ಸಚಿವ ಜಾರಕಿಹೊಳಿ ಹೇಳಿಕೆಗೆ ಕಾರ್ಯಾಧ್ಯಕ್ಷರ ಆಕ್ಷೇಪ

manjunath bhandari
ಮಂಜುನಾಥ್ ಭಂಡಾರಿ
Published on

ಬೆಂಗಳೂರು: ಕೆಪಿಸಿಸಿ ಸಂಘಟನೆ ಹಾಗೂ ಅಧ್ಯಕ್ಷರ ಬದಲಾವಣೆ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೀಡಿದ್ದಕ್ಕೆ ಪಕ್ಷದ ಕಾರ್ಯಾಧ್ಯಕ್ಷರಿಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ನಾಯಕತ್ವವು ನಮ್ಮ ಪಕ್ಷದಲ್ಲಿ ಬಲಿಷ್ಠವಾಗಿದೆ. ಕೆಪಿಸಿಸಿ ಅಧ್ಯಕ್ಷರು, ಹಾಗೂ ಮುಖ್ಯಮಂತ್ರಿ, ಸಚಿವರನ್ನು ಯಾವಾಗ ಬದಲಾವಣೆ ಮಾಡಬೇಕು? ಮುಂದುವರಿಸಬೇಕು  ಅಥವಾ ಯಾರಾಗಬೇಕು? ಎಂಬಿತ್ಯಾದಿ ಎಲ್ಲ ವಿಷಯಗಳನ್ನು ಪಕ್ಷದ ಹೈಕಮಾಂಡ್ ನಾಯಕರು ನಿರ್ಧಾರ ಮಾಡಲಿದ್ದಾರೆ. ಆದರೆ, ಈ ಸಂಬಂಧ ಯಾವುದೇ ಸಚಿವರು ಹೇಳಿಕೆಯನ್ನು ಕೊಡಬಾರದು ಎಂದು ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಪಕ್ಷದ ತಾಯಿ ಇದ್ದಂತೆ, ಸರ್ಕಾರ ಮಗು ಇದ್ದಂತೆ. ಯಾರೂ ಸಹ ಪಕ್ಷದ ಘನತೆಗೆ ಚ್ಯುತಿ ತರಬಾರದು ಎಂಬ ಸಂದೇಶವನ್ನು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ನೀಡಿದ್ದಾರೆ. ಇದರ ಮಧ್ಯೆಯೂ ಕೆಲವು ನಾಯಕರು ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕೆಲವು ಸಚಿವರು ಪದೇ ಪದೆ ಮಾತನಾಡುತ್ತಿದ್ದಾರೆ. ಇದು ಸರಿ ಅಲ್ಲವೇ ಅಲ್ಲ. ಆದರೆ, ಸಚಿವರಾದ ತಿಮ್ಮಾಪುರ, ಸತೀಶ್ ಜಾರಕಿಹೊಳಿ ಹಾಗೂ ಎಚ್.ಸಿ. ಮಹದೇವಪ್ಪ ಅವರು ಪದೇ ಪದೆ ಮಾತನಾಡುತ್ತಿದ್ದು, ಹೈಕಮಾಂಡ್ ಗಂಭೀರವಾಗಿ ಎಲ್ಲವನ್ನೂ ಗಮನಿಸುತ್ತಿದೆ. ಎಲ್ಲ ಸಚಿವರ ರಿಪೋರ್ಟ್ ಕಾರ್ಡ್‌ಗಳನ್ನು ಸಹ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ.

ಕಳೆದ ಒಂದೂವರೆ ವರ್ಷದಿಂದ ಸಚಿವರು ತಮ್ಮ ಇಲಾಖೆಯಲ್ಲಿ ಯಾವ ರೀತಿ ಕಾರ್ಯನಿರ್ವಹಣೆ ಮಾಡಿದ್ದಾರೆ? ಎಂಬುದು ಪ್ರಶ್ನೆಯಾಗಿದೆ. ಹಾಗೂ ಈಗಾಗಲೇ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವುದೇ ತೀರ್ಮಾನವನ್ನು ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದರೂ ಅನೇಕ ಸಚಿವರು ಅನಗತ್ಯ ಗೊಂದಲ ಉಂಟು ಮಾಡುವ ಹೇಳಿಕೆ ನೀಡುವವರ ಸಂಪೂರ್ಣ ವರದಿ ಕೇಳಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಪ್ರವಾಸ ಹೋದಂತಹ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದಾರಾ? ಇಲ್ಲವಾ? ಪಕ್ಷದ ಸಂಘಟನೆಗೆ ಒತ್ತು ಕೊಡಲಾಗುತ್ತದೆಯೋ ಇಲ್ಲವೋ? ಪ್ರಣಾಳಿಕೆಯಲ್ಲಿ ಕೊಟ್ಟಿರುವ ಯೋಜನೆಗಳನ್ನು ಜಾರಿ ಮಾಡಲು ಇವರು ಪಕ್ಷ ಮತ್ತು ಸರ್ಕಾರ ಕ್ಕೆ ಸಹಕಾರ ಕೊಡುತ್ತಿದ್ದಾರೋ ಇಲ್ಲವೋ?  ಇದಲ್ಲದೆ ತಮ್ಮ ಇಲಾಖೆಯಲ್ಲಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿದ್ದಾರಾ ಇಲ್ಲವಾ? ಎಂಬಿತ್ಯಾದಿ ಸಂಪೂರ್ಣ ಮಾಹಿತಿಯನ್ನು ಹೈಕಮಾಂಡ್ ಈ ಸಂದರ್ಭದಲ್ಲಿ ಕೇಳಿದೆ. ಅಲ್ಲದೆ, ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಪದೇ ಪದೆ ಮಾಧ್ಯಮಗಳಿಗೆ ಹೇಳಿಕೆ ಕೊಡುವ ಸಚಿವರ ಸಂಪೂರ್ಣ ವಿವರಗಳನ್ನು ಕೊಡುವಂತೆ ಹೈ ಕಮಾಂಡ್ ಸೂಚಿಸಿದೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net