ಸ್ನಾನಕ್ಕೂ ಬಂತೂ ಮಶೀನ್​... AI ಚಾಲಿತ ಮಶೀನ್​ನಲ್ಲಿ ಕೂತ್ರೆ, ಸೋಪ್ ಹಾಕಿ ಮೈ ಉಜ್ಜಿ ಸ್ನಾನ ಮಾಡಿಸಿ ಕಳುಹಿಸುತ್ತೆ..! |Human Wahing Machine

wa final
Published on

ಅಡುಗೆ ಮಾಡುವ, ಬಟ್ಟೆ ಒಗೆಯುವ ಯಂತ್ರಗಳು ಇಂದು ಸಾಕಷ್ಟು ಮನೆಗಳಲ್ಲಿವೆ. ಪಾತ್ರೆ ತೊಳೆಯಲೂ ಮಶೀನ್​ಗಳು ಬಂದಿವೆ. ಕಂಪ್ಯೂಟರ್​ಗಳ ಮುಂದೆ ಗಂಟೆಗಟ್ಟಲೆ ಕುಳಿತ ಮನುಷ್ಯ ತನಗೆ ಕೈಗೊಂದು, ಕಾಲಿಗೊಂದು ಯಂತ್ರಗಳನ್ನೇ ಕೆಲಸಕ್ಕೆ ಇಟ್ಟುಕೊಂಡಿದ್ದಾನೆ. ಅಡುಗೆ ಮಾಡುವುದು ಸೇರಿ ಆಸ್ಪತ್ರೆಗಳಲ್ಲಿ ವೈದ್ಯರ ಜಾಗದಲ್ಲಿ ಆಪರೇಷನ್​ಗೂ ರೋಬೋಟ್​ಗಳು ಬಂದಿವೆ.

ಇತ್ತೀಚೆಗೆ ಮನುಷ್ಯ ತನ್ನ ಎಲ್ಲಾ ಅಗತ್ಯಗಳಿಗೂ ಹಾಗು ಕೆಲಸಗಳಿಗೂ ಯಂತ್ರದ ಮೊರೆ ಹೋಗುತ್ತಿದ್ದಾನೆ. ಎಲ್ಲಾ ಕೆಲಸಗಳನ್ನು ಸುಲಭ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಶೀನ್​​​​ಗಳನ್ನ ತಯಾರಿಸಲು ಮುಂದಾಗುತ್ತಿದ್ದಾನೆ.

ಸದ್ಯ ಇದೀಗ ಮನುಷ್ಯನಿಗೆ ಸ್ನಾನ ಮಾಡಿಸುವ ಯಂತ್ರವನ್ನ ಜಪಾನ್​ನಲ್ಲಿ ತಯಾರಿಸಲಾಗಿದೆ. ಬಟ್ಟೆ ಒಗೆಯಲು ಹೇಗೆ ವಾಷಿಂಗ್ ಇದೆಯೋ ಅದೇ ರೀತಿ ಮನುಷ್ಯರಿಗೂ ಸ್ನಾನ ಮಾಡಿಸುವ ಮಶಿನ್ ಬಂದಿದೆ.

ಕೇವಲ 15 ನಿಮಿಷದಲ್ಲಿ ಸ್ನಾನ...!

ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸ ಮಾಡುವವರದ್ದು ನಿಮಿಷ ನಿಮಿಷವೂ ಲೆಕ್ಕವೇ. ಇಂತಹ ಬಿಡುವಿಲ್ಲದ ಬದುಕಿನಲ್ಲಿ ಯಾರಿಗೆ ಸ್ನಾನ ಮಾಡುವಷ್ಟು ತಾಳ್ಮೆ ಇಲ್ಲವೋ ಅವರು ಈ 15 ನಿಮಿಷಗಳ ಕಾಲ ಯಂತ್ರದೊಳಗೆ ಕುಳಿತುಕೊಳ್ಳಬಹುದು. ಈ ಯಂತ್ರ AI (ಕೃತಕ ಬುದ್ಧಿಮತ್ತೆ) ಸಹಾಯದಿಂದ ಕೆಲಸ ಮಾಡುತ್ತದೆ ಅಂತ ಕಂಪನಿ ತಿಳಿಸಿದೆ. ಯಂತ್ರದೊಳಗೆ ನೀವು ಹೋದಾಗ ಮೊದಲು ನಿಮ್ಮ ದೇಹದ ಚರ್ಮದ ಬಗ್ಗೆ ತಿಳಿದುಕೊಳ್ಳುತ್ತದೆ. ಅದರ ಆಧಾರದ ಮೇಲೆ ನಿಮಗೆ ಸೋಪ್ ಆಯ್ಕೆ ಮಾಡುತ್ತದೆ. ಅಲ್ಲದೇ ವಾಷಿಂಗ್​​​ ಮಶೀನ್​ನಲ್ಲಿ ನಾವು ಹೇಗೆ ಬಟ್ಟೆ ಒಣಗಿಸುತ್ತೇವೆಯೋ ಸಅದೇ ರೀತಿಯಲ್ಲೇ ನಿಮ್ಮ ದೇಹಕ್ಕೂ ಸ್ನಾನ ಮಾಡಿಸಿ ನಿಮ್ಮ ದೇಹವನ್ನ ಒಣಗಿಸಿಯೇ ಹೊರಗಡೆ ಕಳಿಸುತ್ತದೆ.

