

ಇವೆಲ್ಲವೂ ಭೌಗೋಳಿಕ ಪ್ರಪಂಚದ ವಿವರಣೆಗಳು. ಆದರೆ ನಾವು ಇಲ್ಲಿ ಅರ್ಥೈಸಬೇಕಾದ್ದು, ತಿಳಿಯಬೇಕಾದ್ದು ಇನ್ನೂ ಆಳವಾದ ಸ್ತರದಲ್ಲಿ. ಈ ಪ್ರಪಂಚದಲ್ಲಿ ಮನುಷ್ಯನು ನೂರಾರು ಶಕ್ತಿಗಳಿಂದ ಪ್ರಭಾವಿಸಲ್ಪಡುತ್ತಾನೆ. ಯಾವ ಶಕ್ತಿಗೂ ಮಣಿಯದೆ, ಪ್ರಭಾವಿತನಾಗದೆ ಸರ್ವಸ್ವತಂತ್ರನಾಗಬೇಕು ಎಂದು ಆಶಿಸುವುದನ್ನೇ, ಆ ನಿಟ್ಟಿನಲ್ಲಿ ಗಂಭೀರವಾಗಿ ಪ್ರಯತ್ನಿಸುವುದನ್ನೇ ‘ಆಧ್ಯಾತ್ಮಿಕ ಜೀವನ’ ಎನ್ನುತ್ತೇವೆ. ಗಾಳಿ, ಬಿಸಿಲು, ಮಳೆ, ಭೂಮಿ ಇತ್ಯಾದಿಗಳು ನಿರಂತರ ನಮ್ಮನ್ನು ನಿಯಂತ್ರಿಸುತ್ತಿರುತ್ತವೆ, ಒಂದೇ ಬೆಳೆ ಎಲ್ಲ ಕಡೆಯೂ ಬೆಳೆಯಲಾರದು; ಅಷ್ಟೇ ಏಕೆ ಒಂದೇ ಕಡೆಯೇ ಎಲ್ಲ ಕಾಲದಲ್ಲಿಯೂ ಬೆಳೆಯಲಾರದು. ಎಷ್ಟೇ ಜಿಗಿದಾಡಿದರೂ ಮನುಷ್ಯ ಅಸಹಾಯಕ ಮತ್ತು ಪ್ರಾಕೃತಿಕ ಶಕ್ತಿಗಳಿಂದ ನಿರಂತರ ನಿಯಂತ್ರಿಸಲ್ಪಡುತ್ತಿರುವ ಜೀವಿ. ಇದನ್ನು ವಿಶ್ವದಲ್ಲಿಯೇ ಮೊದಲು ಕಂಡುಕೊಂಡವರು ವೇದಕಾಲದ ಋಷಿಗಳು. ಆದ್ದರಿಂದ ವೇದಗಳ ಉದ್ದಕ್ಕೂ ನಾವು ಕಾಣುವುದು ಈ ಪ್ರಾಕೃತಿಕ ಶಕ್ತಿಗಳ ಉಪಾಸನೆ ಮತ್ತು ಪ್ರಾರ್ಥನೆ. ಅವುಗಳ ಕೃಪೆಯನ್ನು ಪಡೆಯುವ ಪ್ರಯತ್ನ. ಆ ಮಹಾನ್ ಪ್ರಾಕೃತಿಕ ಶಕ್ತಿಗಳಲ್ಲಿ ಸೌರವ್ಯೂಹದಲ್ಲಿ ಬರುವ ‘ನವಗ್ರಹ’ಗಳಿಗೂ ಗಣ್ಯಸ್ಥಾನ ಕೊಡಲಾಗಿದೆ. ಅವುಗಳ ಪ್ರಭಾವ ಗಂಭೀರ ಹಾಗೂ ಅತಿಸೂಕ್ಷ್ಮ. ಈ ನವಗ್ರಹಗಳಲ್ಲಿ ಜ್ಯೋತಿಶ್ಶಾಸ್ತ್ರದ ಪ್ರಕಾರ ಸೂರ್ಯನೂ ಒಂದು ಗ್ರಹವೇ! ಚಂದ್ರನೂ ಗ್ರಹವೇ! ಅಷ್ಟೇ ಅಲ್ಲ! ಬೇರೆಲ್ಲ ಗ್ರಹಗಳಿಗಿಂತ ಪ್ರಾಮುಖ್ಯ ಪಡೆದಿವೆ ಎಂದರೆ ತಪ್ಪಾಗಲಾರದು. ಇಲ್ಲಿ ಸಾಂಪ್ರದಾಯಿಕ ಜ್ಯೋತಿಷ ಮತ್ತು ಆಧುನಿಕ ವಿಜ್ಞಾನಕ್ಕೆ ಇರುವ ವ್ಯತ್ಯಾಸ ಹೆಸರುಗಳಿಗಷ್ಟೇ ಸೀಮಿತ. ಆದರೆ ಆಧುನಿಕ ವಿಜ್ಞಾನದಷ್ಟೇ ಕರಾರುವಾಕ್ಕಾಗಿ ಗ್ರಹಣ ಇತ್ಯಾದಿಗಳನ್ನು ಸಾವಿರಾರು ವರ್ಷಗಳಷ್ಟು ಮುಂಚೆಯೇ ಜ್ಯೋತಿಷ್ಯರು ನಿರ್ಷRಸುತ್ತಿದ್ದರು ಎನ್ನುವ ವಿಚಾರ ಗಮನೀಯ ಮತ್ತು ಪ್ರಶಂಸನೀಯ. ಜ್ಯೋತಿಶ್ಶಾಸ್ತ್ರದಲ್ಲಿ ಸೌರಮಾನ ಮತ್ತು ಚಾಂದ್ರಮಾನ ಎಂದು ಕರೆಯಲ್ಪಡುವ ಎರಡು ಪ್ರತ್ಯೇಕ ಪದ್ಧತಿಗಳಿವೆ ; ಎರಡು ಪ್ರತ್ಯೇಕ ವರ್ಷಾರಂಭಗಳೇ (ಯುಗಾದಿ) ಇವೆ. ಹೆಸರೇ ಸೂಚಿಸುವಂತೆ ಒಂದು ಸೂರ್ಯಕೇಂದ್ರಿತ ಅಥವಾ ಸೌರಮಾನ. ಮತ್ತೊಂದು ಚಂದ್ರಕೇಂದ್ರಿತ ಅಥವಾ ಚಾಂದ್ರಮಾನ. ಸೂರ್ಯ ಪೌರುಷವಂತಿಕೆ ಇತ್ಯಾದಿ ಪುರುಷಪ್ರಧಾನ ಲಕ್ಷಣಗಳಿಗೆ ಪ್ರತಿನಿಧಿ ಅಥವಾ ಸಂಕೇತ. ಚಂದ್ರನಾದರೋ ಪ್ರಕೃತಿ ಅಥವಾ ಮಾನಸಿಕ ಗುಣಲಕ್ಷಣಗಳನ್ನು ಸಾಕಷ್ಟೇ ಪ್ರಭಾವಿಸುವ ಒಂದು ಸೂಕ್ಷ್ಮಶಕ್ತಿ. ಹುಣ್ಣಿಮೆ, ಅಮಾವಾಸ್ಯೆಗಳಂದು ಮಾನಸಿಕ ಕ್ಲಿಷ್ಟತೆಗಳು, ಸ್ಥಿತ್ಯಂತರಗಳು ಉಲ್ಬಣಿಸುವುದು ಸರ್ವವಿದಿತವೇ ಆಗಿದೆ. ಈ ಹಿನ್ನೆಲೆಯಲ್ಲಿ ಸಂಕ್ರಾಂತಿಯನ್ನು ವಿಶ್ಲೇಷಿಸಹೊರಟರೆ ಸಂಕ್ರಾಂತಿಯ ಸಂದೇಶ ಸಹಜವಾಗಿಯೇ ಇದೆ ಅದೇ ‘ಕ್ರಾಂತದರ್ಶಿಯಾಗು; ಕ್ರಾಂತಿಯೊಂದನ್ನು ಹುಟ್ಟುಹಾಕು’ ಎಂದು. ಪೌರುಷವಿಲ್ಲದ ಕ್ರಾಂತಿಗೆ ಅರ್ಥವೇನು?! ಆದ್ದರಿಂದ ಪೌರುಷಕ್ಕೆ ಸಂಕೇತವಾದ, ಸೌರಪ್ರಧಾನ ದಿನವನ್ನೇ ‘ಸಂಕ್ರಾಂತಿ’ಯನ್ನಾಗಿ ಆರಿಸಿಕೊಳ್ಳಲಾಗಿದೆ.
