂಗಭಧ್ರಾ ನದಿಯಲ್ಲಿ ತೆಪ್ಪಗಳ ಮೂಲಕ ಕಳಿಸಲಾಗುತ್ತಿತ್ತು ಎಂಬ ಉಲ್ಲೇಖ ಚರಿತ್ರೆಯಲ್ಲಿದೆ.
ಮೈಸೂರು ಮಲ್ಲಿಗೆ: ಮೈಸೂರಿನಲ್ಲಿ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ‘ಮೈಸೂರು ಮಲ್ಲಿಗೆ’ ಎಂದೇ ಖ್ಯಾತವಾಗಿದೆ. ಮೈಸೂರು ಮಹಾರಾಜರ (ಒಡೆಯರ) ಕಾಲದಿಂದಲೂ ಇಲ್ಲಿನ ಮಲ್ಲಿಗೆ ಜನಪ್ರಿಯವಾಗಿದ್ದು, ಕೇರಳ ಮತ್ತು ತಮಿಳುನಾಡಿನಲ್ಲಿ ದೊಡ್ಡ ಬೇಡಿಕೆ ಮತ್ತು ಮಾರುಕಟ್ಟೆ ಹೊಂದಿದೆ. ಮೈಸೂರು ದಸರಾದಷ್ಟೇ ಮೈಸೂರು ಮಲ್ಲಿಗೆಯೂ ಪ್ರಸಿದ್ಧಿಯಾಗಿದ್ದು, ಸಣ್ಣ ರೈತರ ಪಾಲಿಗೆ ಆರ್ಥಿಕ ಸಂಜೀವಿನಿಯೂ ಆಗಿದೆ. ಸುಗಂಧದ್ರವ್ಯಗಳು, ಸೌಂದರ್ಯವರ್ಧಕಗಳು, ಧೂಪದ್ರವ್ಯ (ಅಗರಬತ್ತಿ) ಮತ್ತು ಅರೋಮಾ ಥೆರಪಿಯಲ್ಲೂ ಈ ಮಲ್ಲಿಗೆಯನ್ನು ಬಳಸಲಾಗುತ್ತದೆ.