ಜಪಾನ್​ನ ಸೈನ್ಸ್​ ಕೋ ಕಂಪನಿ, 2025ರಲ್ಲಿ ಒಸಾಕಾ ಕನ್ಸಾಯ್​​ನಲ್ಲಿ ನಡೆಯಲಿರುವ ಎಕ್ಸ್​ಪೋದಲ್ಲಿ ಮೊದಲು 1 ಸಾವಿರ ಜನರಿಗೆ ಪ್ರಾಯೋಗಿಕವಾಗಿ ಸ್ನಾನ ಮಾಡಿಸುವ ಮೂಲಕ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಲಿದೆಯಂತೆ. 1 ಸಾವಿರ ಜನರಿಗೆ ಸ್ನಾನ ಮಾಡಿಸಿ ಅವರಿಂದ ಬಂದ ಪ್ರತಿಕ್ರಿಯೆ ಆಧಾರದ ಮೇಲೆ ಮತ್ತಷ್ಟು ಯಂತ್ರಗಳನ್ನು ಮಾರುಕಟ್ಟೆಗೆ ತರಲು ಕಂಪನಿ ಯೋಚಿಸಿದೆ.

ವಾಷಿಂಗ್ ಮಶೀನ್ ನೋಡಲು ವಿಮಾನದ ಕಾಕ್​​ಪಿಟ್​ ಆಕಾರದಲ್ಲಿದೆ. ವ್ಯಕ್ತಿಯು ಮೊದಲು ಮಶಿನ್ ಒಳಗೆ ಕೂತಾಗ ಬಿಸಿ ನೀರು ಮಳೆಯಂತೆ ಸುರಿಸುತ್ತದೆ. ಆ ನೀರಿನಿಂದ 3 ಮೈಕ್ರೋಮೀಟರ್ ಗಾತ್ರದ ಸಣ್ಣ ನೀರಿನ ಗುಳ್ಳೆಗಳು ದೇಹದ ಕೊಳೆಯನ್ನು ತೆಗೆದುಹಾಕುತ್ತವೆ. ನೀವು ಯಂತ್ರದ ಒಳಗೆ ಕುಳಿತಾದ ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಸೋಪ್​ನ ದ್ರಾವಣದ ನೊರೆ ಮೈಮೇಲೆ ಸಿಡಿಸುತ್ತದೆ. ಇದರಿಂದ ನಿಮ್ಮ ದೇಹದ ಮೇಲಿನ ಕೊಳೆ ತೆಗೆಯುತ್ತದೆ. ಬಳಿಕ ನಿಧಾನವಾಗಿ ನೀರು ಸಿಂಪಡಿಸಲು ಆರಂಭಿಸುತ್ತದೆ. ನೀರಿನಿಂದ ನಿಮ್ಮ ದೇಹ ಶುದ್ಧವಾದ ಬಳಿಕ ನಿಮ್ಮ ದೇಹವನ್ನು ಒಣಗಿಸುತ್ತದೆ. ಇಲ್ಲಿ ನಿಮಗೆ ಎಷ್ಟು ಬಿಸಿ ಗಾಳಿ ಬೇಕೋ ಅಷ್ಟನ್ನೇ ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಸ್ನಾನ ಮಾಡಿಸುವಾಗ ನಿಮ್ಮ ಯೋಚನೆಗ ತಕ್ಕಂತೆ ಸಂಗೀತ ಕೂಡ ನುಡಿಸಲಿದೆ ಅಂತ ಕಂಪನಿ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net