‘ಕ್ರಾಂತಿ’ ಎನ್ನುವ ಪದ ಬಹಳಷ್ಟು ಬಳಕೆಯಲ್ಲಿದ್ದರೂ ಇತ್ತೀಚೆಗೆ ಅದು ‘ಪಾಶ್ಚಿಮಾತ್ಯ ಗಂಧ’ದಿಂದ ಸಿಕ್ತವಾಗಿದೆ. ಕತ್ತಿ ಹಿಡಿದು, ರಕ್ತದ ಕೋಡಿ ಹರಿಸಿ, ಮತಾಂಧತೆ, ಭೋಗತೃಷೆ, ಕ್ರೌರ್ಯಗಳನ್ನು ಮೆರೆದವರನ್ನು ಅವರು ‘ಕ್ರಾಂತಿಕಾರಿ’ಗಳು ಎಂದು ಸ್ತುತಿಸಿದ್ದಾರೆ, ಅದು ಅವರ ಹೀರೋ ಪದಕ್ಕೆ ಅನ್ವಯಿಸಬಹುದು. ನಮ್ಮ ‘ಧೀರ’ ಎನ್ನುವ ಪದಕ್ಕಲ್ಲ. ಇಂದು ಪಾಶ್ಚಾತ್ಯರ ಚಿಂತನೆಗಳನ್ನು ಅವು ಎಷ್ಟೇ ‘ಬಾಹ್ಯ’ವಾಗಿದ್ದರೂ ನಮ್ಮ ಸಾಂಸ್ಕೃತಿಕ ಚೌಕಟ್ಟಿಗೆ ಹೊಂದುವಂತೆ ಹಿಗ್ಗಿಸಿ ಬಗ್ಗಿಸಿ ಭಟ್ಟಿ ಇಳಿಸುವ ಅವೈಜ್ಞಾನಿಕ ಪ್ರಕ್ರಿಯೆಯೊಂದು ತನ್ನ ವಿಕೃತ ಮುಖವನ್ನು ಮೆರೆಯುತ್ತಿರುವುದು ಗಂಭೀರ ಚಿಂತನೆಯನ್ನೇ (ಸತ್ಯಾನ್ವೇಷಣೆಯನ್ನೇ) ಪ್ರಧಾನ ಗುರಿಯಾಗಿಸಿಕೊಂಡ ವಿದ್ವನ್ವಲಯಗಳಿಗೆ ಸಹ್ಯವಲ್ಲದಿರುವುದಂತೂ ಸರ್ವವಿದಿತ. ಸೋದಾಹರಣೆಯಾಗಿ ರಿಲಿಜನ್ ಧರ್ಮವಾಗಿದ್ದು ಒಂದಾದರೆ ಸೆಕ್ಯುಲರಿಜಂ ಧರ್ಮನಿರಪೇಕ್ಷತೆ ಮತ್ತು ಹೀರೋ ಧೀರನಾಗಿದ್ದು ಇನ್ನೊಂದು. (ಭಾರತೀಯ ಪಾರಂಪರಿಕ, ಶಾಶ್ವತ ಮತ್ತು ಸಾರ್ವಕಾಲಿಕ ಮೌಲ್ಯಗಳನ್ನು ಅಪಭ್ರಂಶಗೊಳಿಸಿ ಜನರ ಮುಂದೆ ಇಡುತ್ತಿರುವ ಒಂದು ‘ಬೌದ್ಧಿಕ ವರ್ಗ’ ಮಾಡುತ್ತಿರುವ interpretational blunders ಒಂದು ಮೌಲಿಕ ವಿದೂಷಕತ್ವವೇ ಸರಿ.) ಹಾಗಾದರೆ ನಿಜವಾದ ‘ಕ್ರಾಂತಿ’ ಯಾವುದು? ‘ಕ್ರಾಂತದರ್ಶಿ’ ಯಾರು? ಪ್ರತಿಯೊಬ್ಬನನ್ನೂ ಕ್ರಾಂತದರ್ಶಿಯನ್ನಾಗಿಸುವುದೇ ಸಂಕ್ರಾಂತಿಯ ಸಂದೇಶ.
ಸಾಮಾನ್ಯವಾಗಿ ಇಂದ್ರಿಯ ಸಮೂಹ ಗ್ರಹಿಸಲಾಗದ, ಅತಿಮಾನುಷ ಸತ್ಯಗಳ ಮಹತ್ವ ಗ್ರಹಿಸಿ ಪ್ರಕೃತಿಯಲ್ಲಿ ಕ್ರಿಯಾಶೀಲವಾಗಿರುವ ನೂರಾರು ಶಕ್ತಿಗಳ ಮೇಲೆ ಹಿಡಿತ ಸಾಧಿಸಬಲ್ಲವನೇ ಕ್ರಾಂತದರ್ಶಿ. ಇವನೇ ನಿಜವಾದ ಕ್ರಾಂತಿಕಾರಿ! ಕ್ರಾಂತಿ ನಡೆಯುವುದು ಜಡವಸ್ತು ಚೈತನ್ಯವಾದಾಗ; ಅಥವಾ ಅದರಲ್ಲಿರುವ ಸುಪ್ತಚೈತನ್ಯ ವ್ಯಕ್ತಗೊಳ್ಳುವ ಸುಸ್ಥಿತಿಯನ್ನು ತಲುಪಿದಾಗ ; ಏಕಕೋಶ ಜೀವಿ ಬಹುಕೋಶ ಜೀವಿಯಾಗಿ ರೂಪಗೊಂಡಾಗ; ಮನುಷ್ಯ ಮಹಾಮನುಷ್ಯ, ಅಸಾಮಾನ್ಯ ಮನುಷ್ಯನಾದಾಗ. ಈ ಎಲ್ಲ ಪ್ರಕ್ರಿಯೆಗಳೂ ‘ಧೀ’ ಅರ್ಥಾತ್ ‘ಎಚ್ಚೆತ್ತ ಬುದ್ಧಿ’ಗೆ ಸಂಬಂಧಿಸಿದ್ದು. ಎಚ್ಚೆತ್ತ ಬುದ್ಧಿಯನ್ನೇ ಸಾಮಾನ್ಯವಾಗಿ ‘ಪ್ರಜ್ಞಾ’ ಎಂದು ಕರೆಯುವುದುಂಟು. ಇದೊಂದು ರೀತಿಯಲ್ಲಿ ಅಜ್ಞಾನ ಎಂಬ ಕತ್ತಲೆಯಲ್ಲಿ ನಮ್ಮ ಗ್ರಹಿಕೆಗೆ ನಿಲುಕದಿರುವ ನೂರಾರು ಅಮೂಲ್ಯ ವಸ್ತುಗಳು ‘ಧೀ’ ಎಂಬ ಬೆಳಕಿನಲ್ಲಿ ನಮ್ಮ ಗ್ರಹಿಕೆಗೆ ಬಂದಂತೆ. ಪ್ರಕೃತಿ ಪ್ರತಿನಿತ್ಯ ನೂರಾರು ಪ್ರಯೋಗಗಳನ್ನು ನಮ್ಮ ಮುಂದೆ ನಡೆಸುತ್ತಲೇ ಇದೆ. ಸಾಮಾನ್ಯ ಮನುಷ್ಯ ತನ್ನ ಸಾಮಾನ್ಯ ಇಂದ್ರಿಯ ಸಮೂಹದಿಂದ ಏನೂ ನಡೆದೇ ಇಲ್ಲವೇನೋ ಎನ್ನುವಂತೆ ಸುಮ್ಮನೆ ತೆಪ್ಪಗಿರುತ್ತಾನೆ. ಆದರೆ ‘ಪ್ರಜ್ಞಾ’ವಂತ ಅಥವಾ ‘ಧೀ’ಮಂತನಾದರೋ ವಿಶೇಷ ರೀತಿಯಲ್ಲಿ ಪ್ರಚೋದಿತನಾಗುತ್ತಾನೆ. ಸೇಬಿನ ಹಣ್ಣು ಬಿದ್ದದ್ದನ್ನು ಎಷ್ಟೋ ಜನ ನೋಡಿದ್ದರು. ಆದರೆ ನ್ಯೂಟನ್ ಮಾತ್ರ ಅದರಿಂದ ಪುಳಕಗೊಂಡ. ಹೆಣವನ್ನು, ರೋಗಿಯನ್ನು, ಮುದುಕನನ್ನು ಸಹಸ್ರಾರು ಜನ ನೋಡಿದ್ದರು. ಸಿದ್ದಾರ್ಥ ಮಾತ್ರ ಯೋಚನಾಪರನಾದ. ಈ ಎರಡೂ ಘಟನೆಗಳು ಜಗತ್ತಿನಲ್ಲಿ ತಂದ ಕ್ರಾಂತಿಗಳನ್ನು ವಿಶ್ಲೇಷಿಸಿ! ಒಂದು ಲೌಕಿಕ ಪ್ರಪಂಚದಲ್ಲಿ ಕ್ರಾಂತಿಯನ್ನೇ ತಂದಿತು. ಯಾವುದೇ ವಸ್ತುವನ್ನು ಚಲನೆಗೆ ಒಳಪಡಿಸುವುದು ಹೇಗೆ? ಮತ್ತು ಅದನ್ನು ನಿಯಂತ್ರಿಸುವುದು ಹೇಗೆ? ಎನ್ನುವ ಸಿದ್ಧಾಂತವನ್ನು ನೀಡಿ ಬೈಸೈಕಲ್ನಿಂದ ಹಿಡಿದು ಆಕಾಶಕಾಯಗಳವರೆಗಿನ ಇಡೀ ಚಾಲನ ಪ್ರಪಂಚವೇ ತನ್ನ ರಹಸ್ಯಗಳನ್ನು ಬಿಟ್ಟುಕೊಡುವಂತಾಯ್ತು.
ಹಾಗೆಯೇ ಈಜಿಪ್ಟಿನಿಂದ ಜಪಾನ್ವರೆಗಿನ ಅಂದಿನ ಮೃಗಸದೃಶ ಅರೆ ನಾಗರಿಕ ಪ್ರಪಂಚಕ್ಕೆ (ಕೆಲವು ವಿನಾಯಿತಿಗಳ ಹೊರತುಪಡಿಸಿ) ಬೆಳಕನ್ನು ನೀಡಿ ಮನುಷ್ಯರನ್ನಾಗಿಸಿದ್ದು ಬೌದ್ಧಧರ್ಮ. ಇದೂ ಒಬ್ಬ ವ್ಯಕ್ತಿಯ ‘ಧೀ’ಮಂತಿಕೆಯ ಫಲ. ವಿಜ್ಞಾನ ಮತ್ತು ಅಧ್ಯಾತ್ಮಗಳೇ ‘ಸಮ್ಯಕ್ ಕ್ರಾಂತಿ’ಯ ಸ್ಪಷ್ಟ ವ್ಯಕ್ತತೆಗಳು. ಈ ಇಬ್ಬರೂ ಮುತ್ಸದ್ದಿಗಳು ಇಂದ್ರಿಯಗ್ರಹಣದ ಆಚೆಗಿನ ಸೂಕ್ಷ್ಮ ಪ್ರಪಂಚದ ಆಂತರಿಕ ರಚನೆಗಳ ಮತ್ತು ಅವುಗಳ ಕ್ರಿಯಾಯೋಜನೆಗಳನ್ನು ಅರಿಯಲೆತ್ನಿಸಿದವರು ಮತ್ತು ಅದರಲ್ಲಿ ಸಫಲರಾದವರು! ವಿಜ್ಞಾನ ಇಂದು ರಾತ್ರಿಯನ್ನು ಹಗಲನ್ನಾಗಿಸಿದೆ. ನೀರನ್ನು ಕೆಳಗಿನಿಂದ ಮೇಲಕ್ಕೆ ಹರಿಯುವಂತೆ ಮಾಡಿದೆ. ಕಣ್ಣಿಗೆ ಕಾಣದ್ದನ್ನು ಕಾಣುವಂತೆ, ಕಿವಿಗೆ ಕೇಳದ್ದನ್ನು ಕೇಳಿಸುವಂತೆ ಮಾಡಿದೆ. ಸಾಯುತ್ತಿರುವನನ್ನು ಬದುಕಿಸುತ್ತದೆ. ಬಡವನಿಗೆ ಹೇರಳವಾಗಿ ತಿನ್ನಲು ಸಿಗುವಂತೆ ಮಾಡಿದೆ. ಇದೇ ನಿಜವಾದ ಕ್ರಾಂತಿ. ಹಾಗೆಯೇ ಎಲ್ಲ ಸಮೃದ್ಧಿಗಳ ನಡುವೆಯೇ ಅಶಾಂತಿಯ ಹೊಂಡ ನಿರ್ವಣವಾದಾಗ, ಉಸಿರೆಲ್ಲ ನಿಟ್ಟುಸಿರಾದಾಗ, ಅವನಿಗೆ ಸಾಂತ್ವನ ನೀಡುವ ಮೃದುಸ್ಪರ್ಶ, ವಾತ್ಸಲ್ಯಧಾಮ ಅಧ್ಯಾತ್ಮ, ಹಾಗೆ ಮಾಡಿದವನೂ ಕ್ರಾಂತದರ್ಶಿಯೇ.
ಐಸಾಕ್ ನ್ಯೂಟನ್ ಮತ್ತು ಭಗವಾನ್ ಬುದ್ಧ ಮಾತ್ರವೇ ಕ್ರಾಂತದರ್ಶಿಗಳಾಗಬೇಕೇ? ಸ್ವಯಂ ಬುದ್ಧನೇ ‘ಬುದ್ಧತ್ವ ಒಂದು ಸ್ಥಿತಿ ಅದನ್ನು ಯಾರೂ ಪಡೆಯಬಹುದು’ ಎಂದು ಘೊಷಿಸಿದ್ದಾನೆ. ಹಾಗೆಯೇ ಎಚ್ಚೆತ್ತ ಬುದ್ಧಿಯನ್ನು ಜಡ ಪ್ರಪಂಚದೆಡೆಗೆ ಹರಿಯಿಸಿದರೆ ಅದು ಕೂಡ ತನ್ನ ರಹಸ್ಯಗಳನ್ನು ಬಿಚ್ಚಿಟ್ಟು ನಮ್ಮನ್ನು ವಿಜ್ಞಾನಿಯನ್ನಾಗಿಸುತ್ತದೆ. ಪ್ರತಿಯೊಬ್ಬರಲ್ಲೂ ಈ ಸಾಮರ್ಥ್ಯವಿದೆ. ಅದರಲ್ಲಿ ವಿನಾಯಿತಿಯೇ ಇಲ್ಲ!
ಸುಪ್ರಸಿದ್ಧ ಕಲಾಕಾರ, ಶಿಲ್ಪಿ ಮೈಕೆಲ್ ಏಂಜಲೋನನ್ನು ಒಬ್ಬರು ‘ಇಷ್ಟು ಅದ್ಭುತ ಮೂರ್ತಿಗಳನ್ನು ಹೇಗೆ ನಿರ್ವಿುಸುವೆ?’ ಎಂದು ಕೇಳಿದರು, ಏಂಜಲೋ ಕೊಟ್ಟ ಉತ್ತರ ಕಣ್ಣು ತೆರೆಸುವಂಥದ್ದು. ‘ಪ್ರತಿ ಕಲ್ಲಿನ ಒಳಗೂ ಒಂದು ಸುಂದರ, ಮನಸೂರೆಗೊಳ್ಳುವ ಮೂರ್ತಿ ಅಡಗಿದೆ. ಆದರೆ ಅದರ ಜೊತೆಗೆ ಅನವಶ್ಯಕವಾದ ಕೆಲವು ಭಾಗಗಳು ಅದಕ್ಕೆ ಅಂಟಿಕೊಂಡಿವೆ. ನಾನು ಸುಂದರ ಮೂರ್ತಿಯನ್ನು ಮಾತ್ರ ಉಳಿಸಿಕೊಂಡು ಮಿಕ್ಕಿದ್ದನ್ನು ಉಳಿ ಮತ್ತು ಸುತ್ತಿಗೆಗಳಿಂದ ತೆಗೆದುಬಿಡುತ್ತೇನೆ. ಅಡಗಿದ್ದ ಸೌಂದರ್ಯರಾಶಿ ಮೈದೋರುತ್ತದೆ. ನಾನು ಏನನ್ನೂ ನಿರ್ವಿುಸುವುದಿಲ್ಲ’ ಎಂದು ಉತ್ತರಿಸುತ್ತಾನೆ.
ಐಪಿಎಸ್ ಪ್ರೊ›ಬೇಷನರಿಗಳಿಗೆ ತರಬೇತಿ ನೀಡುವ, ಹೈದರಾಬಾದಿನ ‘ಇಂಡಿಯನ್ ಪೊಲೀಸ್ ಅಕಾಡೆಮಿ’ ಮೈಕೆಲ್ ಏಂಜಲೋನ ಇದೇ ಚಿಂತನೆಯನ್ನು ಉಪಯೋಗಿಸಿಕೊಂಡು ಪ್ರವೇಶದ್ವಾರದ ಬಳಿ ಹೀಗೆ ಉಲ್ಲೇಖಿಸಿದೆ. ‘ಓ! ಪ್ರೋಬೇಶನರಿ ಯುವಕ-ಯುವತಿಯರೇ! ನಿಮ್ಮಲ್ಲಿ ಒಬ್ಬ ಅದ್ಭುತ ಐಪಿಎಸ್ ಅಧಿಕಾರಿ ಅಡಗಿದ್ದಾರೆ. ಅವರನ್ನು ಹೊರತೆಗೆಯಲು ನಮ್ಮೊಡನೆ ಸಹಕರಿಸಿ’ ಎನ್ನುವುದೇ ಆ ಮಾರ್ವಿುಕ ಮಂತ್ರ.
ಸನಾತನ ಸಂಸ್ಕೃತಿ ಎಂಬ ಚಿನ್ನದ ಗಣಿ ಅನಾದಿ ಕಾಲದಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದೊಂದು ಅಕ್ಷಯಪಾತ್ರೆ. ಅಲ್ಲಿ ಸಿಗುವ ಪರಿಹಾರಗಳಿಗೂ ಲೆಕ್ಕವಿಟ್ಟವರಿಲ್ಲ. ಅದರಿಂದ ಸುಚೇತನಗೊಂಡವರಿಗೂ ಲೆಕ್ಕವಿಟ್ಟವರಿಲ್ಲ. ಅದು ಜಗತ್ತಿನಾದ್ಯಂತ ನಿರಂತರ ಪಸರಿಸುವ ಮಲಯ ಮಾರುತ. ಯಾವ ಗಟ್ಟಿಮರವನ್ನೂ ಶ್ರೀಗಂಧವನ್ನಾಗಿಸುವ ಸಾಮರ್ಥ್ಯ ಅದರದ್ದು. ಆದರೆ ‘ಶ್ರದ್ಧೆ ’ ಎಂಬ ಗಟ್ಟಿತನ ಅಲ್ಲಿರಬೇಕು. ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ‘ಪ್ರಾರಂಭಿಕ ದೀಕ್ಷೆ’ ಇರುತ್ತಿತ್ತು. ಅದು ಅವನನ್ನು ಅಂತಮುಖನನ್ನಾಗಿಸಿ ಎಲ್ಲಿಯೋ ಸುಪ್ತವಾಗಿ ಹುದುಗಿರುವ ‘ಧೀ’ಶಕ್ತಿಯನ್ನು ಬಡಿದೆಬ್ಬಿಸಿ ‘ಧೀ’ಮಂತನನ್ನಾಗಿಸುವ ಪ್ರಕ್ರಿಯೆಯಲ್ಲಿ 12 ವರ್ಷಗಳ ಸುದೀರ್ಘ ಕಾಲ ತೊಡಗಿಸಿಕೊಳ್ಳುತ್ತಿತ್ತು. ಶ್ರೀರಾಮಕೃಷ್ಣರು ಹೇಳುತ್ತಿದ್ದ ‘ಮೇಧಾನಾಡಿ’ಯನ್ನು ಜಾಗೃತಗೊಳಿಸುತ್ತಿತ್ತು. ಈ ‘ಮೇಧಾನಾಡಿ’ ಸಮಷ್ಟಿ ಸ್ತರದಲ್ಲಿ ನಾವು ಏನನ್ನು ‘ಸರಸ್ವತಿ’ ಎಂದು ಕರೆಯುತ್ತೇವೆಯೋ ಅದರ ‘ವ್ಯಷ್ಟಿ’ರೂಪ. ಅದನ್ನು ಕುರಿತು ಒಂದು ಸೂಕ್ತಿಯೇ ವೇದಗಳಲ್ಲಿದೆ. ವೇದ ಇರುವುದೇ ಬಾಹ್ಯದ ಪ್ರಾಕೃತಿಕ ಮತ್ತು ಆಂತರಿಕ ಆಧ್ಯಾತ್ಮಿಕ ಶಕ್ತಿಗಳನ್ನು ಜಾಗೃತಗೊಳಿಸುವುದಕ್ಕೆ. ಹೀಗೆ ‘ಧೀಮಂತ’ನಾದ ವ್ಯಕ್ತಿಯನ್ನೇ ‘ದ್ವಿಜ’ (2ನೇ ಬಾರಿ ಹುಟ್ಟಿದವನು) ಎಂದು ಕರೆಯುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯೇ, ‘ನನ್ನ ಕಿವಿ, ಕಣ್ಣು ಅಸಾಧಾರಣ ಶಕ್ತಿಯನ್ನು ಹೊಂದಲಿ, ನನ್ನ ಶರೀರದ ಒಂದೊಂದು ಅಂಗವೂ ಅಸಾಧಾರಣ ಶಕ್ತಿಯನ್ನು ಹೊಂದಲಿ ಅರ್ಥಾತ್ ಸೂಕ್ಷ್ಮಗಳನ್ನು ಗ್ರಹಿಸುವ ‘ಕ್ರಾಂತದರ್ಶಿ’ ನಾನಾಗಲಿ. ಲೌಕಿಕ ಪ್ರಪಂಚದ ವಿಜ್ಞಾನಿಯೋ, ಆಂತರಿಕ ಪ್ರಪಂಚದ (ಜಗ ಬೆಳಗಿದ) ಮಹಾತ್ಮನೋ ನಾನಾಗಲಿ’ ಎಂದು.
‘ಇಲ್ಲಿಯವರೆಗೆ ಯಾವ ರೀತಿಯಲ್ಲಾದರೂ ನಾನು ಬದುಕಿರಬಹುದು. ಸೂರ್ಯ ತನ್ನ ಕಕ್ಷೆಯನ್ನು ಬದಲಿಸಿದ ದಿನವೇ ನಾನೂ ನನ್ನ ಕಕ್ಷೆಯನ್ನು ಬದಲಿಸಿಕೊಂಡು ದ್ವಿಜತ್ವವನ್ನು, ಮಹಾನ್ ಧೀ ಶಕ್ತಿಯನ್ನು ಸಾಧಿಸಿ ಕ್ರಾಂತದರ್ಶಿಯಾಗಲಿ, ಮರುಜನ್ಮವನ್ನು ಪಡೆಯುವಂತಾಗಲಿ’ ಎಂಬ ಸನಾತನ ಸಂಸ್ಕೃತಿಯ ಸ್ಪಷ್ಟ ಕರೆಗೆ ಓಗೊಡೋಣ ಮತ್ತು ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ಸಾಗಲು ಕಟಿಬದ್ಧರಾಗೋಣ; ತನ್ಮೂಲಕ ಸಂಕ್ರಾತಿಯನ್ನು ಅರ್ಥವತ್ತಾದ ರೀತಿಯಲ್ಲಿ ಆಚರಿಸೋಣ!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)